ಕಲಬುರಗಿಯಲ್ಲಿ ಪೌರತ್ವ ಪರ ರ‍್ಯಾಲಿ ‘ಭೇಷ್’ ಎಂದಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ | ಪಿಯೂಷ್ ಸಾಹೇಬ್ರ ಈಗ ಕಲಬುರಗಿ ನಿಮ್ಮ ಕಣ್ಣಿಗೆ ಕಂಡ್ತೇನ್ರಿ | ಕಲಬುರಗಿ ಸಾರ್ವಜನಿಕರು, ಜನನಾಯಕರಿಂದ ಟೀಕೆ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಜ.15): ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯಲ್ ಪೌರತ್ವ ಪರ ಯಶ ಕಂಡ ರ‍್ಯಾಲಿ ಕುರಿತಂತೆ ನೀಡಿರುವ ಟ್ವೀಟರ್ ಹೇಳಿಕೆ ಸ್ಥಳೀಯವಾಗಿ ಬಿಜೆಪಿ ಸಂಘಟನೆಗೆ ತುಸು ಮುಜುಗರಕ್ಕೆ ತಳ್ಳಿದೆ. ಬಿಜೆಪಿ ಬೆಂಬಲಿತ, ನಾಗರಿಕ ಹೋರಾಟ ಸಮಿತಿ ಪ್ರಾಯೋಜಿತ ಪೌರತ್ವ ಪರ ರ್ಯಾಲಿಗೆ ಭೇಷ್ ಎಂದಿದ್ದ ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯಲ್ ಟ್ವಿಟರ್ ಸಂದೇಶ ಹೊರಬಿದ್ದ ಬೆನ್ನಲ್ಲೇ ಇಲ್ಲಿನ ಸಾರ್ವಜನಿಕರು, ಕಾಂಗ್ರೆಸ್ ಶಾಸಕರು ಕೆರಳಿದ್ದಾರೆ.
ತಮಗೇ ಬೇಕಾದಂತಹ ವಿಚಾರಗಳಿಗಷ್ಟೇ ಸ್ಪಂದಿಸುವ ಕೇಂದ್ರ ರೇಲ್ವೆ ಸಚಿವರ ಧೋರಣೆಯನ್ನು ಕಟು ಶಬ್ದಗಳಲ್ಲಿ ಟೀಕಿಸುತ್ತ ಹೇಳಿಕೆ ಮೂಲಕ ಹಾಗೂ ಟ್ವೀಟರ್‌ನಲ್ಲೇ ‘ತಪರಾಕಿ’ ನೀಡಿದ್ದಾರೆ.
ಗೋಯಲ್ ಸಾಹೇಬರ ಧೋರಣೆ ನೋಡ್ರಿ:
ರೇಲ್ವೆ ಡಿವಿಜನ್ ಬೇಕೆಂಬ ಬೇಡಿಕೆಯ ಬಗ್ಗೆಯಾಗಲಿ, ಮಂಜೂರಾದ ನಿಮ್ಜ್ ಘಟಕಕ್ಕೆ ಹಿಡಿದ ಗ್ರಹಣ ಮೋಕ್ಷ ಯಾವಾಗ ಎಂಬುದಕ್ಕೆ ಏನೊಂದು ಉತ್ತರಿಸದೆ ಮೌನವಾಗಿರುವ ಕೇಂದ್ರ ರೇಲ್ವೆ ಸಚಿವ ಗೋಯಲ್ ತಮಗಿಷ್ಟವಾದಂತಹ ವಿಚಾರದಲ್ಲಿ ಅದ್ಹೇಗೆ ಹೇಳದೆ ಕೇಳದೆ ಕಲಬುರಗಿಗೆ ಶಹಬಾಸ್‌ಗಿರಿ ನೀಡಿದ್ದಾರೆ ನೋಡ್ರಿ... ಎಂದು ಸಚಿವರ ಧೋರಣೆಯನ್ನು ಕಟುವಾಗಿ ಖಂಡಿಸುತ್ತಿದ್ದಾರೆ.
