ಕುಡಿವ ನೀರಿನ ಸಮಸ್ಯೆ ಹೊಸ್ತಿಲಲ್ಲಿ ವಿಜಯಪುರ ಜಿಲ್ಲೆ..!

ಆತಂಕದಲ್ಲಿ ಇಡೀ ಜಿಲ್ಲೆಯ ಜನತೆ; ವಿಜಯಪುರ ನಗರದಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ, ಬರಗಾಲದ ಛಾಯೆ; ತಾಲೂಕು ಪ್ರದೇಶಗಳಲ್ಲಿಯೂ ಭೀಕರವಾಗದ ನೀರಿನ ಸಮಸ್ಯೆ ಸಾಧ್ಯತೆ

Likely Water Problem Raise in Vijayapura District grg

ರುದ್ರಪ್ಪ ಆಸಂಗಿ

ವಿಜಯಪುರ(ಜೂ.21): ಜಿಲ್ಲೆಯಲ್ಲಿ ಈಗಾಗಲೇ ರೋಹಿಣಿ ಮಳೆ ಕೈ ಕೊಟ್ಟಿದ್ದು, ಮೃಗಶಿರ ಮಳೆ ಕೂಡಾ ಅಷ್ಟಕ್ಕಷ್ಟೇ ಆಗುತ್ತಿದೆ. ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದ್ದರಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ಎಲ್ಲ ಸ್ಪಷ್ಟಲಕ್ಷಣಗಳು ಗೋಚರಿಸುತ್ತಿವೆ. ಆದರೆ ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಹಾಕಾರ ಹಂತಕ್ಕೆ ತಲುಪಿಲ್ಲ. ಜುಲೈ ಎರಡನೇ ವಾರದವರೆಗೆ ಮಳೆಯಾಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಲಿದೆ. ಹಾಗಾಗಿ ಜಿಲ್ಲೆಯ ಜನರು ಈಗಲೇ ಆತಂಕಕ್ಕೆ ಈಡಾಗಿದ್ದಾರೆ.

ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ, ಹಳಗುಣಕಿ, ಚವಡಿಹಾಳ ಮತ್ತು ಅಗಸನಾಳ ಈ ನಾಲ್ಕು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದನ್ನು ಹೊರತುಪಡಿಸಿದರೆ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಜುಲೈ 15ರ ನಂತರವೂ ಮಳೆಯಾಗದಿದ್ದರೆ ಕುಡಿಯುವ ನೀರಿನ ತಾಪತ್ರಯ ಜಿಲ್ಲೆಯ ಜನರಿಗೆ ತಪ್ಪಿದ್ದಲ್ಲ.

ಕೇಂದ್ರದಿಂದ ಸರ್ವರ್ ಹ್ಯಾಕ್ ಆರೋಪ: ಜಾರಕಿಹೊಳಿಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು!

ಜಿಲ್ಲೆಯಲ್ಲಿ ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆಗಳು ಇನ್ನು ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿ ಜಿಲ್ಲೆಯ 13 ತಾಲೂಕುಗಳಲ್ಲಿ ಇನ್ನು ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿಲ್ಲ. ನದಿಯಲ್ಲಿ ನೀರು ಬರಿದಾಗಿ ಬಹುಹಳ್ಳಿಗಳ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡರೆ ಕುಡಿಯುವ ನೀರಿನ ಸಮಸ್ಯೆ ಘನಘೋರವಾಗಲಿದೆ. ಈಗ ಅಂತಹ ಸ್ಥಿತಿ ಇಲ್ಲ.

ತಾಲೂಕು ಪ್ರದೇಶಗಳಲ್ಲಿಯೂ ಭೀಕರವಾಗದ ನೀರಿನ ಸಮಸ್ಯೆ:

ಜಿಲ್ಲೆಯ ಇತರ ತಾಲೂಕುಗಳಲ್ಲಿ ಇನ್ನು ಕುಡಿಯುವ ನೀರಿನ ಸಮಸ್ಯೆ ಅಷ್ಟುಭೀಕರವಾಗಿಲ್ಲ. ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ, ಕೊಳವೆ ಬಾವಿ, ತೆರೆದ ಬಾವಿ, ಕೆರೆ ಕಟ್ಟೆಗಳಿಂದ ನೀರು ಪೂರೈಕೆಯಾಗುತ್ತಿದೆ. ಆದರೆ ಜೂನ್‌ ಮುಗಿದು ಜುಲೈ ಬಂದರೆ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಲಿದೆ.

