ಕುವೈಟ್‌-ಮಂಗಳೂರು ವಿಮಾನ ವೇಳಾಪಟ್ಟಿ ಬದಲು : ಟಿಕೆಟ್‌ ದರವೂ ದುಬಾರಿ!

By Kannadaprabha NewsFirst Published Oct 25, 2021, 3:05 PM IST
Highlights
  • ಮಂಗಳೂರು-ಕುವೈಟ್‌ ಮಧ್ಯೆ ರಾತ್ರಿ ಇದ್ದ ವಿಮಾನ ಸಂಚಾರದ ವೇಳಾಪಟ್ಟಿಯನ್ನು ಹಗಲಿಗೆ ಬದಲಾಯಿಸಲಾಗಿದೆ. 
  • ಕಳೆದ ಒಂದೂವರೆ ವರ್ಷಗಳಿಂದ ಕರಾವಳಿ ಮತ್ತು ಮಲೆನಾಡಿನ ಪ್ರಯಾಣಿಕರು ಬವಣೆ

ವರದಿ :  ಆತ್ಮಭೂಷಣ್‌

 ಮಂಗಳೂರು (ಅ.25):  ಮಂಗಳೂರು-ಕುವೈಟ್‌ (Mangaluru) ಮಧ್ಯೆ ರಾತ್ರಿ ಇದ್ದ ವಿಮಾನ ಸಂಚಾರದ ವೇಳಾಪಟ್ಟಿಯನ್ನು (Time Table) ಹಗಲಿಗೆ ಬದಲಾಯಿಸಲಾಗಿದೆ. ಇದರಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಕರಾವಳಿ (Coastal) ಮತ್ತು ಮಲೆನಾಡಿನ (malnad) ಪ್ರಯಾಣಿಕರು ಬವಣೆ ಪಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ ಮಂಗಳೂರು-ಕುವೈಟ್‌ ನಡುವೆ ವಿಮಾನ ಟಿಕೆಟ್‌ (Ticket Fare) ದರ ಕೂಡ ದುಬಾರಿಯಾಗಿದೆ. 2ನೇ ಅಲೆ ಬಳಿಕ ಸಂಚಾರವೂ ಪುನಾರಂಭಗೊಂಡಿಲ್ಲ. ಇದರಿಂದಾಗಿ ಕರಾವಳಿ ಮತ್ತು ಮಲೆನಾಡಿನ ಜನತೆ ಸಮೀಪದ ಕಣ್ಣೂರು ವಿಮಾನ ನಿಲ್ದಾಣ (Airport) ಮೂಲಕ ಸಂಚಾರ ಕೈಗೊಳ್ಳುತ್ತಿದ್ದಾರೆ.

ಹಿಂದಿನ ವೇಳಾಪಟ್ಟಿ:  ಹಳೆ ವೇಳಾಪಟ್ಟಿಪ್ರಕಾರ ಮಂಗಳೂರಿನಿಂದ ರಾತ್ರಿ 8.45ಕ್ಕೆ ವಿಮಾನ ಹೊರಟರೆ, 11.15ಕ್ಕೆ ಕುವೈಟ್‌ ತಲುಪುತ್ತಿತ್ತು. ಅಲ್ಲಿಂದ ತಡರಾತ್ರಿ 12.15ಕ್ಕೆ ಹೊರಟು ಮರುದಿನ ನಸುಕಿನ 7.30ಕ್ಕೆ ಮಂಗಳೂರಿಗೆ (mangaluru) ಆಗಮಿಸುತ್ತಿತ್ತು. ಗುರುವಾರ ಮತ್ತು ಶುಕ್ರವಾರದ ಈ ವೇಳಾಪಟ್ಟಿಕುವೈಟ್‌ಗೆ ತೆರಳುವವರಿಗೆ ಹಾಗೂ ಅಲ್ಲಿಂದ ಮಂಗಳೂರಿಗೆ ಆಗಮಿಸುವವರಿಗೆ ಬಹಳ ಉಪಯುಕ್ತವಾಗುತ್ತಿತ್ತು.