ಮೋದಿ ಸರ್ಕಾರದ ಮಾನವೀಯ ಉಪಕ್ರಮಗಳಿಗೆ ವ್ಯಕ್ತವಾದ ಸುನಾಮಿ ರೀತಿಯ ಜನ ಬೆಂಬಲಕ್ಕೆ ಕಲಬುರಗಿ ರ್ಯಾಲಿ ಕನ್ನಡಿ ಎಂದು ಪಿಯೂಷ್ ಮೊನ್ನೆ ತಮ್ಮ ಟ್ವಿಟರ್‌ನಲ್ಲಿ ಕಲಬುರಗಿ ನಾಗರಿಕ ಸಮಿತಿ ಪೌರತ್ವ ಪರ ರ‍್ಯಾಲಿ ಬಣ್ಣಿಸಿದ್ದರು. ಗೋಯಲ್ ಅವರ ಸಂದೇಶ ಹೊರಬಿದ್ದ ಬೆನ್ನಲ್ಲೇ ಕಲಬುರಗಿ ಮಂದಿ ಕೆಂಡಾಮಂಡಲರಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರೇಲ್ವೆ ಬೇಡಿಕೆಗಳಿಗೆ ಸದಾ ಮೌನಧಾರಿ, ನಿಮ್ಜ್ ವಿಚಾರದಲ್ಲಿ ನಿರ್ಲಿಪ್ತ ಧೋರಣೆ ತಾಳುವ ನಿಮಗೆ ಕಲಬುರಗಿ ನಿಮಗಿಷ್ಟವಾದಂತಹ ವಿಚಾರದಲ್ಲಿ ಮಾತ್ರ ಕಾಣುತ್ತದೆಯೋ? ಇಲ್ಲಿನ ಜನರ ಬೇಡಿಕೆ ಈಡೇರಿಸಿ ಭೇಷ್ ಎನ್ನಿಸಿಕೊಳ್ಳುವ ತುಡಿತ ನಿಮಗ್ಯಾಕಿಲ್ಲ? ಎಂದು ಟೀಕಿಸುತ್ತಿದ್ದಾರೆ.
ನಮ್ಮ ರೇಲ್ವೆ ಡಿಮ್ಯಾಂಡ್ ಕೇಳಿಸೋದಿಲ್ಲ ನಿಮ್ಗೆ:
ಸಿಎಎ ಬೆಂಬಲಿಸಿದ ಕಲಬುರಗಿ ಜನ ನಡೆಸುವ ರ್ಯಾಲಿ ಕೇಂದ್ರ ರೇಲ್ವೆ ಸಚಿವರಿಗೆ ಕಾಣುತ್ತದೆ. ಆದರೆ ಕಲಬುರಗಿ ಕೇಂದ್ರವಾಗಿರುವಂತೆ ಪ್ರತ್ಯೇಕ ರೇಲ್ವೆ ವಿಭಾಗೀಯ ಕೇಂದ್ರ ಬೇಕೆಂದು ಕಳೆದ 3 ದಶಕದಿಂದ ನಡೆಸುತ್ತಿರುವ ಹೋರಾಟಗಳು ಇಂದಿಗೂ ಸಚಿವರ ಕಣ್ಣಿಗೆ ಕಾಣುತ್ತಿಲ್ಲ ಯಾಕೆ? ಎಂದು ಗೋಯಲ್ ಅವರ ಸಿಎಎ ಪರ ರ್ಯಾಲಿ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಟ್ವಿಟರ್ ಸಂದೇಶದ ಬಗ್ಗೆ ಬಿಸಿಲೂರಿನ ಜನರು ಖಾರವಾಗಿ ಪ್ರಶ್ನಿಸುವಂತಾಗಿದೆ.
ನೈರುತ್ಯ, ಮಧ್ಯ, ದಕ್ಷಿಣ ಮಧ್ಯ ಹಾಗೂ ಎಸ್ ಡಬ್ಲೂಆರ್ ಹಾಗೂ ವೈಝಾಗ್ ಎಂದು 5 ರೇಲ್ವೆ ವಲಯಗಳಲ್ಲಿ ಹರಿದುಹಂಚಿ ಹೋದರೂ ಕಲಬುರಗಿ ಭಾಗದ ರೇಲ್ವೆ ಸವಲತ್ತುಗಳ ಬಗ್ಗೆ ಕ್ಯಾರೆ ಎನ್ನದ ಕೇಂದ್ರ ರೇಲ್ವೆ ಸಚಿವರಿಗೆ ಅವರಿಗೆ ಇಷ್ಟವಾಗಿರುವ ಸಂಗತಿಗಳು ಮಾತ್ರ ಈ ಪ್ರದೇಶದಿಂದ ಕಾಣುತ್ತವೆ, ಜನರಿಗೆ ಅದೇನು ಬೇಕು? ಕಲಬುರಗಿ ಸೀಮೆಯ ಜನರ ರೇಲ್ವೆ ಬೇಡಿಕೆಗಳೇನು? ಇವ್ಯಾವುವು ಕಾಣೋದೇ ಇಲ್ಲವೆ? ಎಂದು ಆಡಿಕೊಳ್ಳುತ್ತಿದ್ದಾರೆ.
