ಅರಣ್ಯದಲ್ಲಿ ರಾಶಿ ರಾಶಿ ಕೋಳಿ ಮರಿಗಳು! | ಮನೆಗಳಿಗೆ ಪುಕ್ಕಟೆಯಾಗಿ ಹೊತ್ತು ಹೊಯ್ದ ಸಾರ್ವಜನಿಕರು
ಚಿಕ್ಕಬಳ್ಳಾಪುರ(ಜ.10): ತಾಲೂಕಿನ ಕಣಿತಹಳ್ಳಿಯ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ರಾಶಿ ರಾಶಿ ಫಾರಂ ಕೋಳಿ ಮರಿಗಳು ಪತ್ತೆಯಾಗಿದ್ದು, ಮರಿಗಳನ್ನು ಸುತ್ತಲಿನ ಗ್ರಾಮಸ್ಥರು ಮನೆಗಳಿಗೆ ಹೊತ್ತೋಯ್ಯಲು ಪೈಪೋಟಿಗೆ ಇಳಿದ ಘಟನೆ ಶನಿವಾರ ನಡೆದಿದೆ.
ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆದಾರರು ಹಾಗೂ ಕಂಪನಿಗಳ ಮುಖ್ಯಸ್ಥರೊಂದಿಗೆ ಕಮಿಷನ್ ಸೇರಿದಂತೆ ತೂಕದ ವಿಚಾರದಲ್ಲಿ ಒಮ್ಮತ ಮೂಡದೇ ಮುಸುಕಿನ ಗುದ್ದಾಟ ನಡೆದು ಇತ್ತೀಚೆಗೆ ಇಬ್ಬರ ನಡುವಿನ ಜಟಾಪಟಿಯಿಂದಾಗಿ ಕೋಳಿ ಸಾಕಾಣಿಕೆದಾರರು ಫಾರಂ ಕೋಳಿಗಳ ಮರಿಗಳ ಸಾಕಾಣಿಕೆಗೆ ಬಹಿಷ್ಕಾರ ಹಾಕಿದ್ದಾರೆ.
ಸಾಕಣೆದಾರರು- ಕಂಪನಿ ಕಲಹ
ಈ ನಡುವೆ ಸಾಕಾಣಿಕೆದಾರರ ಷರತ್ತುಗಳ ನಡುವೆ ಕೆಲ ಕಂಪನಿಗಳು ಮರಿಗಳನ್ನು ಫಾರಂಗಳಿಗೆ ಸಾಗಾಟ ಮಾಡಲು ಮುಂದಾದ ಸಂದರ್ಭದಲ್ಲಿ ರೈತರು ಮರಿಗಳಿದ್ದ ವಾಹನಗಳನ್ನು ಅಡ್ಡಗಟ್ಟಿಅವುಗಳನ್ನು ನಿರ್ಜನ ಪ್ರದೇಶಗಳಲ್ಲಿ ಬಿಸಾಡಿ ತಮ್ಮ ಆಕ್ರೋಶ ಹೊರಹಾಕುತಿದ್ದಾರೆ ಎನ್ನಲಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ತಾಲೂಕಿನ ಕಣಿತಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಹೋಗಿದ್ದ ಫಾರಂ ಕೋಳಿ ಮರಿಗಳನ್ನು ಪಡೆಯಲು ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು, ವೃದ್ಧರು, ಮಹಿಳೆಯರು, ಯುವಕರು ಹಾದಿಯಾಗಿ ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು.
ಮಂಗ್ಳೂರಲ್ಲಿ ಬೋಟ್ ದುರಸ್ತಿಯ ಅಂಡರ್ ವಾಟರ್ ಗ್ಯಾರೇಜ್!
ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೋಳಿ ಸಾಕಾಣಿಕೆದಾರರು ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಬಹುರಾಷ್ಟ್ರೀಯ ಕೋಳಿ ಫಾರಂಗಳು ರೈತರಿಗೆ ಮಾಡುತ್ತಿರುವ ವಂಚನೆ, ಮೋಸ ತಪ್ಪಿಸುವಂತೆ ಅಳಲು ತೋಡಿಕೊಂಡು ಬೆಂಗಳೂರಿನಲ್ಲಿ ಪ್ರತಿಭಟನೆ ಕೂಡ ನಡೆಸಿದ್ದರು.
ಆದರೆ ರೈತರ ಬೇಡಿಕೆಗಳು ಈಡೇರದ ಕಾರಣ ಕಂಪನಿಗಳಿಗೆ ಸೇರಿದ ಕೋಳಿ ಮರಿಗಳನ್ನು ಅರಣ್ಯದಲ್ಲಿ ಬಿಡುವ ಮೂಲಕ ರೈತರು ಪರೋಕ್ಷವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.