ಕೊರೋನಾ ಕಾಟಕ್ಕೆ ಸುಸ್ತಾದ ಜನ: ಊರಿಗೆ ಹೋಗಲು ಪ್ರಯಾಣಿಕರ ಹಿಂದೇಟು!

By Kannadaprabha News  |  First Published Mar 18, 2020, 10:39 AM IST

ಬಸ್‌- ರೈಲು ಪ್ರಯಾಣದಲ್ಲಿ ಇಳಿಮುಖ| ನಷ್ಟದ ಭೀತಿ ಎದುರಿಸುತ್ತಿವೆ ಸಾರಿಗೆ ಇಲಾಖೆ|ಸಬಳ್ಳಾರಿ ವಿಭಾಗದಿಂದ 46 ಬಸ್‌ಗಳು ರದ್ದು| 


ಬಳ್ಳಾರಿ(ಮಾ.18): ಕೊರೋನಾ ವೈರಸ್‌ನ ಭೀತಿಯಿಂದ ಜನರು ಹೊರ ಬಂದಿಲ್ಲ!. ದಿನದಿನಕ್ಕೆ ಹೆಚ್ಚುತ್ತಿರುವ ಸೋಂಕಿನ ಪ್ರಮಾಣ ಮತ್ತಷ್ಟೂ ದಿಗಿಲು ಮೂಡಿಸಿದ್ದು ಬಸ್‌ ಹಾಗೂ ರೈಲು ಪ್ರಯಾಣದಲ್ಲಿ ತೀವ್ರ ಇಳಿಮುಖ ಕಂಡಿದೆ. ಪ್ರಯಾಣ ದಿನಾಂಕ ಗೊತ್ತುಪಡಿಸಿ ಮುಂಗಡ ಟಿಕೆಟ್‌ ಪಡೆದವರು ರದ್ದು ಪಡಿಸಿಕೊಳ್ಳುತ್ತಿದ್ದಾರೆ. ಸದ್ಯ ಪ್ರಯಾಣದ ಸಹವಾಸವೇ ಬೇಡ ಎಂದು ದೂರ ಉಳಿಯುತ್ತಿದ್ದಾರೆ.

ಖರೀದಿ ಮಾಡೋರಿಲ್ಲದೆ ಇಳಿದ ಚಿನ್ನ-ಬೆಳ್ಳಿ ಬೆಲೆ!

Tap to resize

Latest Videos

ಸಾರಿಗೆ ಸೇವೆ ಸುಗಮಗೊಳಿಸಲು ಜಿಲ್ಲೆಯಲ್ಲಿ ಬಳ್ಳಾರಿ ಹಾಗೂ ಹೊಸಪೇಟೆ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಎರಡು ವಿಭಾಗದಲ್ಲೂ ನಿತ್ಯ ನೂರಾರು ಬಸ್‌ಗಳ ಓಡಾಟವಿದೆ. ಆದರೆ, ಕಳೆದ ಒಂದು ವಾರದಿಂದ ಪ್ರಯಾಣಿಕರ ಓಡಾಟದಲ್ಲಿ ಇಳಿಮುಖ ಕಂಡಿದೆ. ಪ್ರಮುಖವಾಗಿ ಬೆಂಗಳೂರು, ಹೈದ್ರಾಬಾದ್‌ ಹಾಗೂ ಕಲಬುರಗಿ ಕಡೆಗೆ ತೆರಳಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯವಾಗಿ ಓಡಾಡುವ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಇಳಿದಿದೆ. ಕೊರೋನಾ ಸೋಂಕು ಶಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಜನರು ಭಯಭೀತರಾಗಿದ್ದು ಎಲ್ಲೂ ಹೋಗದೆ ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ಇದು ಸಾರಿಗೆ ಇಲಾಖೆಯ ನಿತ್ಯದ ವಹಿವಾಟಿಗೆ ಕುತ್ತು ತಂದಿದ್ದು ಈಗಾಗಲೇ ನಷ್ಟಎದುರಿಸುತ್ತಿರುವ ಬಳ್ಳಾರಿ ವಿಭಾಗಕ್ಕೆ ನುಂಗದ ತುತ್ತಾಗಿ ಪರಿಣಮಿಸಿದೆ. ಹೊಸಪೇಟೆ ವಿಭಾಗ ಲಾಭದಲ್ಲಿರುವುದರಿಂದ ಈಗಾಗುತ್ತಿರುವ ನಷ್ಟವನ್ನು ಎದುರಿಸದೆ ವಿಧಿಯಿಲ್ಲ ಎನ್ನುವಂತಾಗಿದೆ.

