ಬೆಂಗಳೂರಿನ ಜನತೆ ಊಟ ತಿಂಡಿಗಾಗಿ ಉದಾರವಾಗಿ ಹಣವನ್ನು ಖರ್ಚು ಮಾಡುತ್ತಾರೆ. ಅವರು ಖರ್ಚು ಮಾಡುವ ಹಣವು ದೇಶದಲ್ಲೇ ಹೆಚ್ಚು ಎನ್ನಲಾಗಿದೆ.
ನವದೆಹಲಿ [ಜ.12]: ರೆಸ್ಟೋರೆಂಟ್, ಹೋಟೆಲ್, ಪಬ್‌ಗಳಲ್ಲಿ ಅತಿ ಹೆಚ್ಚು ಬಿಲ್ ಪಾವತಿಸಿದ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ.
ರೆಸ್ಟೋರೆಂಟ್ ಸೊಲ್ಯೂಷನ್ ಕಂಪನಿ ಡೈನ್‌ಔಟ್ 2019ರಲ್ಲಿ ಜನರು ತಿಂಡಿ ಊಟಕ್ಕೆ ಮಾಡಿದ ವೆಚ್ಚದ ಕುರಿತಾದ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿರುವ ಆಸಕ್ತಿಕರ ಸಂಗತಿಯೆಂದರೆ ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿಗರು ಆಹಾರಕ್ಕೆ ಉದಾರವಾಗಿ ಹಣ ಖರ್ಚು ಮಾಡಿದ್ದಾರೆ. ಬೆಂಗಳೂರಿನ ವ್ಯಕ್ತಿಯೊಬ್ಬ ಪಬ್‌ವೊಂದರಲ್ಲಿ ಬರೋಬ್ಬರಿ 2,76,988 ರು. ಬಿಲ್ ಪಾವತಿಸಿದ್ದು, ಇದು ಭಾರತದಲ್ಲೇ ಆಹಾರಕ್ಕೆ ಪಾವತಿಸಿದ ಅತಿ ದೊಡ್ಡ ಮೊತ್ತದ ಹಣ ಎನಿಸಿಕೊಂಡಿದೆ. ಅಲ್ಲದೇ ಬೆಂಗಳೂರಿನ ಪಬ್‌ವೊಂದರಲ್ಲೇ 10 ಲಕ್ಷ ಜನರು ತಿಂಡಿ ಊಟಗಳನ್ನು ಸವಿದಿದ್ದಾರೆ.
ರಾಜಸ್ಥಾನದ ಉದಯಪುರವು ಜೋಡಿಗಳಿಗೆ ತಿಂಡಿ- ಊಟ ಸವಿಯಲು ನೆಚ್ಚಿನ ತಾಣವೆನಿಸಿಕೊಂಡಿದ್ದು, ಇಬ್ಬರಿಗಾಗಿ ಅತಿ ಹೆಚ್ಚು ಊಟದ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ. ಇಂದೋರ್‌ನಲ್ಲಿ 4 ಮಂದಿಗೆ ಹೆಚ್ಚಿನ ಟೇಬಲ್‌ಗಳನ್ನು ಕಾಯ್ದಿರಿಸಲಾಗಿದೆ.
ಟೇಸ್ಟಿ ಆ್ಯಂಡ್ ಸ್ಪೈಸಿ ಚಿಕನ್ ಗೀ ರೋಸ್ಟ್ ರೆಸಿಪಿ!...
ವಾರಾಂತ್ಯವನ್ನು ಹೊರತುಪಡಿಸಿ ಗುರುವಾರದಂದು ಅತಿ ಹೆಚ್ಚು ಮಂದಿ ಹೊರಗಡೆ ಊಟ ಮಾಡಿದ್ದಾರೆ. ಭಾರತೀಯರು ಕಳೆದ ವರ್ಷ 500 ಕೋಟಿಗೂ ಹೆಚ್ಚು ಬಾರಿ ರೆಸ್ಟೋರೆಂಟ್, ಪಬ್, ಹೋಟೆಲ್ ಹೀಗೆ ವಿವಿಧ ಕಡೆ ಆಹಾರ ಸೇವಿಸಿದ್ದಾರೆ. ಪ್ರತಿ ಗಂಟೆಗೆ ಸುಮಾರು 4566 ಟೇಬಲ್‌ನಲ್ಲಿ ಆಹಾರ ಉಣಬಡಿಸಲಾಗಿದೆ. ಪ್ರತಿ ಬಾರಿ ಹೊರಗಡೆ ಊಟ ಹಾಗೂ ತಿಂಡಿಗೆ ಭಾರತೀಯರು ಸರಾಸರಿ 1600 ರು. ವೆಚ್ಚ ಮಾಡಿದ್ದಾರೆ. ತಿಂಡಿಯನ್ನು ಆರ್ಡರ್ ಮಾಡಲು ಸರಾಸರಿ ಬಿಲ್ 300 ರು. ವೆಚ್ಚ ಮಾಡಲಾಗಿದೆ.
ಇನ್ನು ತಿಂಡಿ ಊಟದಲ್ಲಿ ಉಳಿತಾಯ ಮಾಡಿದ್ದರಲ್ಲಿ ದೆಹಲಿ ಮೊದಲ ಸ್ಥಾನ ಪಡೆದುಕೊಂಡಿದೆ. ದೆಹಲಿಯ ನಿವಾಸಿಯೊಬ್ಬರು 179 ಬಾರಿ ಹೊರಗಡೆ ಊಟಕ್ಕೆ ಹೋಗಿದ್ದು, ಆ್ಯಪ್‌ನಲ್ಲಿ ಆಹಾರ್ ಆರ್ಡರ್ ಮಾಡುವ ಮೂಲಕ 3.5 ಲಕ್ಷ ರು. ಉಳಿತಾಯ ಮಾಡಿದ್ದಾರೆ. ಉತ್ತರ ಭಾರತದ ಖಾದ್ಯಗಳನ್ನು ದೇಶದೆಲ್ಲೆಡೆ ಅತಿ ಹೆಚ್ಚು ಆರ್ಡರ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.