ವಿಜಯಪುರ: ಕಳ್ಳರ ಕೈಚಳಕ, ಕುಡಿವ ನೀರಿಗೆ ಕಂಟಕ..!

By Kannadaprabha News  |  First Published Jun 22, 2023, 10:00 PM IST

ಜನತೆ ಸುಮಾರು ಆರು ತಿಂಗಳಿಂದ ಶುದ್ಧ ಕುಡಿಯುವ ನೀರು ಸಿಗದೇ ಪರದಾಡುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಸೂಕ್ತ ಕ್ರಮವಹಿಸಿ, ಶುದ್ಧ ಕುಡಿಯುವ ನೀರು ನೀಡಲು ಮುಂದಾಗಬೇಕು ಎಂಬುದು ಪಟ್ಟಣದ ಸಾರ್ವಜನಿಕರ ಒತ್ತಾಸೆಯಾಗಿದೆ.


ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ದೇವರಹಿಪ್ಪರಗಿ(ಜೂ.22): ಸರ್ಕಾರ ಜನ ಆರೋಗ್ಯವಂತರಾಗಿರಲಿ ಎಂಬ ಉದ್ದೇಶದಿಂದ ಕೋಟ್ಯಂತರ ರು. ವೆಚ್ಚ ಮಾಡಿ ಗ್ರಾಮ, ಪಟ್ಟಣ, ನಗರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಅದರಂತೆ ಪಟ್ಟಣದ ಹೊಸನಗರದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಹಾಗೂ ಹಳ್ಳದ ಹತ್ತಿರ 2 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಎರಡೂ ಘಟಕಗಳು ಸುಮಾರು 6 ತಿಂಗಳಿಂದ ಸ್ಥಗಿತಗೊಂಡಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Latest Videos

undefined

ದೇವರಹಿಪ್ಪರಗಿ ಅಂದಾಜು 4200 ಮನೆಗಳು ಹಾಗೂ 20 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ. ಇಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಶಾಸಕರ ಅನುದಾನದ ನೆರವಿನಿಂದ ಒಟ್ಟು 4 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.

ಕುಡಿವ ನೀರಿನ ಸಮಸ್ಯೆ ಹೊಸ್ತಿಲಲ್ಲಿ ವಿಜಯಪುರ ಜಿಲ್ಲೆ..!

ಆದರೆ, ಪಟ್ಟಣದ ಹೊಸನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದಿರುವ ಹಾಗೂ ಹಳ್ಳದ ಹತ್ತಿರ ಇರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅಳವಡಿಸಿರುವ ಮೋಟಾರಗಳನ್ನು ಯಾರೋ ದುಷ್ಕರ್ಮಿಗಳು ಜನವರಿ ತಿಂಗಳಲ್ಲಿ ಕದ್ದುಕೊಂಡು ಹೋಗಿದ್ದರು. ಫೆಬ್ರುವರಿ ತಿಂಗಳಲ್ಲಿ ಪೊಲೀಸರು ಮೋಟಾರ್‌ಗಳನ್ನು ಪತ್ತೆ ಮಾಡಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೋರ್ಟ್‌ ಮೂಲಕ ಮೋಟರ್‌ಗಳನ್ನು ತಂದು ಅಳವಡಿಸಬೇಕಿದೆ. ಆದರೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಈ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ಪಟ್ಟಣದ ಜನತೆ ಸುಮಾರು ಆರು ತಿಂಗಳಿಂದ ಶುದ್ಧ ಕುಡಿಯುವ ನೀರು ಸಿಗದೇ ಪರದಾಡುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಸೂಕ್ತ ಕ್ರಮವಹಿಸಿ, ಶುದ್ಧ ಕುಡಿಯುವ ನೀರು ನೀಡಲು ಮುಂದಾಗಬೇಕು ಎಂಬುದು ಪಟ್ಟಣದ ಸಾರ್ವಜನಿಕರ ಒತ್ತಾಸೆಯಾಗಿದೆ.

ತಮ್ಮ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿರುವುದರಿಂದ ಹೊಸನಗರ ಭಾಗದ ಜನರು ಅಂಬೇಡ್ಕರ್‌ ವೃತ್ತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತರಲು ಹರಸಾಹಸ ಪಡುತ್ತಿದ್ದಾರೆ. ಕೆಲ ಜನರು ವಾಹನ ಸೌಕರ್ಯ ಹೊಂದಿಲ್ಲದ ಕಾರಣ ಅನಿವಾರ್ಯವಾಗಿ ಅಶುದ್ಧ ನೀರನ್ನೇ ಕುಡಿಯುವಂತಾಗಿದೆ.

ವಿಜಯಪುರ: ಆಲಮಟ್ಟಿ ಜಲಾಶಯದಲ್ಲಿ ಸದ್ಯಕ್ಕಿಲ್ಲ ನೀರಿನ ತೊಂದರೆ

ಬೇಸಿಗೆಯಲ್ಲಿ ಪಟ್ಟಣದ ಜನ ಶುದ್ಧ ಕುಡಿಯುವ ನೀರಿಗಾಗಿ ತತ್ವಾರ ಅನುಭವಿಸಿದ್ದಾರೆ. ಈಗ ಮಳೆಗಾಲ ಆರಂಭವಾಗಬೇಕಿತ್ತು. ಆದರೆ, ಈ ಬಾರಿ ಮಳೆಯೂ ಆಗಿಲ್ಲ. ಹೀಗಾಗಿ, ಪ್ರಾಯಶಃ ಮುಂದಿನ ದಿನಗಳಲ್ಲಿ ಪ್ರಾಯಶಃ ನೀರಿನ ಸಮಸ್ಯೆ ಮತ್ತಷ್ಟುಹೆಚ್ಚಲಿದೆ. ಈಗದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು ಸ್ಥಗಿತಗೊಂಡಿರುವ ನೀರಿನ ಘಟಕಗಳ ದುರಸ್ತಿಗೆ ಕ್ರಮವಹಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಆಗುತ್ತದೆ ಅಂತ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ರಹಿಮಾನ್‌ ಕಣಕಾಲ ಹೇಳಿದ್ದಾರೆ. 

ಪಟ್ಟಣದ ಹೊಸನಗರ ಹಾಗೂ ಹಳ್ಳದ ಹತ್ತಿರ ಇರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳ ಮೋಟರ್‌ಗಳು ಜನೇವರಿ ತಿಂಗಳಲ್ಲಿ ಕಳುವಾಗಿದ್ದವು. ಫೆಬ್ರುವರಿ ತಿಂಗಳಲ್ಲಿ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ, ಆ ಮೋಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆದಷ್ಟುಬೇಗ ಮೋಟರ್‌ಗಳನ್ನು ಕೋರ್ಟ್‌ ಮೂಲಕ ಮರಳಿ ಪಡೆದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುನಾರಂಭಿಸಲಾಗುವುದು ಅಂತ ದೇವರಹಿಪ್ಪರಗಿ ಪಪಂ ಮುಖ್ಯಾಧಿಕಾರಿ ರಘು ನಡುವಿನಮನಿ ತಿಳಿಸಿದ್ದಾರೆ. 

click me!