ಡಿಕೆ ಸಹೋದರರ ನಾಡೆಂದೆ ಕರೆಸಿಕೊಳ್ಳುವ ರಾಮನಗರಕ್ಕಾಗಿ ಇದೀಗ ಜನರು ಒಂದಾಗಿದ್ದು ಒಕ್ಕೋರಲ ನಿರ್ಣಯ ಒಂದನ್ನು ತೆಗೆದುಕೊಂಡಿದ್ದಾರೆ.
ಚನ್ನಪಟ್ಟಣ: [ಜ.20]: ರಾಮನಗರದ ಸಹಜ ಸೊಬಗನ್ನು ಬದಲಾಯಿಸುವ ನವ ಬೆಂಗಳೂರು ಎಂಬ ಕಾಂಕ್ರೀಟ್ ಕಾಡು ಬೇಡ.., ಇಲ್ಲಿನ ಪ್ರಕೃತಿ, ಸಂಸ್ಕೃತಿ ಮತ್ತು ಜನರ ಬದುಕು ಹೀಗೆ ಉಳಿಯಲಿ. ಇದು ರಾಮನಗರಕ್ಕೆ ನವಬೆಂಗಳೂರು ಎಂಬ ಹೆಸರು ಬೇಕೆ ಬೇಡವೇ ಎಂಬ ವಿಚಾರ ಸಂಕಿರಣದಲ್ಲಿ ಮೂಡಿಬಂದ ಒಟ್ಟಾರೆ ಸಾರಾಂಶ.
ನವಬೆಂಗಳೂರು ಎಂಬ ಹೆಸರನ್ನು ರಾಮನಗರ ಜಿಲ್ಲೆಗೆ ಇರಿಸಬೇಕು ಎಂಬ ವಿಷಯ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ರಾಜ್ಯ ರೈತಸಂಘದ ಸಹಯೋಗದೊಂದಿಗೆ ನವಕರ್ನಾಟಕ ಯುವಶಕ್ತಿ ಸಂಘಟನೆ ನಗರದ ಶತಮಾನೋತ್ಸವ ಭವನದಲ್ಲಿ ಈ ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು. ವಿಚಾರ ಸಂಕಿರಣದಲ್ಲಿ ಮಾತನಾಡಿದ ವಿವಿಧ ಸಂಘಟನೆಯ ಮುಖಂಡರು ಮತ್ತು ಗಣ್ಯರು ಜಿಲ್ಲೆಯ ಹೆಸರಿನ ಬದಲಾವಣೆ ಬಗ್ಗೆ ಆತಂಕ ವ್ಯಕ್ತಪಡಿಸುವ ಜತೆಗೆ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರು.
ರಿಯಲ್ ಎಸ್ಟೇಟ್ ಉದ್ಯಮಿಗಳ ಹುನ್ನಾರ:
ರಾಮನಗರ ಜಿಲ್ಲೆಯ ರೈತರಿಗೆ, ಹಾಗೂ ನಿವಾಸಿಗಳಿಗೆ ನವಬೆಂಗಳೂರು ಎಂಬ ಹೆಸರಿನಿಂದ ಎರಡು ಹೊತ್ತು ಊಟ ಸಿಗುವುದಿಲ್ಲ. ಈ ನೆಲಕ್ಕೆ ಬೆಂಗಳೂರಿನ ಲೇಬಲ್ ಅಂಟಿಸಿ ಇಲ್ಲಿನ ಭೂಮಿಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಕೆಲ ಕಮಿಷನ್ ಏಜೆಂಟ್‌ಗಳು ಸೃಷ್ಟಿಸುತ್ತಿರುವ ಭೂಮ್. ಈ ಗಾಳಿಗುಳ್ಳೆಯನ್ನು ನಂಬಿದರೆ ಜಿಲ್ಲೆಯ ಜನರ ಭವಿಷ್ಯ, ರಾಮನಗರ ಜಿಲ್ಲೆಯ ಇತಿಹಾಸ ಅಳಿಸಿಹೋಗುವ ಅಪಾಯವಿದೆ ಎಂದು ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಸು.ತ. ರಾಮೇಗೌಡ ಎಚ್ಚರಿಸಿದರು.
