ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ, ವಿಶ್ವಾಸವಿಲ್ಲ. ವಾಮ ಮಾರ್ಗದಿಂದ ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿದೆ| ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲ ವರ್ಗದ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲ| ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ನೈತಿಕ ಬೆಂಬಲ| ಬಿಜೆಪಿ ಸರ್ಕಾರಕ್ಕೆ ಜನತೆ ಶಾಪ ಹಾಕುತ್ತಿದ್ದಾರೆ: ಬಸವರಾಜ ರಾಯರಡ್ಡಿ|
ಯಲಬುರ್ಗಾ(ಏ.15): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರದಲ್ಲಿ ಮುಳುಗಿದ್ದು ರಾಜ್ಯದ ಜನತೆ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿದಂತೆ ಯಾವ ಸಚಿವರಿಗೂ ಆಡಳಿತ ನಡೆಸುವ ಅನುಭವ ಇಲ್ಲ. ಹೀಗಾಗಿ ರೈತರು, ನೌಕರರು, ಜನಸಾಮಾನ್ಯರು ಸರ್ಕಾರದ ಕಾರ್ಯವೈಖರಿಗೆ ಬೇಸತ್ತು ಹೋಗಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ, ವಿಶ್ವಾಸವಿಲ್ಲ. ವಾಮ ಮಾರ್ಗದಿಂದ ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲ ವರ್ಗದ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಾರಿಗೆ ನೌಕರರು ಒಂಬತ್ತು ದಿನಗಳಿಂದ ಮುಷ್ಕರ ನಡೆಸುತ್ತಿದ್ದು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಸರ್ಕಾರ ಅವರ ಜೊತೆ ಮಾತುಕತೆಗೆ ಮುಂದಾಗುತ್ತಿಲ್ಲ. ಬೇಡಿಕೆ ಈಡೇರಿಸದೆ ಅವರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ. ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ನೈತಿಕ ಬೆಂಬಲ ನೀಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಸಾರಿಗೆ ನೌಕರರು ರಾಯರಡ್ಡಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವ ದಿಸೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿದರು.
ರಂಗೇರಿದ ಮಸ್ಕಿ ಬೈ ಎಲೆಕ್ಷನ್ ಕಾವು: ವಿಜಯೇಂದ್ರ ವಿಶ್ವಾಸದ ಮಾತು!
ಕಾಂಗ್ರೆಸ್ ಗೆಲವು ಖಚಿತ:
2 ವಿಧಾನಸಭೆ, 1 ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹಣ, ಹೆಂಡ ಹಂಚುವ ಮೂಲಕ ಮತದಾರರನ್ನು ದಾರಿ ತಪ್ಪಿಸುತ್ತಿದೆ. ಆದರೆ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಈ 3 ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ತಾಲೂಕಿನ ಹಿರೇಮ್ಯಾಗೇರಿ ಹಾಗೂ ಸಂಕನೂರ ಗ್ರಾಪಂ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ರಾಯರಡ್ಡಿ ಸನ್ಮಾನಿಸಿದರು. ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಬಿ.ಎಂ. ಶಿರೂರ, ಡಾ. ಶರಣಪ್ಪ ಕೊಪ್ಪಳ, ರಾಮಣ್ಣ ಸಾಲಬಾವಿ, ಎಂ.ಎಫ್. ನದಾಫ್, ಸಂಗಣ್ಣ ಟೆಂಗಿನಕಾಯಿ, ಬಸವರಾಜ ಪೂಜಾರ, ರೇವಣೆಪ್ಪ ಹಿರೇಕುರಬರ, ಮಹಾಂತೇಶ ಗಾಣಿಗೇರ ಇದ್ದರು.