ದಾವಣಗೆರೆಯಲ್ಲಿ ನಡೆದ ದುಗ್ಗಮ್ಮ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಜನರು ಬೆತ್ತಲಾಗಿ ದೇವಿಗೆ ಹರಕೆ ತೀರಿಸಿದರು. ಜಿಲ್ಲಾಧಿಕಾರಿ ಸೂಚನೆ ನಡುವೆ ಈ ಹರಕೆ ಸಲ್ಲಿಸಲಾಯಿತು.
ದಾವಣಗೆರೆ [ಮಾ.05]: ಅರೆ ಬೆತ್ತಲೆಯಾಗಿ ಬೇವಿನ ಹರಕೆ ತೀರಿಸುತ್ತಿದ್ದ ಭಕ್ತರು, ಕುಟುಂಬ ಸದಸ್ಯರನ್ನು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಬುಧವಾರ ನಡೆಯಿತು.
ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಸಹಸ್ರಾರು ಭಕ್ತರು ದೇವಸ್ಥಾನದ ಬಳಿ ಸೇರಿದ್ದರು. ಮಂಗಳವಾರ ಸಂಜೆಯಿಂದಲೇ ಕೆಲವರು ಅರೆ ಬೆತ್ತಲೆಯಾಗಿ, ಮತ್ತೆ ಕೆಲವರು ಯಾವುದೇ ವಸ್ತ್ರ ಧರಿಸದೇ ಬೇವಿನುಡುಗೆ ತೊಟ್ಟು ದುಗ್ಗಮ್ಮನ ಗುಡಿಯತ್ತ ಹೆಜ್ಜೆ ಹಾಕಿದ್ದರು.
ಕಳೆದ ರಾತ್ರಿಯಿಂದಲೂ ಕೋಣ ಬಲಿ ತಡೆಗಾಗಿ ದೇವಸ್ಥಾನದ ಬಳಿ ಮೊಕ್ಕಾಂ ಹೂಡಿದ್ದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು ಕುಳಿತಲ್ಲೇ ಕೂಡದೇ ಎಲ್ಲ ಕಡೆ ಸಂಚರಿಸುತ್ತಾ, ಮೌಢ್ಯ ನಿಷೇಧ ಕಾಯ್ದೆ ಜಾರಿ ಬಗ್ಗೆಯೂ ಅರಿವು ಮೂಡಿಸುತ್ತಿದ್ದರು. ಇದೇ ವೇಳೆ ಅರೆ ಬೆತ್ತಲೆ, ಮಕ್ಕಳು, ಹಿರಿಯರು ಯಾವುದೇ ಬಟ್ಟೆಧರಿಸದೇ, ಕೇವಲ ಬೇವಿನುಡುಗೆ ತೊಟ್ಟು ಹೋಗುತ್ತಿದ್ದ ದೃಶ್ಯ ಗಮನಿಸಿದರು.
ಕೊರೋನಾ ತಡೆಗಟ್ಟಲು ಏನ್ಮಾಡ್ಬೇಕು? ಶ್ವಾಸಗುರು ವಚನಾನಂದ ಸ್ವಾಮೀಜಿ ಸಲಹೆ ಕೇಳಿ..
ದುಗ್ಗಮ್ಮಾ ನಿನ್ನಾಲ್ಕು ಉಧೋ..ಉಧೋ...ಎಂಬ ಘೋಷವಾಕ್ಯ ಮೊಳಗಿಸುತ್ತಾ ಬೇವಿನುಡುಗೆ ತೊಟ್ಟು ಗುಡಿಯತ್ತ ಬಂದವರು, ಬರುತ್ತಿದ್ದವರು ಹಗಲು-ರಾತ್ರಿ ಎನ್ನದೇ ಹರಕೆ ತೀರಿಸುತ್ತಿದ್ದರು. ಬೇವಿನುಡುಗೆ ತೊಟ್ಟು ಹರಕೆ ತೀರಿಸುವ ಭಕ್ತರು ಒಂದು ಕಡೆಯಾದರೆ, ಉರುಳು ಸೇವೆ ಮಾಡುವ ಭಕ್ತರು ಮತ್ತೊಂದು ಕಡೆ, ದೀಡು ನಮಸ್ಕಾರ ಹಾಕುವ ಭಕ್ತರು ಮಗದೊಂದು ಕಡೆ ಕಂಡು ಬಂದರು.
ದೇವಸ್ಥಾನ ಸುತ್ತಮುತ್ತಲ ವಾತಾವರಣ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜಿಲ್ಲಾಧಿಕಾರಿ ಬೀಳಗಿ, ಎಸ್ಪಿ ಹನುಮಂತರಾಯ ಅಲ್ಲಿ ಮಕ್ಕಳು, ಮಹಿಳೆಯರು ಅರೆ ಬೆತ್ತಲೆಯಾಗಿ ಬೇವಿನುಡುಗೆ ತೊಟ್ಟು, ದೇವಸ್ಥಾನ ಪ್ರದಕ್ಷಿಣೆ ಹಾಕುವುದನ್ನು ಗಮನಿಸಿ, ಹೀಗೆ ಅರೆ ಬೆತ್ತಲೆ ಸೇವೆ ಸರಿಯಲ್ಲ. ಮೌಢ್ಯಾಚರಣೆ ಕೈಬಿಡುವಂತೆ ತಿಳಿ ಹೇಳಿದರು.
ಮಕ್ಕಳನ್ನು ಬೆತ್ತಲೆ ಮಾಡಿ, ನೀರು ಹಾಕಿ ಬೇವಿನುಡುಗೆ ಉಡಿಸುತ್ತಿದ್ದ ಮಹಿಳೆಯರು, ಪಾಲಕರಿಗೂ ಡಿಸಿ, ಎಸ್ಪಿ ತರಾಟೆಗೆ ತೆಗೆದುಕೊಂಡರು. ಇಂತಹ ಮೂಢನಂಬಿಕೆಯಿಂದ ಮಕ್ಕಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡುವುದು ಸರಿಯಲ್ಲ ಎಂಬುದಾಗಿ ಡಿಸಿ ಬುದ್ಧಿ ಹೇಳಿದರು. ಅತ್ತ ಎಸ್ಪಿ ಹನುಮಂತರಾಯ, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಇಂತಹದ್ದರ ಬಗ್ಗೆ ಅರಿವು ಮೂಡಿಸಲು ಬರುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.