46 ಬಸ್‌ಗಳ ರದ್ದು:

ಪ್ರಯಾಣಿಕರ ಇಳಿಮುಖದಿಂದಾಗಿ ಬಳ್ಳಾರಿ ವಿಭಾಗದಿಂದ 46 ಬಸ್‌ಗಳನ್ನು ರದ್ದುಪಡಿಸಲಾಗಿದೆ. ಈ ವಿಭಾಗದಿಂದ ಒಟ್ಟು 364 ಷೆಡ್ಯೂಲ್ಡ್‌ನಲ್ಲಿ 320 ಬಸ್‌ಗಳು ಓಡಾಟವಿತ್ತು. ಜನರಿಲ್ಲದೆ ಬಿಕೋ ಎನ್ನುತ್ತಿರುವುದರಿಂದ ಬೆಂಗಳೂರು, ಕಲಬುರಗಿ, ಹೈದ್ರಾಬಾದ್‌ ಸೇರಿದಂತೆ ಒಟ್ಟು 46 ಬಸ್‌ಗಳನ್ನು ರದ್ದುಪಡಿಸಲಾಗಿದೆ. ದಿನಕ್ಕೆ . 4 ರಿಂದ 4.5 ಲಕ್ಷ ನಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಜನರಿಲ್ಲದೆ ಬಸ್‌ಗಳ ಓಡಲು ಸಾಧ್ಯವಾಗದು. ಈಗಲೇ ನಷ್ಟದಲ್ಲಿದ್ದೇವೆ. ಮತ್ತಷ್ಟೂನಷ್ಟಎದುರಿಸುವುದು ಕಷ್ಟಸಾಧ್ಯ. ಹೀಗಾಗಿಯೇ ಅನೇಕ ಮಾರ್ಗಗಳ ಬಸ್‌ ರದ್ದು ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಸ್ಲೀಪರ್ ಕೋಚ್‌ ಬಸ್‌ಗಳು ರದ್ದು:

ಹೊಸಪೇಟೆ ವಿಭಾಗದಿಂದ ಹೈದ್ರಾಬಾದ್‌ ಹಾಗೂ ಕಲಬುರಗಿಗೆ ಹೋಗುವ ಬಸ್‌ಗಳ ಪೈಕಿ ಪ್ರತಿ ಕಿ.ಮೀಗೆ . 10 ನಷ್ಟಉಂಟಾಗುತ್ತಿದೆ. ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 50 ರಷ್ಟು ತಗ್ಗಿದೆ.

ಹೊರಗೆ ಬರೋಕೆ ಜನರೇ ಸಿದ್ಧರಿಲ್ಲ! ಎಲ್ಲಾ ಖಾಲಿ ಖಾಲಿ

ಹೊಸಪೇಟೆಯಿಂದ ಬೆಂಗಳೂರು, ಮಂಗಳೂರು, ಹೈದ್ರಾಬಾದ್‌, ಕಲಬುರಗಿ, ಪಣಜಿ, ಶಿರಡಿ ಸೇರಿದಂತೆ ನಿತ್ಯ 455 ಷೆಡ್ಯೂಲ್ಡ್‌ನಲ್ಲಿ 503 ವಾಹನಗಳು ಓಡಾಟ ಮಾಡುತ್ತಿದ್ದು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿಯುತ್ತಿರುವುದು ಕಂಡು ಬಂದಿದೆ. ಇದರಿಂದ ಹೊಸಪೇಟೆ ವಿಭಾಗವೊಂದೇ ನಿತ್ಯ 1.50 ಲಕ್ಷ ನಷ್ಟಅನುಭವಿಸುತ್ತಿದೆ. ಬೆಂಗಳೂರು, ಹೈದ್ರಾಬಾದ್‌ ಹಾಗೂ ಕಲಬುರಗಿಯ ಪ್ರತಿ ವಾಹನಕ್ಕೆ ನಿತ್ಯ 10 ಸಾವಿರ ನಷ್ಟವಾಗುತ್ತಿದ್ದು ಸ್ಥಳೀಯವಾಗಿ ಓಡಾಡುವ ಬಸ್‌ಗಳಿಂದ ಅಂತಹ ಸಮಸ್ಯೆಯಾಗಿಲ್ಲ. ಬೆಂಗಳೂರು- ಹೈದ್ರಾಬಾದ್‌ಗೆ ತೆರಳುವ 5 ಸ್ಲೀಪರ್‌ ವಾಹನಗಳು ಹಾಗೂ ಹಂಪಿಗೆ ತೆರಳುತ್ತಿದ್ದ 4 ಬಸ್‌ಗಳನ್ನು ರದ್ದುಪಡಿಸಲಾಗಿದೆ.