1300 ಕಿಮೀ ಉದ್ದದ ರೈಲು ಮಾರ್ಗ ತನ್ನ ವ್ಯಾಪ್ತಿಗೆ ಹೊಂದಿರುವ ಉದ್ದೇಶಿತ ಕಲಬುರಗಿ ಪ್ರತ್ಯೇಕ ರೇಲ್ವೆ ವಿಭಾಗೀಯ ಕಚೇರಿ ಯೋಜನೆ 2013 ರಲ್ಲೇ ಯೂಪಿಎ 2 ಸರ್ಕಾರದಲ್ಲಿ ಮಂಜೂರಾದರೂ ಇಂದಿಗೂ ಅದು ನೆನೆಗುದಿಗೆ ಬಿದ್ದಿದೆ.
ಈಚೆಗಷ್ಟೇ ರಚನೆಯಾಗಿರುವ ವೈಝಾಗ್ ರೇಲ್ವೆ ವಲಯ ಇನ್ನೇನು ಏಪ್ರಿಲ್‌ನಲ್ಲಿ ಕಾರ್ಯಾರಂಭಿಸಲಿದೆ. 3 ದಶಕಗಳ ಬೇಡಿಕೆಯಾಗಿ ಕೊಳೆಯುತ್ತಿರುವ ಕಲಬುರಗಿ ಡಿವಿಜನ್ ಕಚೇರಿ ಆಗ್ರಹ ಇನ್ನೂ ಮೂಲೆಗುಂಪಾಗಿರೋದು ಯಾಕೆ? ಎಂಬ ಜನರ ಪ್ರಶ್ನೆಗೆ ಕೇಂದ್ರದ ರೇಲ್ವೆ ಸಚಿವರಿಂದ ಯಾವುದೇ ಸಂದೇಶದಗಳಿಲ್ಲ! ಆದರೆ ಸಿಎಎ ಕುರಿತಂತೆ ತಕ್ಷಣ ಕಲಬುರಗಿ ರ‍್ಯಾಲಿಗೆ, ಕಲಬುರಗಿ ಜನತೆಗೆ ಶಹಬಾಸ್‌ಗಿರಿ ನೀಡುವ ಸಂದೇಶ ರವಾನಿಸುತ್ತಾರೆ ಎಂದು ಜನರೇ ಆಡಿಕೊಳ್ಳುವಂತಾಗಿದೆ.
ಜಾಣ ಕುರುಡು:
ಕಲ್ಯಾಣ ಕರ್ನಾಟಕದ ರೇಲ್ವೆ ಬೇಡಿಕೆಗಳ ಬಗ್ಗೆ ಕಳೆದ 6 ತಿಂಗಳಲ್ಲೇ ಆಸಕ್ತ ರೇಲ್ವೆ ಬಳಕೆದಾರರು ಸಂಘಟಿಸಿದ್ದ ಟ್ವಿಟರ್ ಅಭಿಯಾನಕ್ಕೆ 25 ಸಾವಿರದಷ್ಟು ಜನ ತಮ್ಮ ಬೆಂಬಲ ಸೂಚಿಸಿದ್ದರು. ಇದು ಟ್ವಿಟರ್ ಲೋಕದಲ್ಲಿ ಹೊಸ ಅಲೆಯನ್ನೇ ಹುಟ್ಟುಹಾಕಿತ್ತು. ಇಷ್ಟಾದರೂ ರೇಲ್ವೆ ಸಚಿವ ಪಿಯೂಷ್ ಗೋಲ್ ಈ ಟ್ವಿಟರ್ ಅಭಿಯಾನಕ್ಕೆ ಕ್ಯಾರೆ ಎನ್ನದಂತೆ ತಮ್ಮ ಪಾಡಿಗೆ ತಾವಿದ್ದರು.