ತಾನಿದ್ದ ವಿಮಾನಕ್ಕೆ ಅಪ್ಪನೇ ಪೈಲಟ್, ಸಂಭ್ರಮಿಸಿದ ಕಂದ: ವೈರಲ್ ಆಯ್ತು ವಿಡಿಯೋ

ಅಂದರೆ ಗುರುವಾರ ತಡರಾತ್ರಿ ಕುವೈಟ್‌ನಿಂದ ಹೊರಟರೆ, ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಬಂದು ಊರಿಗೆ ತಲುಪುತ್ತಿದ್ದರು. ಕುವೈಟ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ರಜಾದಿನ. ಹಾಗಾಗಿ ರಜಾದಿನ ಸದುಪಯೋಗವಾಗುತ್ತಿತ್ತು. ಒಂದು ವಾರ ರಜೆಯಲ್ಲಿ ಆಗಮಿಸುವವರಿಗೆ ಈ ಸಮಯ ಅನುಕೂಲವಾಗುತ್ತಿತ್ತು. ಬಳಿಕ ಕುವೈಟ್‌ಗೆ ತೆರಳುವಾಗಲೂ ಅಲ್ಲಿ ಒಂದು ದಿನದ ವಿಶ್ರಾಂತಿ ಸಿಗುತ್ತಿತ್ತು. ಭಾನುವಾರ ವಾರಾರಂಭದ ದಿನ ಕೆಲಸಕ್ಕೆ ತೆರಳಲು ಸುಲಭವಾಗುತ್ತಿತ್ತು.

ದಿಢೀರ್‌ ಬದಲಾವಣೆ ತೊಂದರೆ:

ಪ್ರಥಮ ಲಾಕ್ಡೌನ್‌ (lockdown) ಬಳಿಕ ವಿಮಾನ ಸಂಚಾರ ಪುನಾರಂಭವಾದಾಗ ಏರ್‌ ಇಂಡಿಯಾ (Air India) ಕುವೈಟ್‌-ಮಂಗಳೂರು ಸಂಚಾರದ ವೇಳಾಪಟ್ಟಿಯೂ ಏಕಾಏಕಿ ಬದಲಾವಣೆಗೊಂಡಿತು. ಇದಕ್ಕೆ ಇದುವರೆಗೆ ಸೂಕ್ತ ಕಾರಣ ಸಿಕ್ಕಿಲ್ಲ. ಈ ಬಾರಿ ರಾತ್ರಿ ಬದಲು ಹಗಲಿಗೆ ವೇಳಾಪಟ್ಟಿಯನ್ನು(Time table) ಬದಲಾಯಿಸಲಾಯಿತು.

ಪ್ರಸಕ್ತ ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಬಹರೈನ್‌ ಮೂಲಕ 11.05ಕ್ಕೆ ಕುವೈಟ್‌, ಅಲ್ಲಿಂದ ಮಧ್ಯಾಹ್ನ 12.15ಕ್ಕೆ ಹೊರಟು ರಾತ್ರಿ 7.15ಕ್ಕೆ ಮಂಗಳೂರು ತಲುಪುವ ವೇಳಾಪಟ್ಟಿಪ್ರಕಟಿಸಲಾಯಿತು. ಬುಧವಾರ ಮತ್ತು ಶನಿವಾರದ ಈ ವೇಳಾಪಟ್ಟಿಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಕರಾವಳಿ, ಮಲೆನಾಡಿನ ಮಂದಿಗೆ ಪ್ರಯೋಜನಕರವಾಗಿಲ್ಲ ಎಂಬುದೇ ಈಗಿನ ಸಮಸ್ಯೆ. ವಾರದ ಮಧ್ಯೆ ಹೊರಡಬೇಕು, ಬೆಳಗ್ಗೆ 7 ಗಂಟೆಗೆ ವಿಮಾನ ಎಂದಾದರೆ, 3 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು. ಕುವೈಟ್‌ನಿಂದ ಹಗಲು ಹೊರಡಬೇಕು. ಅದು ಕೂಡ ವಾರದ ಮಧ್ಯೆ ಅಥವಾ ವಾರಾಂತ್ಯ ದಿನಗಳಲ್ಲಿ. ಇದು ವಾರದ ಎರಡು ದಿನ ರಜೆ ಇರುವ ಕುವೈಟ್‌ನ ಅನಿವಾಸಿ ಕನ್ನಡಿಗರಿಗೆ ಸೂಕ್ತವಾಗಿಲ್ಲ.

ಚೀನಾದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಭಾರೀ ಆತಂಕ: ವಿಮಾನ ರದ್ದು, ಶಾಲೆ ಬಂದ್‌!

ಈ ವೇಳಾಪಟ್ಟಿಯನ್ನು ಬದಲಾಯಿಸಿ ಹಳೆ ವೇಳಾಪಟ್ಟಿಯನ್ನು ಮುಂದುವರಿಸುವಂತೆ ಕಳೆದ ಒಂದೂವರೆ ವರ್ಷದಿಂದ ಅನಿವಾಸಿ ಕರಾವಳಿಗರು ಆಗ್ರಹಿಸುತ್ತಲೇ ಬಂದಿದ್ದಾರೆ. ಕುವೈಟ್‌ ತುಳುಕೂಟ, ಕುವೈಟ್‌-ಕೇರಳ (kerala) ಮುಸ್ಲಿಂ ಅಸೋಸಿಯೇಷನ್‌ ಕರ್ನಾಟಕ (karnataka), ಜಿಎಸ್‌ಬಿ  (GSB) ಸಭಾ, ಕುವೈಟ್‌ ಬಂಟರ ಕೂಟ, ತುಳು ಕನ್ನಡ ಕೂಟ ಹೀಗೆ ಅನೇಕ ಸಂಘ ಸಂಸ್ಥೆಗಳು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ಗೆ ಮನವಿ ನೀಡಿದೆ. ಆದರೂ ವೇಳಾಪಟ್ಟಿಬದಲಾವಣೆ ಸಾಧ್ಯವಾಗಿಲ್ಲ.