ನಾವು ವಾಚ್‌ಮನ್‌ಗಳಾಗಲು ಸಿದ್ಧವಿಲ್ಲ:
ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಮು, ರಾಮನಗರ ಶ್ರೀಮಂತ ಕೃಷಿ ಪ್ರದೇಶ, ಇಲ್ಲಿನ ಮಾವು, ರೇಷ್ಮೆ, ತೆಂಗು ಹಾಗೂ ಇನ್ನಿತರ ಉತ್ಪನ್ನಗಳಿಗೆ ಸಾಕಷ್ಟುಮಾರುಕಟ್ಟೆಇದೆ. ಇನ್ನು ಕಾವೇರಿ ನದಿ ಜಿಲ್ಲೆಯನ್ನು ಸ್ಪರ್ಶಿಸಿ ಹೋಗುತ್ತದೆ. ಜಿಲ್ಲೆಯನ್ನು ಕಾಡುತ್ತಿದ್ದ ನೀರಾವರಿ ಸಮಸ್ಯೆಗೆ ಇದೀಗ ತಾನೇ ಪರಿಹಾರ ದೊರೆತು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ನವಬೆಂಗಳೂರು ಎಂಬ ರಾಕ್ಷಸನನ್ನು ಸೃಷ್ಟಿಸಲು ಕೆಲ ಮಂದಿ ಹುನ್ನಾರ ನಡೆಸಿದ್ದಾರೆ ಎಂದರು.
ನವಬೆಂಗಳೂರು ಎಂಬ ಹೆಸರು ಬಂದಾಕ್ಷಣ ನಮ್ಮ ಭೂಮಿಯಲ್ಲಿ ಬೆಳೆಯುತ್ತಿರುವ ಬೆಳೆ ದುಪ್ಪಟ್ಟಾಗುವುದಿಲ್ಲ. ಇನ್ನು ರೈತರ ಬದುಕು ಹಸನಾಗುವುದಿಲ್ಲ. ಒಪ್ಪತ್ತಿಗೆ 5 ಲೀಟರ್ ಹಾಲು ಕರೆಯುವ ಹಸು 10 ಲೀಟರ್ ಕರೆಯುವುದಿಲ್ಲ, ನಮ್ಮ ಜಮೀನಿನನ್ನು ಕಸಿದು ಕೈಗಾರಿಕೆಗಳಿಗೆ, ಕೆಲ ಬಂಡವಾಳಸ್ಥರಿಗೆ ನೀಡಿ ನಮ್ಮದೇ ಭೂಮಿಗೆ ನಮ್ಮನ್ನು ವಾಚ್‌ಮೆನ್ ಮಾಡುವ ಹುನ್ನಾರ ಈ ನವಬೆಂಗಳೂರು ಎಂದು ಇಂತಹ ತಂತ್ರಕ್ಕೆ ನಾವು ಮರಳಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಕ್ಕಿಗೆ ಗಂಟೆ ಕಟ್ಟಿದ್ದೇವೆ:
ವಿಚಾರ ಸಂಕಿರಣದ ಅಂತ್ಯದಲ್ಲಿ ಮಾತನಾಡಿದ ನವಕರ್ನಾಟಕ ಯುವಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎನ್. ಲಿಂಗೇಗೌಡ, ನವಬೆಂಗಳೂರು ಎಂಬ ಹೆಸರನ್ನು ಸರ್ಕಾರದ ಮಟ್ಟದಲ್ಲಿರುವ ಕೆಲ ಮಂದಿ ಚಾಲ್ತಿಗೆ ತರುವ ಮೂಲಕ ಇಲ್ಲಿನ ಜನರ ಬದುಕನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿರುವುದು ರಹಸ್ಯವಾಗೇನು ಉಳಿದಿಲ್ಲ. ಈ ಬಗ್ಗೆ ಸಾರ್ವಜನಿಕ ಚರ್ಚೆ ರೂಪುಗೊಳ್ಳ ಬೇಕು, ಜನಾಂದೋಲನ ರೂಪಿಸ ಬೇಕು ಎಂಬ ಉದ್ದೇಶದಿಂದ ನಮ್ಮ ವೇದಿಕೆ ಈ ಕಾರ್ಯಕ್ರಮವನ್ನು ರೂಪಿಸಿದೆ ಎಂದು ಕಾರ್ಯಕ್ರಮದ ಉದ್ದೇಶವನ್ನು ವಿಷದ ಪಡಿಸಿದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಂಸದ ಡಿ.ಕೆ.ಸುರೇಶ್...