ಈಗ ನಿಮ್ಮ ಗಮನ ಸೆಳೆಯಿತೆ
ಕೇಂದ್ರ ಸಚಿವ ಪಿಯೂಷ್ ಗೋಯಲ್‌ಗೆ ಟ್ವೀಟ್ ಮೂಲಕ ಶಾಸಕರಾದ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಇತ್ತೀಚಿಗೆ ಕಲಬುರಗಿಯಲ್ಲಿ ಪೌರತ್ವ ಪರ ನಡೆದ ರ‍್ಯಾಲಿ ಕುರಿತು ಕಲಬುರಗಿಯಲ್ಲಿ ಪೌರತ್ವದ ಪರ ಜನರ ಸುನಾಮಿ ಎಂದು ವರ್ಣಿಸಿ ಭಾರತದ ಜನರು ಪೌರತ್ವ ಕಾಯಿದೆಯನ್ನು ಸ್ವಾಗತಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದೀರಿ. ಆದರೆ ನಿಮಗೆ ಕಲಬುರಗಿ ಜನರ ರೇಲ್ವೆ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಗಮನಕ್ಕಿಲ್ಲವೆ? ಅವುಗಳ ಬಗ್ಗೆ ನೀವೇಕೆ ಜಾಣ ಕುರುಡ, ಕಿವುಡರಾಗಿದೀರಿ? ಎಂದು ಪ್ರಶ್ನಿಸಿದ್ದಾರೆ.
ಪಿಯೂಷ್ ಗೋಯಲ್ ಅವರ ಟ್ವೀಟ್‌ಗೆ ಟಾಂಗ್ ನೀಡಿರುವ ಶಾಸಕರಾದ ಪ್ರಿಯಾಂಕ್ ಖರ್ಗೆ, ಪಿಯೂಷ್ ಅವರೇ ಈಗ ಕಲಬುರಗಿ ನಿಮ್ಮ ಗಮನ ಸೆಳೆಯಿತು. ಹಾಗೆಯೇ, ಯುಪಿಎ ಅವಧಿಯಲ್ಲಿ ಮಂಜೂರಾದ ಕಲಬುರಗಿ ರೈಲ್ವೇ ವಲಯ ಹಾಗೂ ನಿಮ್ಜ್ ಯೋಜನೆಯ ಸದ್ಯದ ಸ್ಥಿತಿಗತಿಯ ಬಗ್ಗೆಯೂ ಸ್ವಲ್ಪ ಹೇಳುತ್ತೀರಾ? ಎಂದು ತಿರುಗೇಟು ನೀಡಿದ್ದಾರೆ.
ಸಂಸದರಿಗೆ ಗೊತ್ತಿದೆಯೋ?
ಸಂಸದ ಉಮೇಶ್ ಜಾಧವ್‌ಗೂ ಟಾಂಗ್ ನೀಡಿರುವ ಪ್ರಿಯಾಂಕ್ ಖರ್ಗೆ, ಕಲಬುರಗಿ ಭಾಗದ ರೇಲ್ವೆ ಸೇರಿದಂತೆ ಕೇಂದ್ರ ಸಂಬಂಧಿತ ಅನೇಕ ಜನಪರ ಯೋಜನೆಗಳ ಬಗ್ಗೆ ಸಂಸದರಿಗೂ ಮಾಹಿತಿ ಇಲ್ಲವೆಂದು ಕಾಣುತ್ತದೆ ಎಂದು ಮಾತಿನಲ್ಲೇ ಕುಟುಕಿದ್ದಾರೆ. ಇದರೊಂದಿಗೆ ಕಲಬುರಗಿಯಲ್ಲಿ ನಡೆದ ಪೌರತ್ವ ಪರ ಕಾಯ್ದೆ ರ್ಯಾಲಿ ಬಗ್ಗೆ ಟ್ವೀಟ್ ಮಾಡಿದ್ದ ರೇಲ್ವೆ ಸಚಿವ ಪಿಯೂಷ್ ಗೋಯಲ್ ಶಾಸಕ ಪ್ರಿಯಾಂಕ್ ಖರ್ಗೆಯವರ ಟ್ವೀಟರ್ ಚಾಟಿ ಮಾತಿನೇಟಿಗೆ ಸಿಲುಕಿದ್ದಾರಲ್ಲದೆ ಸಾಮಾನ್ಯ ಜನರನ್ನೂ ಕೆರಳಿಸಿದಂತಾಗಿದೆ.
* ಇಷ್ಟದ ಸಂಗತಿಗಳಿಗೆ ಮಾತ್ರ ಸ್ಪಂದನೆ, ಕಷ್ಟದ ವಿಚಾರಗಳಿಗೆ ಜಾಣ ಕುರುಡು ಧೋರಣೆ
* ಸಂಸದ ಡಾ.ಜಾಧವ್ ಸಾಹೇಬರಿಗೂ ನೆನೆಗುದಿಗೆ ಬಿದ್ದಿರೋ ಯೋಜನೆಗಳ ಬಗ್ಗೆ ಇಂದಿಗೂ ಮಾಹಿತಿ ಇಲ್ವಲ್ರಿ