ರೈಲು ಪ್ರಯಾಣದಲ್ಲೂ ಕುಸಿತ:

ಕೊರೋನಾ ವೈರಸ್‌ ಆತಂಕ ರೈಲು ಪ್ರಯಾಣವನ್ನು ಇಳಿಮುಖಗೊಳಿಸಿದೆ. ಮುಂಗಡ ಟಿಕೆಟ್‌ಗಾಗಿ ಬರುವ ಪ್ರಯಾಣಿಕರು ರೈಲು ಪ್ರಯಾಣದಿಂದ ದೂರ ಉಳಿದಿದ್ದಾರೆ. ಈಗಾಗಲೇ ಮುಂಗಡ ಟಿಕೆಟ್‌ ಪಡೆದುಕೊಂಡವರು ರದ್ದುಪಡಿಸಿಕೊಳ್ಳುತ್ತಿದ್ದಾರೆ.

ಬಳ್ಳಾರಿಯ ರೈಲ್ವೆ ನಿಲ್ದಾಣದ ಮುಂಗಡ ಟಿಕೆಟ್‌ ಕೌಂಟರ್‌ನಲ್ಲಿ ನಿತ್ಯ ಸುಮಾರು 900 ಮುಂಗಡ ಟಿಕೆಟ್‌ಗಳು ಹೋಗುತ್ತಿದ್ದವು. 3 ಲಕ್ಷಗಳ ವರೆಗೆ ಮುಂಗಡ ಟಿಕೆಟ್‌ನ ಹಣ ಸಿಗುತ್ತಿತ್ತು. ಇದೀಗ ಅದರ ಪ್ರಮಾಣ ತೀರ ಕುಸಿತ ಕಂಡಿದೆ.

ಕಳೆದ ಮಾಚ್‌ರ್‍ 13 ರಂದು 650 ಜನರು ಮುಂಗಡ ಟಿಕೆಟ್‌ ಪಡೆದಿದ್ದು, 59 ಸಾವಿರ ಹಣ ಬಂದಿದೆ.  2.69 ಲಕ್ಷಗಳ ಮುಂಗಡ ಟಿಕೆಟ್‌ ಹಣವನ್ನು ಪ್ರಯಾಣಿಕರಿಗೆ ಹಿಂದಕ್ಕೆ ನೀಡಲಾಗಿದೆ. ಮಾ. 14ರಂದು 480 ಮುಂಗಡ ಟಿಕೆಟ್‌ನಲ್ಲಿ . 83 ಸಾವಿರ ಹಣ ಪಡೆದಿರುವ ರೈಲ್ವೆ ಇಲಾಖೆ, 1.34 ಲಕ್ಷ ಮುಂಗಡ ಟಿಕೆಟ್‌ನ ಹಣವನ್ನು ಪ್ರಯಾಣಿಕರಿಗೆ ಹಿಂದಕ್ಕೆ ನೀಡಿದೆ.

15ನೇ ತಾರೀಖಿನಂದು 400 ಮುಂಗಡ ಟಿಕೆಟ್‌ನಲ್ಲಿ 82 ಸಾವಿರ ಹಣ ಪಡೆದ ರೈಲ್ವೆ ಇಲಾಖೆ, 56 ಸಾವಿರ ಹಣವನ್ನು ಪ್ರಯಾಣಿಕರಿಗೆ ಹಿಂದಕ್ಕೆ ನೀಡಲಾಗಿದೆ. ಸಾಮಾನ್ಯ (ಜನರಲ್‌) ಕೌಂಟರ್‌ನಲ್ಲಿ ಪ್ರತಿ ತಿಂಗಳಲ್ಲಿ . 1.66 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಈ ಪೈಕಿ ಶೇ. 50 ರಷ್ಟುಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ನಿತ್ಯ 5 ಲಕ್ಷ ಟಿಕೆಟ್‌ ಹಣ ಬರುತ್ತಿತ್ತು. ಇದೀಗ 3 ಲಕ್ಷಕ್ಕೆ ಇಳಿಕೆಯಾಗಿದೆ.

