
ಕೊಪ್ಪಳ(ಜು.14): ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟವಾಗುತ್ತಿದೆ. ಇನ್ನೇನು ಲಾಕ್‌ಡೌನ್ ಆಗುತ್ತದೆ ಎನ್ನುವ ಸುದ್ದಿ ಹರಡಿದ್ದರಿಂದ ಕೊಪ್ಪಳ ಮಾರುಕಟ್ಟೆಯಲ್ಲಿ ಸೋಮವಾರ ಜನಜಾತ್ರೆ. ಹಳ್ಳಿಯಿಂದ ಎದ್ದೋಬಿದ್ದೋ ಮಾರುಕಟ್ಟೆಗೆ ಆಗಮಿಸಿದ ಜನರು ಮನೆಯ ಸಂತೆ ಮಾಡುವುದು ಸೇರಿದಂತೆ ತುರ್ತು ಅಗತ್ಯದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮುಗಿಬಿದ್ದಿರುವುದು ಕಂಡು ಬಂದಿದೆ.
ಕೊರೋನಾ ವೇಳೆಯಲ್ಲಿ ಮಾರುಕಟ್ಟೆಯಲ್ಲಿ ಜನರಸಂದಣಿ ತೀರಾ ಸೀಮಿತವಾಗಿತ್ತು. ತುರ್ತು ಅಗತ್ಯವಿದ್ದರೆ ಅಷ್ಟೇ ಜನರು ಆಗಮಿಸಿ, ವ್ಯಾಪಾರ, ವಹಿವಾಟು ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸ್ಫೋಟದ ಹಿನ್ನೆಲೆಯಲ್ಲಿ ಜನರು ಲಾಕ್‌ಡೌನ್ ಆಗುತ್ತದೆ ಎಂದು ಮುಗಿಬಿದ್ದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.
ಜನಜಾತ್ರೆ
ಜಿಲ್ಲಾ ಕೇಂದ್ರ ಕೊಪ್ಪಳದ ಹೃದಯ ಭಾಗದ ರಸ್ತೆ ಹಾಗೂ ಮಾರುಕಟ್ಟೆಯ ರಸ್ತೆಯಾಗಿರುವ ಜವಾಹರ ರಸ್ತೆ ಜನಜಾತ್ರೆಯಿಂದ ಇರುವುದು ಕಂಡು ಬಂದಿತು. ವಾಹನಗಳ ದಟ್ಟಣೆ, ಜನರ ಓಡಾಟ ಎಲ್ಲವೂ ಜಾತ್ರೆಯನ್ನು ನೆನಪು ಮಾಡುವಷ್ಟು ಜನಸಂದಣಿ ಇರುವುದು ಕಂಡು ಬಂದಿತು. ಹಳ್ಳಿಯಿಂದ ಬರುತ್ತಿದ್ದ ಬಸ್ಸುಗಳಿಗೆ ಹಾಗೂ ಕ್ಯಾಬ್‌ಗಳಿಗೆ ಜನರೇ ಇರುತ್ತಿರಲಿಲ್ಲ. ಆದರೆ, ಸೋಮವಾರ ಮಾತ್ರ ಎಲ್ಲ ವಾಹನಗಳಲ್ಲಿಯೂ ಜನರು ಫುಲ್ ಇದ್ದರು. ಇದರಿಂದ ಸಹಜವಾಗಿಯೇ ವಾಹನಗಳ ಸಂಖ್ಯೆಯೂ ಹೆಚ್ಚಳವಾಗಿ ಮಾರುಕಟ್ಟೆಮತ್ತು ಸಂಚಾರ ಸಾಮಾನ್ಯ ದಿನಗಳನ್ನು ಮೀರುವಂತೆ ಇರುವುದು ಕಂಡು ಬಂದಿತು.
