ಕೃಷ್ಣೆಯ ತೀರದಲ್ಲಿ ಮಳೆಗಾಗಿ ತಪಜಪ ಆರಂಭಗೊಂಡಿದೆ. ಜನ ಜೀವಜಲಕ್ಕಾಗಿ ಪೂಜೆ, ಪುರಸ್ಕಾರಗಳು ನಡೆಯುತ್ತಿವೆ. ಜನರು ಮೇಘವೃಷ್ಟಿ ಬೇಗ ಸೃಷ್ಟಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮಳೆಗಾಗಿ ಗುರ್ಜಿ ಪೂಜೆ ಶುರುವಾಗಿದೆ. ಜನಪದ ಹಾಡಿನ ಸದ್ದು ಮೊಳಗುತ್ತಲಿದೆ.
ಆಲಮಟ್ಟಿ(ಜೂ.10): ಮುಂಗಾರು ಮಳೆ ಮುನಿಸಿಕೊಂಡಂತಾಗಿದೆ. ಭೂಒಡಲು ಬಿಸಿಲಿನ ಝಳಕ್ಕೆ ಕಾಯ್ದ ಕೆಂಡಂತಾಗಿದೆ. ನದಿಪಾತ್ರಗಳು ಬರಿದಾಗಿವೆ, ಹಳ್ಳ-ಕೊಳ್ಳ, ಕೆರೆಗಳು ಒಣಗಿಹೋಗಿವೆ. ಜನ, ಜಾನುವಾರುಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಮಳೆಗಾಗಿ ಕಾದಿರುವ ಕಣ್ಗಳು ಇದೀಗ ಬಾನಂಗಳದತ್ತ ನೆಟ್ಟಿವೆ.ಆ ಕಾಶದಲ್ಲಿ ಚಲಿಸುವ ಕಪ್ಪುಮೋಡಗಳ ಸಂಚಲನದಿಂದ ಮಳೆ ಧರೆಗಿಳಿಯಬಹು ಎಂಬ ನಿರೀಕ್ಷಿತ ಆಶಾಭಾವ ಹುಸಿಯಾಗುತ್ತಲಿದೆ.
ಈ ಹಿನ್ನೆಲೆಯಲ್ಲಿ ಕೃಷ್ಣೆಯ ತೀರದಲ್ಲಿ ಮಳೆಗಾಗಿ ತಪಜಪ ಆರಂಭಗೊಂಡಿದೆ. ಜನ ಜೀವಜಲಕ್ಕಾಗಿ ಪೂಜೆ, ಪುರಸ್ಕಾರಗಳು ನಡೆಯುತ್ತಿವೆ. ಜನರು ಮೇಘವೃಷ್ಟಿ ಬೇಗ ಸೃಷ್ಟಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮಳೆಗಾಗಿ ಗುರ್ಜಿ ಪೂಜೆ ಶುರುವಾಗಿದೆ. ಜನಪದ ಹಾಡಿನ ಸದ್ದು ಮೊಳಗುತ್ತಲಿದೆ. ಕೃಷ್ಣೆಯ ತಟದಲ್ಲಿರುವ ಅರಳದಿನ್ನಿ ಗ್ರಾಮದಲ್ಲಿ ಇಂಥದೊಂದು ವಿಶೇಷ ದೃಶ್ಯ ಗುರುವಾರ ಕಂಡುಬಂತು.
ಎಂಎ ಇಂಗ್ಲಿಷ್ ಅಂತಿಮ ಪರೀಕ್ಷೆ ಬರೆದ 81 ವರ್ಷದ ಹಿರಿಯಜ್ಜ: ಸಾಧನೆಗೆ ಪತ್ನಿಯೇ ಪ್ರೇರಣೆ
ಆಲಮಟ್ಟಿ ಸಮೀಪದ ಅರಳದಿನ್ನಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮ ಪಂಚಾಯ್ತಿ ಸದಸ್ಯೆ ಚಂದ್ರವ್ವ ಧರ್ಮರ ಗುರ್ಜಿ ಹೊತ್ತು ಮನೆಮನೆಗೆ ಸಂಚರಿಸಿ ಗುರುವಾರ ಪೂಜೆ ಸಲ್ಲಿಸಲಾಯಿತು. ಗುರ್ಜಿ ಆಗಲು ಎಲ್ಲರೂ ಹಿಂದೇಟು ಹಾಕಿದಾಗ, ಸ್ವತಃ ಗ್ರಾಮ ಪಂಚಾಯ್ತಿ ಸದಸ್ಯೆ ಚಂದ್ರವ್ವ ಧರ್ಮರ ಮುಂದೆ ಬಂದು ಗುರ್ಜಿ ಹೊತ್ತು ಪೂಜಿಸಿದ್ದು ವಿಶೇಷವಾಗಿತ್ತು.