ಜುಲೈ ಅಂತ್ಯದವರೆಗೂ ಮಳೆಯಾಗದಿದ್ದರೆ ಜಿಲ್ಲೆಯಲ್ಲಿ ಒಟ್ಟು 132 ಹಳ್ಳಿಗಳು ಕುಡಿಯುವ ನೀರಿನ ಬವಣೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಆಡಳಿತ ಅಂದಾಜಿಸಿದೆ. ವಿಜಯಪುರ ತಾಲೂಕು-14, ಬಬಲೇಶ್ವರ-4, ತಿಕೋಟಾ-24, ಇಂಡಿ-45, ಮುದ್ದೇಬಿಹಾಳ-15, ಸಿಂದಗಿ-18, ದೇವರ ಹಿಪ್ಪರಗಿ-2 ಹಾಗೂ ತಾಳಿಕೋಟೆ-10 ಗ್ರಾಮಗಳು ಜುಲೈವರೆಗೂ ಮಳೆಯಾಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿವೆ.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ:

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇರುವ ಕೊಳವೆ ಬಾವಿಗಳ ದುರಸ್ತಿಗೆ ಅಧಿಕಾರಿಗಳು ಆದ್ಯ ಗಮನ ಹರಿಸಿದ್ದಾರೆ. ಬಂದ್‌ ಬಿದ್ದಿರುವ ಆರ್‌ಒ ಪ್ಲಾಂಟ್‌ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಗತಿಯಲ್ಲಿರುವ ಕುಡಿಯುವ ನೀರಿನ ಯೋಜನೆ ಕೂಡಲೇ ಪೂರ್ಣಗೊಳಿಸಲು ಆದ್ಯತೆ ಮೇರೆಗೆ ಗಮನ ಹರಿಸಲಾಗುತ್ತಿದೆ. ಕುಡಿಯುವ ನೀರು ಪೂರೈಕೆ ಪಂಪ್‌ಸೆಟ್‌ಗಳ ದುರಸ್ತಿ, ಕೊಳವೆ ಬಾವಿಗಳ ಸ್ಥಿತಿಗತಿ ಅಧ್ಯಯನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕುಡಿಯುವ ನೀÃನ ಸಮಸ್ಯೆ ಭೀಕರವಾದರೆ ಶಾಲೆ, ಕಾಲೇಜು, ಖಾಸಗಿ ಕೊಳವೆ ಬಾವಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇದಾವುದೂ ಫಲ ಕೊಡದಿದ್ದರೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆಯ ಕೊನೆಯ ಅಸ್ತ್ರಕ್ಕೆ ಜಿಲ್ಲಾಡಳಿತ ಅಸ್ತು ಎನ್ನಲಿದೆ.