ಮರಳಿ ಬಂದ ಯುವಕರು:

ಕೊರೋನಾ ವೈರಸ್‌ ಹರಡುವ ಭೀತಿಯಿಂದ ಬೆಂಗಳೂರು, ಹೈದ್ರಾಬಾದ್‌, ಪಣಜಿ, ಮುಂಬೈ ಸೇರಿದಂತೆ ನಾನಾ ಕಡೆ ವಿವಿಧ ಉದ್ಯೋಗದಲ್ಲಿರುವ ಯುವಕರು ಊರಿಗೆ ಮರಳುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದ ಜಿಲ್ಲೆಯ ಸಾವಿರಾರು ಯುವಕರು ಬೆಂಗಳೂರಿನ ವಿವಿಧ ಕಂಪನಿಗಳ ಕಾರ್ಯನಿರ್ವಹಿಸುತ್ತಿದ್ದರು. ವೈರಸ್‌ ಭೀತಿ ಶುರುವಾಗುತ್ತಿದ್ದಂತೆಯೇ ನಗರ ಹಾಗೂ ಹಳ್ಳಿಗಳಿಗೆ ಮರಳಿದ್ದಾರೆ. ನಮ್ಮೂರೇ ಸೇಫ್‌ ಅಂತ ವಾಪಾಸು ಬಂದಿದ್ದೇವೆ. ಮತ್ತೆ ಬೆಂಗಳೂರಿಗೆ ಹೋಗುವ ವಿಚಾರ ಸದ್ಯಕ್ಕೆ ಮಾಡುವುದಿಲ್ಲ. ಮುಂದೆ ನೋಡೋಣ ಎನ್ನುತ್ತಿದ್ದಾರೆ.

ಬಸ್‌ ನಿಲ್ದಾಣಗಳು ಬಣ ಬಣ:

ಪ್ರಯಾಣಿಕರಿಂದ ತುಂಬಿಕೊಂಡು ಸದಾ ಚಟುವಟಿಕೆಯಿಂದ ಇರುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ನಗರದ ನಲ್ಲಚೆರವು ಬಸ್‌ ನಿಲ್ದಾಣ ಹಾಗೂ ರಾಯಲ್‌ ಬಸ್‌ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಇದರಿಂದ ಬಸ್‌ ನಿಲ್ದಾಣದಲ್ಲಿದ್ದ ಅಂಗಡಿ, ಹೊಟೇಲ್‌ಗಳು ಮತ್ತಿತರ ಸಣ್ಣಪುಟ್ಟವ್ಯಾಪಾರಗಳು ನೆಲಕಚ್ಚಿವೆ. ಖಾಸಗಿ ಬಸ್‌ ನಿಲ್ದಾಣದಲ್ಲಿಯೂ ಇದೇ ಸ್ಥಿತಿ ಇದೆ.

ಕರೋನಾ ಭೀತಿಯಿಂದ ಜನರ ಓಡಾಟ ತೀವ್ರ ಕಡಿಮೆಯಾಗಿದ್ದರಿಂದ ಹೈದ್ರಾಬಾದ್‌, ಬೆಂಗಳೂರು ಸೇರಿದಂತೆ ಅನೇಕ ಮಾರ್ಗಗಳನ್ನು ರದ್ದುಪಡಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಕ ಚಂದ್ರಶೇಖರ್‌ ಹೇಳಿದ್ದಾರೆ. ಹೊಸಪೇಟೆ ವಿಭಾಗ ನಷ್ಟದಲ್ಲಿಲ್ಲ. ಹೀಗಾಗಿ ಹೆಚ್ಚಿನ ಬಸ್‌ಗಳನ್ನು ರದ್ದು ಮಾಡಿಲ್ಲ. ರೆವಿನ್ಯೂ ಬರುತ್ತಿದೆ. ಬೆಂಗಳೂರಿಗೆ ತೆರಳುವ 5 ಸ್ಲೀಪರ್‌ ಹಾಗೂ ಹಂಪಿಗೆ ಹೋಗುತ್ತಿದ್ದ 5 ಬಸ್‌ಗಳನ್ನಷ್ಟೇ ರದ್ದು ಮಾಡಿದ್ದೇವೆ ಎಂದು ಹೊಸಪೇಟೆ ವಿಭಾಗದ ನಿಯಂತ್ರಕರು ಸೀನಯ್ಯ ಹೇಳಿದ್ದಾರೆ.
 

click me!