ಕಾಶಿ ವಿಶ್ವನಾಥನ ಮಂದಿರ ಸರ್ವೆ ಮಾಡಲು ನ್ಯಾಯಾಲಯದ ಆದೇಶ ಬಂದಿದೆ. ಕಾಶಿ ವಿಶ್ವನಾಥನ ಮಂದಿರದ ಜೊತೆಗೆ ಕಟ್ಟಿರುವ ಮಸೀದಿ ಇಂದಲ್ಲ ನಾಳೆ ಧ್ವಂಸವಾಗುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ(ಡಿ.14): ಹಿಂದೂಸ್ತಾನಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಭಾರತೀಯ ಸಂಸ್ಕೃತಿಗಳಿಗೆ ಒಂದೊಂದಾಗಿ ಗೌರವ ಬರುತ್ತಿದೆ. ಜನವರಿ 25ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ವಿದೇಶಿ ಬಾಬರ್ ನಿಂದ ಧ್ವಂಸಕ್ಕೊಳಗಾದ 500 ವರ್ಷದ ಹಳೆಯ ರಾಮಮಂದಿರ ಕಾನೂನು ಬದ್ಧವಾಗಿ ನಿರ್ಮಾಣವಾಗುತ್ತಿದೆ. ಇದು ಇಡೀ ಪ್ರಪಂಚದ ಹಾಗೂ ದೇಶದ ಹಿಂದೂಗಳಿಗೆ ಸಂತೋಷದ ವಿಚಾರವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು, ಕಾಶಿ ವಿಶ್ವನಾಥನ ಮಂದಿರ ಸರ್ವೆ ಮಾಡಲು ನ್ಯಾಯಾಲಯದ ಆದೇಶ ಬಂದಿದೆ. ಕಾಶಿ ವಿಶ್ವನಾಥನ ಮಂದಿರದ ಜೊತೆಗೆ ಕಟ್ಟಿರುವ ಮಸೀದಿ ಇಂದಲ್ಲ ನಾಳೆ ಧ್ವಂಸವಾಗುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಅಧಿವೇಶನ ವಿಫಲಕ್ಕೆ ವಿಪಕ್ಷ ಬಿಜೆಪಿ ಕಾರಣ: ಆಯನೂರು ಮಂಜುನಾಥ್
ಮಧುರಾದ ಶ್ರೀ ಕೃಷ್ಣ ಜನ್ಮಸ್ಥಾನ ಸರ್ವೆ ನಡೆಸಲು ಕೋರ್ಟ್ ಆದೇಶ ಪ್ರಪಂಚ ಮತ್ತು ದೇಶದ ಹಿಂದುಗಳಿಗೆ ಸಂತಸ ತಂದಿದೆ. ಮಥುರಾ, ಅಯೋಧ್ಯೆ, ಕಾಶಿ ಇವು ಹಿಂದೂಗಳಿಗೆ ಶ್ರದ್ಧಾ ಕೇಂದ್ರಗಳು. ಜಾತಿ ಧರ್ಮ ಮೀರಿದ ಈ ಶ್ರದ್ಧಾ ಕೇಂದ್ರಗಳನ್ನು ಮುಸಲ್ಮಾನರು ಧ್ವಂಸ ಮಾಡಿದ್ದರು. ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಬಾಬರ್ ಕಟ್ಟಿದ ಮಸೀದಿ ಧ್ವಂಸವಾಗಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾಶಿ ಮತ್ತು ಮಥುರಾದಲ್ಲಿ ಗುಲಾಮಗಿರಿ ಸಂಕೇತದ ಎರಡು ಮಸೀದಿಗಳು ಸ್ವಲ್ಪ ಹಾಗೆ ಉಳಿದಿದೆ. ಈ ಎರಡು ಜಾಗಗಳಲ್ಲಿ ಸರ್ವೆ ಮಾಡಲು ಬಂದಿರುವ ಕೋರ್ಟ್ ಆದೇಶವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇಡೀ ಹಿಂದೂ ಸಮಾಜ ಸ್ವಾಗತ ಮಾಡುತ್ತದೆ. ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿ ಕಟ್ಟಿದ್ದು ಸರಿಯಲ್ಲ ಎಂದು ಭಾವಿಸುವ ಪ್ರಪಂಚದ ಎಲ್ಲಾ ಮುಸ್ಲಿಮರು ಇದನ್ನು ಸ್ವಾಗತ ಮಾಡುತ್ತಾರೆ. ಜಮ್ಮು ಕಾಶ್ಮೀರದ ಆರ್ಟಿಕಲ್ 370 ತೆಗೆದು ಹಾಕಿರುವ ಕೇಂದ್ರ ಸರ್ಕಾರದ ನಿರ್ಧಾರ ಕೋರ್ಟ್ ಮಾನ್ಯ ಮಾಡಿದೆ. ಪಾಕಿಸ್ತಾನದಲ್ಲಿ ಅನ್ನ ನೀರು ಇಲ್ಲದೆ ಜನ ನಾವು ಭಾರತಕ್ಕೆ ಸೇರುತ್ತೇವೆ ಎನ್ನುತ್ತಿದ್ದಾರೆ. ಪಾಕಿಸ್ತಾನದಲ್ಲೂ ಪ್ರಧಾನಿ ಮೋದಿ ಆಡಳಿತ ಬೇಕೆಂದು ಜನತೆ ಬಯಸುತ್ತಿದ್ದಾರೆ. ಇಂದಲ್ಲ ನಾಳೆ ಪಾಕಿಸ್ತಾನವು ಸೇರಿದಂತೆ ಅಖಂಡ ಭಾರತ ಆಗುತ್ತದೆ ಎಂಬ ನಂಬಿಕೆ ಇದೆ. ಪಾಕಿಸ್ತಾನದಲ್ಲಿ ಮುಸ್ಲಿಮರ ಆಡಳಿತ ನಡೆಯುತ್ತಿದ್ದರೂ ಅನ್ನ ನೀರು ಕೊಡಲು ಆಗುತ್ತಿಲ್ಲ. ದೇಶಕ್ಕೆ ಸ್ವತಂತ್ರ ಬಂದ ನಂತರ ಭಾರತ ಒಂದರಲ್ಲಿ ಸ್ವಾವಲಂಬಿ ಆಗಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ವಿಶ್ವದಲ್ಲೇ ಭಾರತ ಮೊದಲಿನ ಸ್ಥಾನಕ್ಕೆ ಹೋಗುತ್ತಿದೆ ಎಂದು ತಿಳಿಸಿದ್ದಾರೆ.