ಖಾಲಿಯಾಗುತ್ತಿರುವ ಆಲಮಟ್ಟಿ ಜಲಾಶಯ

ಸದ್ಯಕ್ಕೆ ಕೃಷ್ಣಾ ನದಿಯಲ್ಲಿ ದಿನೇದಿನೇ ನೀರು ಭಾರಿ ಪ್ರಮಾಣದಲ್ಲಿ ಕಡಮೆಯಾಗುತ್ತಿದೆ. ಆಲಮಟ್ಟಿಅಣೆಕಟ್ಟೆಯಲ್ಲಿ ಸದ್ಯಕ್ಕೆ 20 ಟಿಎಂಸಿ ಮಾತ್ರ ನೀರಿದೆ. 123.081 ಟಿಎಂಸಿ ಗರಿಷ್ಠ ನೀರಿನ ಸಂಗ್ರಹ ಮಟ್ಟವಿದೆ. ಅಂದರೆ 519.60 ಮೀಟರ್‌ ಗರಿಷ್ಠ ಮಟ್ಟದ ಆಲಮಟ್ಟಿ ಅಣೆಕಟ್ಟೆಯಲ್ಲಿ ಸದ್ಯಕ್ಕೆ 507. 62 ಮೀಟರ್‌ ನೀರಿದೆ. ಈ ಪೈಕಿ 17 ಟಿಎಂಸಿ ಡೆಡ್‌ ಸ್ಟೋರೆಜ್‌ ಇದೆ. ಅದನ್ನು ಬಳಸಲು ಬರುವುದಿಲ್ಲ. ಅನಿವಾರ್ಯ ಪ್ರಸಂಗಗಳಲ್ಲಿ ಡೆಡ್‌ ಸ್ಟೋರೆಜ್‌ ಬಳಸಿದ ಉದಾಹರಣೆಗಳು ಇವೆ. 2016, 2017 ವರ್ಷ ಸೇರಿದಂತೆ ಹಲವಾರು ವರ್ಷಗಳಲ್ಲಿ ಡೆಡ್‌ಸ್ಟೋರೆಜ್‌ ಬಳಕೆ ಮಾಡಿಕೊಂಡಿದ್ದುಂಟು. ಈಗ ಅಣೆಕಟ್ಟೆಯಲ್ಲಿ ಕೇವಲ 2 ಟಿಎಂಸಿ ನೀರು ಬಳಕೆಗೆ ಮಾತ್ರ ಇದೆ. ಜುಲೈವರೆಗೆ ನೀರಿನ ಸಮಸ್ಯೆಯಾಗುವುದಿಲ್ಲ. ಅಷ್ಟರಲ್ಲಿಯೇ ಮಳೆ ಸುರಿದು ನದಿಗೆ ನೀರು ಹರಿದು ಬಂದರೆ ಜಿಲ್ಲೆಯ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಪಾರಾಗುತ್ತಾರೆ. ಇಲ್ಲದಿದ್ದರೆ ನೀರಿನ ಸಮಸ್ಯೆಯ ಸುಳಿಗೆ ಸಿಲುಕಿ ಜನ ನಲುಗುವುದು ನಿಶ್ಚಿತ.