ಬೆಕ್ಕಿಗೆ ಗಂಟೆ ಕಟ್ಟಿದ್ದೇವೆ, ನವಬೆಂಗಳೂರು ಸಾಧಕ ಬಾಧಕಗಳ ಕುರಿತು ವಿಸ್ತಾರ ಚರ್ಚೆ ರೂಪುಗೊಳ್ಳ ಬೇಕು, ಈ ಜಿಲ್ಲೆಯನ್ನು ಈಗಾಗಲೇ ಬೆಂಗಳೂರು ಮಹಾನಗರ ಸಾಕಷ್ಟುಶೋಷಿಸಿದೆ. ಮುಂದೆ ನವಬೆಂಗಳೂರು ಎಂಬ ಹೆಸರಿನಿಂದ ಇಡೀ ಜಿಲ್ಲೆಯನ್ನು ನುಂಗುವುದಕ್ಕೆ ನಾವು ಅವಕಾಶ ನೀಡಬಾರದು. ಬೆಂಗಳೂರಿನ ತಿಪ್ಪೆ ಗುಂಡಿಯಾಗುವ ಅಪಾಯದಿಂದ ನಮ್ಮ ಜಿಲ್ಲೆಯನ್ನು ರಕ್ಷಿಸಬೇಕಿದ್ದು, ಇದಕ್ಕಾಗಿ ಜನಾಂದೋಲನ ರೂಪುಗೊಳ್ಳ ಬೇಕು, ಮುಂದೆ ನಾವೆಲ್ಲ ಒಗ್ಗೂಡಿ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸಾಹಿತಿ ಕೋ.ವೆಂ. ರಾಮಕೃಷ್ಣೇಗೌಡ, ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸಿ.ಕೆ. ರಾಮೇಗೌಡ, ಶಿಕ್ಷಣ ತಜ್ಞ ಪ್ರೊ. ಮಲ್ಲಯ್ಯ ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ನಿರ್ಣಯಗಳು
1. ರಾಮನಗರಕ್ಕೆ ಯಾವುದೇ ಕಾರಣಕ್ಕೂ ನವಬೆಂಗಳೂರು ಎಂಬ ಹೆಸರು ಬೇಡವೇ ಬೇಡ
2. ರಾಮನಗರದ ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮ, ಹೈನೊದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಿ ರಾಮನಗರವನ್ನೇ ಹೊಸ ಮಾದರಿಯಾಗಿ ರೂಪಿಸಲಿ, ಬೆಂಗಳೂರಿನ ಮಾದರಿ ಬೇಡ.
3. ಜಿಲ್ಲೆಯ ಸಜೀವ ಪ್ರಾಕೃತಿಕ ಸೊಬಗನ್ನು ಹಾಳು ಮಾಡುವ ಯಾವುದೇ ಪ್ರಯತ್ನವನ್ನು ಒಕ್ಕೊರಲಿನಿಂದ ಖಂಡಿಸ ಬೇಕು.
4. ರಾಮನಗರ ಜಿಲ್ಲೆಯನ್ನು ಬೆಂಗಳೂರಿನ ಡಸ್ಟ್‌ಬಿನ್ ಹಾಗಿಸುವ ಪ್ರಯತ್ನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.
5. ನವಬೆಂಗಳೂರಿನ ಅಪಾಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಈ ಬಗ್ಗೆ ಜಿಲ್ಲೆಯಲ್ಲಿ ಜನಾಂದೋಲನ ರೂಪಿಸುವುದು.