ರೊಟ್ಟಿಯ ಹಂಚನ್ನು ತಲೆ ಮೇಲೆ ಡಬ್ಬು ಹಾಕಿ, ಅದರಲ್ಲಿ ಅರಲು (ಕಲಿಸಿದ ಹಳ್ಳದ, ನದಿಯ ಜಿಗುಟಾದ ಮಣ್ಣು) ತಂದು ಉಂಡೆ ಆಕಾರದಲ್ಲಿ ಗುರ್ಜಿ ರೂಪಿಸಲಾಗುತ್ತದೆ. ಅದಕ್ಕೆ ಹುಲ್ಲಿನಿಂದ ಸಿಂಗರಿಸಲಾಗುತ್ತದೆ. ಈ ಹಂಚನ್ನು ಗುರ್ಜಿಯಾದವರು ತಲೆ ಮೇಲೆ ಹೊತ್ತುಕೊಂಡು ಮನೆ ಮನೆ ಸಂಚರಿಸುತ್ತಾರೆ. ಪ್ರತಿ ಮನೆಗೆ ಹೋದಾಗ, ಮನೆಯವರು ಮನೆಯಲ್ಲಿನ ನೀರನ್ನು ಗುರ್ಜಿಯ ತಲೆಯ ಮೇಲೆ ಹಾಕುತ್ತಾರೆ. ನೀರು ಹಾಕುವಾಗ ಪ್ರದಕ್ಷಿಣೆ ಹಾಕುವಾಗ, ಅಲ್ಲಿ ಸೇರಿರುವ ಮಹಿಳೆಯರು ಗುರ್ಜಿ ಹಾಡು ಹಾಡುವುದು ಪ್ರತೀತಿ.
ವಿಜಯಪುರ: ಆಲಮಟ್ಟಿ ಜಲಾಶಯದಲ್ಲಿ ಸದ್ಯಕ್ಕಿಲ್ಲ ನೀರಿನ ತೊಂದರೆ
ಗುರ್ಜಿ, ಗೊರಜಿ ಎಲ್ಲಾಡಿ ಬಂದೆ, ಹಳ್ಳ-ಕೊಳ್ಳ ತೇಲಾಡಿ ಬಂದೆ, ಬಾರೋ ಮಳೆಯೇ, ಕಪಾಟ ಮಳೆಯೇ, ಸುಣ್ಣ ಕೊಡತೀನಿ ಸುರಿಯೋ ಮಳೆಯೇ, ಬಣ್ಣ ಕೊಡತಿನಿ ಸುರಿಯೋ ಮಳೆಯೇ, ಬಾರೋ ಮಳೆರಾಯ.. ಎಂಬ ಹಾಡಿನ ಮೊರೆತ ಅರಳದಿನ್ನಿ ಗ್ರಾಮದಲ್ಲಿ ಕೇಳಿಬಂತು.
ಪ್ರತಿ ಮನೆಯವರು ನೀರು ಹಾಕುವುದರ ಜತೆ ಅಕ್ಕಿ, ಬೆಲ್ಲ, ದವಸ ಧಾನ್ಯಗಳನ್ನು ನೀಡುತ್ತಾರೆ. ಇದರಿಂದ ರಾತ್ರಿ ಅಡುಗೆ ತಯಾರಿಸಿ ಊರ ದೇವರಿಗೆ ನೈವೇದ್ಯೆ ಅರ್ಪಿಸಿ, ಮಳಗಾಗಿ ಪ್ರಾರ್ಥಿಸಿ, ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಇದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ. ಗುರ್ಜಿ ಹೊತ್ತ ಚಂದ್ರವ್ವ ಧರ್ಮರ ಜೊತೆ ರೇಣುಕಾ ಡಮನಾಳ, ಯಲ್ಲವ್ವ ಮಾದರ, ಲಲಿತಾ ಜಾಧವ, ಮುದಕವ್ವ ಘಟ್ನೂರ, ಶಿವಲಿಂಗವ್ವ ಭಾವಿಕಟ್ಟಿಮತ್ತಿತರರು ಗ್ರಾಮದಲ್ಲಿ ಸಂಚರಿಸಿದರು.