ವಿಜಯಪುರ ನಗರಕ್ಕೂ ಕುಡಿಯುವ ನೀರಿನ ಸಮಸ್ಯೆ ಬಿಸಿ

ಕೃಷ್ಣಾ ನದಿಯಲ್ಲಿ ನೀರು ಖಾಲಿಯಾದರೆ ವಿಜಯಪುರ ನಗರಕ್ಕೂ ಕುಡಿಯುವ ನೀರಿನ ಬಿಸಿ ತಟ್ಟಲಿದೆ. 40 ಕಿ.ಮಿ. ದೂರ ಕೊಲ್ಹಾರ ಬಳಿ ಕೃಷ್ಣಾ ನದಿಯಿಂದ ವಿಜಯಪುರ ಸೇರಿದಂತೆ ಅನೇಕ ಗ್ರಾಮಗಳಿಗೂ ನೀರು ಪೂರೈಕೆಯಾಗುತ್ತಿದೆ. ಒಂದೊಮ್ಮೆ ನದಿ ನೀರು ಖಾಲಿಯಾದರೆ ಸುಮಾರು 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ವಿಜಯಪುರ ಮಹಾನಗರಕ್ಕೂ ಕುಡಿಯುವ ನೀರಿನ ತಾಪತ್ರಯ ತಪ್ಪಿದ್ದಲ್ಲ. ವಿಜಯಪುರ ನಗರದಲ್ಲಿ 35 ವಾರ್ಡ್‌ಗಳಿದ್ದು, ಅವುಗಳಲ್ಲಿ ಸಕಾಲಕ್ಕೆ ನೀರು ಒದಗಿಸುವುದು ಈಗ ಕೂಡಾ ಕಷ್ಟವಾಗಿದೆ. ಸದ್ಯಕ್ಕೆ ಕೆಲವೊಂದು ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ಹಾಗೂ ಇನ್ನು ಕೆಲ ವಾರ್ಡ್‌ಗಳಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನದಿಯಲ್ಲಿ ಇರುವ ನೀರು ಬರಿದಾದರೆ ವಿಜಯಪುರ ನಗರದ ಜನತೆ ಕುಡಿಯುವ ನೀರಿಗಾಗಿ ಪಡಬಾರದ ಕಷ್ಟಅನುಭವಿಸಬೇಕಾಗುತ್ತದೆ. ಈಗಾಗಲೇ ಜಿಲ್ಲಾ ಆಡಳಿತ ನದಿ ದಂಡೆಯ ರೈತರ ಪಂಪ್‌ಸೆಟ್‌ಗಳನ್ನು ಬಂದ್‌ ಮಾಡಿ ಕುಡಿಯುವ ಸಲುವಾಗಿ ಮಾತ್ರ ನೀರು ಬಳಸಬೇಕು. ಕೃಷಿಗೆ ನೀರು ಬಳಸದಂತೆ ಕ್ರಮ ಕೈಗೊಳ್ಳಲಾಗಿದೆ. ಜೂನ್‌ ಅಂತ್ಯದ ಒಳಗಾಗಿ ಇಲ್ಲವೆ ಜುಲೈ ತಿಂಗಳ ಮೊದಲ ಇಲ್ಲವೆ ಎರಡನೆ ವಾರ ಮಳೆಯಾಗಿ ಕೃಷ್ಣಾ ನದಿಗೆ ನೀರು ಹರಿದು ಬಂದರೆ ವಿಜಯಪುರ ನಗರ ಕುಡಿಯುವ ನೀರಿನ ಸಮಸ್ಯೆಯಿಂದ ಬಚಾವ್‌ ಆಗಬಹುದು. ಇಲ್ಲದಿದ್ದರೆ ನೀರಿಗಾಗಿ ಹಾಹಾಕಾರ ಪರಿಸ್ಥಿತಿ ತಲೆದೋರುವ ಭೀತಿ ಇದೆ.

ಗ್ಯಾರಂಟಿ ಎಫೆಕ್ಟ್‌: ಪ್ರವಾಸಿ ತಾಣಗಳಿಗೆ ಮಹಿಳಾ ಪ್ರವಾಸಿಗರ ಲಗ್ಗೆ

ಸದ್ಯಕ್ಕೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿಲ್ಲ. ಮುಂದೆಯೂ ಮಳೆಯಾಗದಿದ್ದರೆ ಸಮಸ್ಯೆ ಎದುರಾಗಬಹುದು. ಹಾಗಾಗಿ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಈಗಾಗಲೇ ಸೂಕ್ತ ನಿರ್ದೇಶನ ನೀಡಲಾಗಿದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆಗೆ ಪ್ರಥಮಾದ್ಯತೆ ನೀಡುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬರಲಿರುವ ದಿನಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಜಿಲ್ಲಾ ಪಂಚಾಯತಿ ಸಕಲ ಸಿದ್ಧತೆ, ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ ಅಂತ ವಿಜಯಪುರ ಜಿಲ್ಲೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಹೇಳಿದ್ದಾರೆ.  

ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಜುಲೈ ನಂತರವೂ ಮಳೆಯಾಗದಿದ್ದರೆ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಜಿಲ್ಲಾ ಆಡಳಿತ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಜಿಲ್ಲಾಧಿಕಾರಿಗಳವರ ಪೃಕೃತಿ ವಿಕೋಪದ ಪಿ.ಡಿ.ಖಾತೆಯಲ್ಲಿ .30 ಕೋಟಿ ಅನುದಾನ ಶಿಲ್ಕು ಇದ್ದು, ಹೆಚ್ಚುವರಿಯಾಗಿ .5 ಕೋಟಿ ಅನುದಾನ ಬಿಡುಗಡೆ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಅಂತ ವಿಜಯಪುರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios