
ಅಜೀಜ ಅಹ್ಮದ ಬಳಗಾನೂರ
ಹುಬ್ಬಳ್ಳಿ : ಗಣರಾಜ್ಯೋತ್ಸವಕ್ಕೆ (ಜ.26) ದಿನಗಣನೆ ಆರಂಭವಾಗಿದೆ. ಆದರೆ, ಶುದ್ಧ ಖಾದಿಯಿಂದ ಸಿದ್ಧಗೊಂಡ ರಾಷ್ಟ್ರಧ್ವಜಗಳಿಗೆ ಬೇಡಿಕೆ ಗಣನೀಯವಾಗಿ ಇಳಿಮುಖವಾಗಿ ಅವುಗಳ ತಯಾರಕರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಕೆಲಸವಿಲ್ಲದೇ ಕೈಚೀಲ (ಬ್ಯಾಗ್) ಹೊಲೆಯುವ ಕೆಲಸದ ಮೊರೆ ಹೋಗಿದ್ದಾರೆ.
ಒಂದೆಡೆ ರಾಷ್ಟ್ರಧ್ವಜಕ್ಕೆ ಬೇಡಿಕೆ ಕುಸಿತ, ಮತ್ತೊಂದೆಡೆ ರಾಜ್ಯ ಸರ್ಕಾರ ನೇಕಾರರ, ನೂಲುವವರ ಎಂಡಿಎ (ಮಾರುಕಟ್ಟೆ ಅಭಿವೃದ್ಧಿ ನೆರವು), ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹಿಂದೆಲ್ಲಾ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಆಚರಣೆಯ ಒಂದು ತಿಂಗಳ ಮೊದಲೇ ರಾಷ್ಟ್ರಧ್ವಜ ತಯಾರಕರಿಗೆ ಬಿಡುವಿಲ್ಲದ ಕೆಲಸವಿರುತ್ತಿತ್ತು. ಜತೆಗೆ, ಹೆಚ್ಚಿನ ಅವಧಿಯ ಕೆಲಸ (ಓಟಿ) ನೀಡಲಾಗುತ್ತಿತ್ತು. ಆದರೆ, ಈಗ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ಮಾರಾಟವೇ ಇಲ್ಲದಂತಾಗಿದೆ.
2022ರ ಆಜಾದಿ ಕಾ ಅಮೃತ್ ಮಹೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ತ್ರಿವರ್ಣ ಧ್ವಜಗಳ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಖಾದಿ ಧ್ವಜಗಳ ಬೇಡಿಕೆ ಕುಸಿದಿದೆ. ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆ ಕಳೆದ ವರ್ಷ ₹2.5 ಕೋಟಿ ಮೌಲ್ಯದ ವಿವಿಧ ಗಾತ್ರದ ಧ್ವಜಗಳನ್ನು ತಯಾರಿಸಿತ್ತು. ಆದರೆ, ಇದರಲ್ಲಿ ಮಾರಾಟವಾಗಿದ್ದು ಕೇವಲ ₹54 ಲಕ್ಷ ಮೌಲ್ಯದ ಧ್ವಜಗಳು. ಇನ್ನೂ₹2 ಕೋಟಿ ಮೌಲ್ಯದ ರಾಷ್ಟ್ರಧ್ವಜಗಳು ಹಾಗೆ ಉಳಿದಿವೆ.
ಅಲ್ಲದೆ, ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಡಿಸೆಂಬರ್ ಆರಂಭದ ವೇಳೆಗೆ ರಾಜ್ಯ, ಅನ್ಯರಾಜ್ಯಗಳಿಂದ ಬೃಹತ್ ಪ್ರಮಾಣದ ಆರ್ಡರ್‌ಗಳು ಬರುತ್ತಿದ್ದವು. ಆದರೆ, ಈ ವರ್ಷ ಗಣರಾಜ್ಯೋತ್ಸವ ದಿನ ಹತ್ತಿರ ಬಂದರೂ ಬೇಡಿಕೆ ಬಂದಿಲ್ಲ.
ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಡಿ ಸುಮಾರು 2 ಸಾವಿರ ಕುಶಲಕರ್ಮಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಬೆಂಗೇರಿಯ ಖಾದಿ ಗ್ರಾಮದ್ಯೋಗ ಸಂಸ್ಥೆಯಲ್ಲಿ 30ಕ್ಕೂ ಅಧಿಕ ಮಹಿಳೆಯರು ರಾಷ್ಟ್ರಧ್ವಜ ತಯಾರಿಸುತ್ತಿದ್ದರು. ಗಣರಾಜ್ಯೋತ್ಸವ ಸಮಯದಲ್ಲಿ ಹೆಚ್ಚಿನ ಅವಧಿ (ಓಟಿ) ಕೆಲಸ ಮಾಡುತ್ತಿದ್ದರು. ಆದರೆ, ಈಗ ಬೇಡಿಕೆಯಿಲ್ಲದಿರುವುದರಿಂದ 3-4 ಕುಶಲಕರ್ಮಿಗಳು ಮಾತ್ರ ರಾಷ್ಟ್ರಧ್ವಜ ತಯಾರಿಸುತ್ತಿದ್ದಾರೆ. 4-5 ಜನ ಕೈಚೀಲ (ಬ್ಯಾಗ್) ತಯಾರಿಕೆಯಲ್ಲಿ ನಿರತರಾಗಿದ್ದರೆ, ಇನ್ನುಳಿದವರು ಈ ಕಾರ್ಯ ಕೈಬಿಟ್ಟು ಗಾರೆ, ಕೃಷಿ ಕೆಲಸಗಳಿಗೆ ತೆರಳುತ್ತಿದ್ದಾರೆ.
ಸರ್ಕಾರದಿಂದ ₹130 ಕೋಟಿ ಎಂಡಿಎ ಬಾಕಿ:
ರಾಜ್ಯ ಸರ್ಕಾರವು ಕಳೆದ 5 ವರ್ಷಗಳಿಂದ ರಾಜ್ಯದಲ್ಲಿರುವ 50000 ನೇಕಾರರ, ನೂಲುವವರ ₹130 ಕೋಟಿ ಎಂಡಿಎ (ಮಾರುಕಟ್ಟೆ ಅಭಿವೃದ್ಧಿ ನೆರವು) ಹಾಗೂ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ್ದೇ ₹2.70 ಕೋಟಿ ಬರಬೇಕಿದೆ. ಈ ಕುರಿತು ಸಂಬಂಧಿಸಿದ ಸಚಿವರಿಗೆ, ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರೂ ಈವರೆಗೂ ಬಿಡುಗಡೆಗೊಳಿಸಿಲ್ಲ. ಇದರಿಂದಾಗಿ ನೇಕಾರರು, ನೂಲುವವರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.