ದಂಡ ಇಳಿಸಿದ್ದೇ ತಡ ಮಾಸ್ಕ್‌ ಧರಿಸದವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ

By Kannadaprabha NewsFirst Published Oct 9, 2020, 8:55 AM IST
Highlights

ದಂಡ ಮೊತ್ತ ಒಂದು ಸಾವಿರ ರುಪಾಯಿಗೆ ಹೆಚ್ಚಾಗುತ್ತಿದ್ದಂತೆ ದಂಡ ವಿಧಿಸುವ ಪ್ರಕರಣಗಳ ಸಂಖ್ಯೆ 400 ರಿಂದ 500ಕ್ಕೆ ಇಳಿಕೆಯಾಗಿತ್ತು| ಇದೀಗ ದಂಡ ಮೊತ್ತವನ್ನು 250ಕ್ಕೆ ಇಳಿಕೆ ಮಾಡಿದ ನಂತರ ಪ್ರಕರಣಗಳ ಸಂಖ್ಯೆ 900ಕ್ಕಿಂತ ಹೆಚ್ಚು| 

ಬೆಂಗಳೂರು(ಅ.09): ಮಾಸ್ಕ್‌ ಮತ್ತು ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಒಂದು ಸಾವಿರದಿಂದ 250ರು.ಗೆ ಕಡಿಮೆ ಮಾಡಿದ ಬೆನ್ನಲ್ಲೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಈ ಹಿಂದೆ ನಿಯಮ ಉಲ್ಲಂಘಿಸಿದವರಿಗೆ 200 ರು. ದಂಡವಿದ್ದಾಗ ನಿತ್ಯ ಎರಡು ಸಾವಿರಕ್ಕೂ ಅಧಿಕ ಮಂದಿಗೆ ಪ್ರತಿದಿನ ಮಾರ್ಷಲ್‌ಗಳು ದಂಡ ವಿಧಿಸುತ್ತಿದ್ದರು. ದಂಡ ಮೊತ್ತ ಒಂದು ಸಾವಿರ ರುಪಾಯಿಗೆ ಹೆಚ್ಚಾಗುತ್ತಿದ್ದಂತೆ ದಂಡ ವಿಧಿಸುವ ಪ್ರಕರಣಗಳ ಸಂಖ್ಯೆ 400 ರಿಂದ 500ಕ್ಕೆ ಇಳಿಕೆಯಾಗಿತ್ತು. ಇದೀಗ ದಂಡ ಮೊತ್ತವನ್ನು 250ಕ್ಕೆ ಇಳಿಕೆ ಮಾಡಿದ ನಂತರ ಪ್ರಕರಣಗಳ ಸಂಖ್ಯೆ 900ಕ್ಕಿಂತ ಹೆಚ್ಚಾಗಿದೆ. ಗುರುವಾರ ನಗರದಲ್ಲಿ ಮಾಸ್ಕ್‌ ಧರಿಸದ 925 ಹಾಗೂ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ 60 ಸೇರಿ ಒಟ್ಟು 985 ಪ್ರಕರಣಗಳಿಂದ 2.63 ಲಕ್ಷ ಸಂಗ್ರಹವಾಗಿದೆ.

ಮಾಸ್ಕ್‌ ಧರಿಸದೆ ಓಡಾಡುವವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಪೂರ್ವ ವಲಯದಲ್ಲೆ ಅತೀ ಹೆಚ್ಚು 290 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 72,500 ರು. ಹಣ ಸಂಗ್ರಹಿಸಲಾಗಿದೆ. ಇನ್ನು ಪಶ್ಚಿಮ ವಲಯದಲ್ಲಿ ಒಟ್ಟು 267 ಪ್ರಕರಣದಿಂದ 67,500 ರು., ದಕ್ಷಿಣ ವಲಯದಲ್ಲಿ 146 ಪ್ರಕರಣದಿಂದ 42,500 ರು., ಮಹದೇವಪುರದಲ್ಲಿ 113 ಪ್ರಕರಣದಿಂದ 29,000 ರು., ಆರ್‌.ಆರ್‌.ನಗರದಲ್ಲಿ 97 ಪ್ರಕರಣದಿಂದ 25,500, ಯಲಹಂಕದಲ್ಲಿ 15 ಪ್ರಕರಣದಿಂದ 3,750 ರು., ದಾಸರಹಳ್ಳಿಯಲ್ಲಿ ಎರಡು ಪ್ರಕರಣದಿಂದ 500 ರು. ಹಾಗೂ ಬೊಮ್ಮನಹಳ್ಳಿಯಲ್ಲಿ 55 ಪ್ರಕರಣದಿಂದ 22,008 ರು. ಹಣ ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!