ಕೊರೋನಾ 2ನೇ ಅಲೆಯ ನಿಯಂತ್ರಣಕ್ಕೆ ಕೇವಲ ಲಾಕ್‌ಡೌನ್ ಪರಿಹಾರವಲ್ಲ, ಜನರೇ ಇದರ ಸ್ವಯಂ ನಿಯಂತ್ರಣಕ್ಕೆ ಜನತಾ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ (ಏ.15): ನಿರೀಕ್ಷೆಗೂ ಮೀರಿ ಹಬ್ಬುತ್ತಿರುವ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕೆ ಕೇವಲ ಲಾಕ್‌ಡೌನ್ ಪರಿಹಾರವಲ್ಲ, ಜನರೇ ಇದರ ಸ್ವಯಂ ನಿಯಂತ್ರಣಕ್ಕೆ ಜನತಾ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಕದ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಮಿತಿಮೀರಿ ವರದಿಯಾಗುತ್ತಿವೆ. ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಕೊರೋನಾ ಎರಡನೇ ಅಲೆಯನ್ನು ನಿರ್ಲಕ್ಷಿಸಬಾರದು. ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಶಕ್ತಿಮೀರಿ ಕೆಲಸ ಮಾಡುತ್ತಿದೆ. ಆದರೆ ಜನರ ಸಹಕಾರ ಬಹಳ ಅಗತ್ಯವೆಂದರು.
ಕೊರೋನಾ ಸಾವಿನ ಪ್ರಮಾಣ ಹೆಚ್ಚಳ: ಲಾಕ್‌ಡೌನ್ ಬಿಟ್ಟು ಕಠಿಣ ಕ್ರಮ, ಸಚಿವ ಸುಧಾಕರ್ .
ಬರುವ ಮೇ ಅಂತ್ಯದವರೆಗೂ ಕೊರೋನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಕೂಡ ವೈಜ್ಞಾನಿಕವಾದ ವರದಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ನಾವು ತಜ್ಞರ ವರದಿಗೆ ಗೌರವ ಕೊಡಬೇಕಿದೆ ಎಂದರು.
ತಜ್ಞರ ವರದಿ ಪ್ರಕಾರ ನಾವು ನಡೆದುಕೊಳ್ಳದೇ ಹೋದರೆ ತಪ್ಪಿತಸ್ಥರು ನಾವು ಆಗುತ್ತೇವೆ. ಕೊರೋನಾ ನಿಯಂತ್ರಣಕ್ಕೆ ಏನೆಲ್ಲಾ ನಾವು ನಡವಳಿಕೆಗಳನ್ನು ಅನುಸರಿಸಬೇಕು. ಅವನ್ನು ಚಾಚೂ ತಪ್ಪದೇ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಬೇಕೆಂದ ಅವರು, ಮದುವೆಗಳನ್ನು ಅತ್ಯಂತ ಸರಳವಾಗಿ ಮಾಡುವಂತೆ ಸಲಹೆ ನೀಡಿದರು.