ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪ ಇಡಲಾಗಿದ್ದು, ಈ ಸಂಬಂಧ ಸಾಕಷ್ಟು ವಿರೊಧ ವ್ಯಕ್ತವಾಗಿದೆ. ಆಕ್ಷೇಪ ವ್ಯಕ್ತವಾಗಿದೆ.
ದೊಡ್ಡಬಳ್ಳಾಪುರ (ಸೆ.01): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪ ಮಾಡಿರುವ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಹೇಳಿಕೆ ವಿವೇಕಶೂನ್ಯವಾಗಿದ್ದು, ಅನಗತ್ಯವಾಗಿ ತಾಲೂಕುಗಳ ಜನರ ನಡುವೆ ಬಾಂಧವ್ಯ ಕದಡುವ ಪ್ರಯತ್ನವಾಗಿದೆ ಎಂದು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿಬಣ) ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿತು.
ಸಂಘಟನೆಯ ರಾಜ್ಯ ಪ್ರಧಾನ ಕಾರ‍್ಯದರ್ಶಿ ರಾಜಘಟ್ಟರವಿ ಮಾತನಾಡಿ, ಜಿಲ್ಲೆಯ ಹೆಸರು ಬದಲಾವಣೆ ಸಂಬಂಧ ಶಾಸಕ ನಿಸರ್ಗ ನಾರಾಯಣಸ್ವಾಮಿ ಪೂರ್ವಾಗ್ರಹಪೀಡಿತರಾಗಿ ವರ್ತಿಸುತ್ತಿರುವಂತಿದೆ. ಈ ಹಿಂದೆ ಜಿಲ್ಲಾ ಕೇಂದ್ರವನ್ನು ಬೆಂಗಳೂರು ನಗರದಿಂದ ಜಿಲ್ಲಾ ವ್ಯಾಪ್ತಿಗೆ ತರಲು ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಪಟ್ಟಣಗಳಲ್ಲಿ ಸುದೀರ್ಘ ಹೋರಾಟ ನಡೆದಿತ್ತು. ಪರಿಣಾಮವಾಗಿ ಎಲ್ಲ ತಾಲೂಕುಗಳ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದೊಡ್ಡಬಳ್ಳಾಪುರ-ದೇವನಹಳ್ಳಿಯ ನಡುವೆ ಜಿಲ್ಲಾಡಳಿತ ಭವನ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ನೆನಪಿಸಿದರು.
undefined
ಜನರ ಭಾವನೆ ಪ್ರಚೋದಿಸಬೇಡಿ
ಆದರೆ ಅಂದಿನ ಸಂದರ್ಭದಲ್ಲೂ ಎಲ್ಲಿಯೂ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪ ಇರಲಿಲ್ಲ. ನ್ಯಾಯಯುತವಾಗಿ ದೊಡ್ಡಬಳ್ಳಾಪುರಕ್ಕೆ ಧಕ್ಕಬೇಕಿದ್ದ ಜಿಲ್ಲಾಡಳಿತ ಭವನವನ್ನು ತಾಲೂಕಿನ ವ್ಯಾಪ್ತಿಯ ಹೊರಗೆ ಸ್ಥಾಪನೆ ಮಾಡಿ ಅನ್ಯಾಯ ಮಾಡಲಾಗಿದೆ. ಅದನ್ನೂ ಇಲ್ಲಿನ ಜನ ಸಹಿಸಿಕೊಂಡಿದ್ದಾರೆ. ಆದರೆ ಈಗ ಜಿಲ್ಲೆ ಹೆಸರು ಬದಲಾವಣೆ ಪ್ರಸ್ತಾಪ ಮಾಡುವ ಮೂಲಕ ಜನರ ಭಾವನೆಗಳನ್ನು ಪ್ರಚೋದಿಸುವ ಕೆಲಸವನ್ನು ಮಾಡಲಾಗಿದೆ ಎಂದು ದೂರಿದರು.
ಡಿಕೆ ಸಹೋದರರ ನಾಡಲ್ಲೇ ಶೀಘ್ರ ಚುನಾವಣೆ : ಡೇಟ್ ಫಿಕ್ಸ್...
ಬೆಂಗಳೂರಿನ ನೆರಳಲ್ಲೇ ಇರುವ ಜಿಲ್ಲೆ, ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಜಿಲ್ಲೆಯ ಬಹುಭಾಗ ಈಗಾಗಲೇ ಬೃಹತ್ ಬೆಂಗಳೂರು ಮಹಾನಗರದೊಂದಿಗೆ ಬೆಸೆದುಕೊಂಡಿದೆ. ಎಲ್ಲ 4 ತಾಲೂಕುಗಳ ಸೀಮಿತ ಭಾಗ ಬೆಂಗಳೂರಿಗೇ ಸೇರಿದಂತಾಗಿದೆ. ಹೀಗಿರುವಾಗ ಕೇವಲ ವೈಯಕ್ತಿಕ ಹಿತಸಾಧನೆಯ ಹಿನ್ನಲೆಯಲ್ಲಿ ಒಂದು ತಾಲೂಕಿನ ಜನರ ಓಲೈಕೆಗೆ ಅವರು ಮುಂದಾಗಿದ್ದಾರೆ ಎಂದರು.
ತಾಲೂಕಿನ ಜನತ ಹಿತ ಮರೆತ ಶಾಸಕ
ವಾಸ್ತವವಾಗಿ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಶೇ.30ರಷ್ಟುಭಾಗ ದೊಡ್ಡಬಳ್ಳಾಪುರ ತಾಲೂಕಿನದ್ದಾಗಿದೆ. ಇಲ್ಲಿನ ಜನರ ಮತ ಪಡೆದಿರುವ ಅವರು ದೊಡ್ಡಬಳ್ಳಾಪುರ ತಾಲೂಕಿನ ಜನರ ಹಿತಾಸಕ್ತಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದರು.
ಡಿಕೆ ಸಹೋದರರ ನಾಡಲ್ಲಿ ಕುತೂಹಲ ಕೆರಳಿಸಿದ ರಾಜಕೀಯ...
ಸರ್ಕಾರ ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ದುಡುಕಿನ ನಿರ್ಧಾರಕ್ಕೆ ಮುಂದಾದರೆ ಗಂಭೀರ ಪ್ರತಿಕ್ರಿಯೆ ಎದುರಿಸಬೇಕಾದೀತು. ಕೂಡಲೇ ದೊಡ್ಡಬಳ್ಳಾಪುರ ಶಾಸಕರು ಹೋರಾಟಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ನಾಗರೀಕರ ಹೋರಾಟ ತಾರಕಕ್ಕೇರಲಿದ್ದು, ಉಭಯ ತಾಲೂಕುಗಳ ನಡುವೆ ಅನಗತ್ಯ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ಶೆಟ್ಟಿಬಣದ ಮುಖಂಡರಾದ ಹಮಾಮ್ ವೆಂಕಟೇಶ್, ಆನಂದ್‌ಕುಮಾರ್, ಅಮ್ಮು, ಬಷೀರ್, ಪು.ಮಹೇಶ್, ಸುಬ್ರಮಣಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.