ಕೋವಿಡ್‌ 2ನೇ (covid) ಅಲೆ ಬಳಿಕ ಬೇರೆ ರಾಷ್ಟ್ರಗಳಿಗೆ ವಿಮಾನ ಸಂಚಾರ ಶುರುವಾದರೂ ಕುವೈಟ್‌ ಮತ್ತು ದಮಾಮ್‌ಗೆ ಇನ್ನೂ ವಿಮಾನಯಾನ ಪುನಾರಂಭವಾಗಿಲ್ಲ. ನವೆಂಬರ್‌ನಿಂದ ವಿಮಾನ (flight) ಸಂಚಾರ ಪುನಾರಂಭ ವೇಳೆಯಾದರೂ ಕುವೈಟ್‌ ಯಾನದ ವೇಳಾಪಟ್ಟಿಯೂ ಬದಲಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಕುವೈಟ್‌ ಯಾನಿಗಳು. ಆದರೆ ಏರ್‌ ಇಂಡಿಯಾ ಅಧಿಕಾರಿಗಳು ಈ ಬಗ್ಗೆ ಯಾವುದೇ ಖಚಿತತೆ ಹೇಳುತ್ತಿಲ್ಲ.

ಮಂಗಳೂರು ದರ ದುಬಾರಿ, ಕಣ್ಣೂರಿಗೆ ವಲಸೆ

ಮಂಗಳೂರು-ಕುವೈಟ್‌ ಮಧ್ಯೆ ವಿಮಾನ ಯಾನ ದರವೂ ದುಬಾರಿ. ಮಾಮೂಲಿ ದರಕ್ಕಿಂತ 10-15 ಸಾವಿರ ರು. ಜಾಸ್ತಿ ದರವಿದೆ. ಇದು ಆಗಾಗ ಬದಲಾಗುತ್ತಲೇ ಇದ್ದು, ನೆರೆಯ ಕಣ್ಣೂರು ವಿಮಾನ ನಿಲ್ದಾಣಕ್ಕೆ ಇಲ್ಲಿಗಿಂತ ಕಡಿಮೆ ದರ ಇದೆ ಎನ್ನುತ್ತಾರೆ ಕುವೈಟ್‌ ಯಾನಿಗಳು.

ಕಣ್ಣೂರಿನಿಂದ ಬೇರೆ ಬೇರೆ ದೇಶಗಳಿಗೆ ಏರ್‌ ಟ್ರಾಫಿಕ್‌ ಹೆಚ್ಚು ಇರುವುದರಿಂದ ಸಹಜವಾಗಿ ಅಲ್ಲಿ ದರ ಕಡಿಮೆ ಇರುತ್ತದೆ ಎಂಬ ಸಬೂಬು ನೀಡುತ್ತಾರೆ ಏರ್‌ ಇಂಡಿಯಾ ಅಧಿಕಾರಿಗಳು. ಮಂಗಳೂರು-ಕುವೈಟ್‌ ನಡುವೆ ದರ ಹೆಚ್ಚಳದಿಂದಾಗಿ ಯಾನಿಗಳು ವಯಾ ಕಣ್ಣೂರು ಮೂಲಕ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಮಂಗಳೂರಿಗೆ ಆರ್ಥಿಕ ಹೊಡೆತ ಉಂಟಾಗುತ್ತಿದೆ

ಮಂಗಳೂರು-ಕುವೈಟ್‌ ನಡುವೆ ಹಿಂದಿನ ವೇಳಾಪಟ್ಟಿಯಂತೆ ವಿಮಾನ ಸಂಚಾರ ಏರ್ಪಡಿಸುವಂತೆ ಕುವೈಟ್‌ನ ಕನ್ನಡಿಗರು ಬೇಡಿಕೆ ಸಲ್ಲಿಸಿದ್ದಾರೆ. ಇದನ್ನು ವಿಮಾನಯಾನ ಸಂಸ್ಥೆ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ. ಮುಂದಿನ ವೇಳಾಪಟ್ಟಿಯಲ್ಲಿ ಇದನ್ನು ಸರಿಪಡಿಸುವ ವಿಶ್ವಾಸ ಇದೆ.

-ನಳಿನ್‌ ಕುಮಾರ್‌ ಕಟೀಲ್‌, ಸಂಸದ, ದ.ಕ.

click me!