ಕೊಪ್ಪಳದಲ್ಲಿ ಕೋವಿಡ್ ಮರಣ ಮೃದಂಗ: ಇಬ್ಬರ ಸಾವು
ಬ್ಯಾಂಕಿಗೂ ಮುಗಿಬಿದ್ದ ಜನ
ಇನ್ನು ಲಾಕ್‌ಡೌನ್ ಆದರೆ ಎಟಿಎಮ್‌ನಲ್ಲಿ ಕ್ಯಾಶ್ ಇರುತ್ತದೆಯೋ ಇಲ್ಲವೋ ಎಂದು ಬ್ಯಾಂಕಿನಲ್ಲಿಯೇ ಹಣ ಡ್ರಾ ಮಾಡುತ್ತಿರುವುದು ಕಂಡು ಬಂದಿತು. ಹೀಗಾಗಿ, ಬ್ಯಾಂಕಿನಲ್ಲಿಯೂ ಜನಜಂಗುಳಿ ಅಧಿಕವಾಗಿಯೇ ಇತ್ತು. ಲಾಕ್‌ಡೌನ್ ಆದರೂ ಬ್ಯಾಂಕ್ ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ ಎಂದು ಎಷ್ಟೇ ಮನವಿ ಮಾಡಿದರೂ ಜನರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲ ಬ್ಯಾಂಕಿನ ಮುಂದೆಯೂ ಸರದಿಯಲ್ಲಿ ನಿಂತು ಹಣ ಸೆಳೆಯುತ್ತಿರುವುದು ಹಾಗೂ ಇತರ ಕಾರ್ಯಚಟುವಟಿಕೆ ಮಾಡುತ್ತಿರುವುದು ಕಂಡು ಬಂದಿತು.
ಫುಲ್ ವ್ಯಾಪಾರ
ಇನ್ನು ಮದ್ಯ ಖರೀದಿಗೂ ಜನರು ಮುಗಿಬಿದ್ದಿದ್ದರು. ಲಾಕ್‌ಡೌನ್ ಆಗುತ್ತದೆ ಎನ್ನುವ ಕಾರಣಕ್ಕಾಗಿ ಪದೇ ಪದೇ ಸರದಿಯಲ್ಲಿ ನಿಂತು ಖರೀದಿ ಮಾಡುತ್ತಾ ಸ್ಟಾಕ್ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಏನ್ ಮಾಡೋಣ ಸಾರ್? ಕಳೆದ ಬಾರಿ ಹೀಗೆ ಗೊತ್ತಿಲ್ಲದೆ ಏಕಾಏಕಿ ಲಾಕ್‌ಡೌನ್ ಆದಾಗ ಯಾತನೆ ಅನುಭವಿಸಿದ್ದೇವೆ, ಹೀಗಾಗಿ ಮತ್ತೆ ಲಾಕ್‌ಡೌನ್ ಆದರೂ ಆಗಬಹುದು ಎನ್ನುವ ಮಾಹಿತಿ ಸಿಕ್ಕಿದ್ದರಿಂದ ಸ್ಟಾಕ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮದ್ಯ ಖರೀದಿಯಲ್ಲಿ ತೊಡಗಿದ್ದ ವ್ಯಕ್ತಿ ನಾಚಿಕೆ ಇಲ್ಲದೆ ಹೇಳುತ್ತಿದ್ದ.
ಜಿಲ್ಲಾದ್ಯಂತ ಜನಜಾತ್ರೆ
ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಮಾತ್ರವಲ್ಲ, ಜಿಲ್ಲಾದ್ಯಂತ ಇದೇ ಪರಿಸ್ಥಿತಿಯಲ್ಲಿ ಜನರು ಮುಗಿಬಿದ್ದಿದ್ದರು. ಗಂಗಾವತಿ, ಕಾರಟಗಿ, ಕನಕಗಿರಿ, ಕುಕನೂರು, ಯಲಬುರ್ಗಾ ಸೇರಿದಂತೆ ಬಹುತೇಕ ಮಾರುಕಟ್ಟೆಯಲ್ಲಿ ಜನರ ವಹಿವಾಟು ಜೋರಾಗಿಯೇ ಸಾಗಿತ್ತು. ಎಲ್ಲಿ ನೋಡಿದರೂ ಜನವೋ ಜನ ಎನ್ನುವಂತೆ ಮುಗಿಬಿದ್ದು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಅಕ್ಕಿ, ಜೋಳ ಸೇರಿದಂತೆ ಕಿರಾಣಿಯ ವಹಿವಾಟು ಅಧಿಕವಾಗಿರುವುದು ಕಂಡು ಬಂದಿತು. ಜೀವನ ನಡೆಸಲು ಅಗತ್ಯವಾಗಿ ಬೇಕಾಗಿರುವುದನ್ನು ಅಧಿಕ ಪ್ರಮಾಣದಲ್ಲಿಯೇ ಖರೀದಿ ಮಾಡಿಕೊಂಡು ಹೋಗುತ್ತಿದ್ದರು.