ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ ಪೇಟೆ ಸತ್ಯನಪಲ್ಲಿಯಿಂದ ವಾಪಸ್ ಬಂದ ಕೂಲಿ ಕಾರ್ಮಿಕರು| ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾವಿಹಾಳ ಗ್ರಾಮಕ್ಕೆ ಬಂದ 17 ಜನ ಕಾರ್ಮಿಕರು| ಆರು ಜನರಿಗೆ ಕಾಣಿಸಿಕೊಂಡ ಜ್ವರ, ಬಳ್ಳಾರಿಯ ಕೋವಿಡ್-19 ಆಸ್ಪತ್ರೆಗೆ ದಾಖಲು|
ಸಿರುಗುಪ್ಪ(ಮೇ.01): ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ ಪೇಟೆ ಸತ್ಯನಪಲ್ಲಿ ಗ್ರಾಮದಲ್ಲಿ ಕೂಲಿ ಮಾಡಲು ಹೋಗಿದ್ದ ತಾಲೂಕಿನ ರಾವಿಹಾಳ ಗ್ರಾಮದ 17 ಜನ ಕಾರ್ಮಿಕರು ಗ್ರಾಮಕ್ಕೆ ಮರಳಿದ್ದು, ಅವರಲ್ಲಿ ಆರು ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ಬಳ್ಳಾರಿಯ ಕೋವಿಡ್-19 ಆಸ್ಪತ್ರೆಗೆ ತಪಾಸಣೆಗಾಗಿ ಕಳುಹಿಸಲಾಗಿದೆ.
ರಾವಿಹಾಳ ಗ್ರಾಮದ 70 ಜನ ಕೂಲಿ ಕಾರ್ಮಿಕರು ಮೂರು ತಿಂಗಳ ಹಿಂದೆ ಸೀಮಾಂಧ್ರಕ್ಕೆ ಕೂಲಿ ಮಾಡಲು ವಲಸೆ ಹೋಗಿದ್ದರು. ಗುಂಟೂರು ಜಿಲ್ಲೆಯ ನರಸರಾವ್ ಪೇಟೆ ಸತ್ಯನಪಲ್ಲಿ ಗ್ರಾಮದಲ್ಲಿ ಇವರೆಲ್ಲ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಆಗಿದ್ದರು. ಇವರಿಗೆ ಪಡಿತರ ನೀಡಲು ಆಂಧ್ರ ಸರ್ಕಾರ ಹಿಂದೇಟು ಹಾಕಿದ್ದು, ತೀವ್ರ ಸಮಸ್ಯೆ ಎದುರಿಸುತ್ತಿದ್ದ ಇವರು ಹಸಿವಿನಿಂದ ಬಳಲುತ್ತಿದ್ದು, ಅವರಲ್ಲಿ 17 ಜನರು ಗುರುವಾರ ವಾಪಸ್ ಬಂದಿದ್ದಾರೆ. ಅವರಲ್ಲಿ 6 ಜನರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.
ಕೊರೋನಾ ಹೊಡೆತಕ್ಕೆ ಮಕಾಡೆ ಮಲಗಿದ ರಿಯಲ್ ಎಸ್ಟೇಟ್ ಉದ್ಯಮ..!
ಇವರು ಸಹ ಯಾವುದೇ ನೇರ ವಾಹನ ಸೌಲಭ್ಯವಿಲ್ಲದೇ ನಡೆದುಕೊಂಡು, ಮಧ್ಯದಲ್ಲಿ ಸಿಕ್ಕ ವಾಹನಗಳನ್ನು ಹತ್ತಿ ತಮ್ಮ ಗ್ರಾಮಕ್ಕೆ ಆಗಮಿಸಿದ್ದಾರೆ. ಉಳಿದ ಕಾರ್ಮಿಕರನ್ನು ಸಹ ತಕ್ಷಣ ವಾಪಸ್ ಕರೆದುಕೊಂಡು ಬರುವ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿ ಸಿರುಗುಪ್ಪ ತಹಸೀಲ್ದಾರರಿಗೆ ಪತ್ರ ಬರೆದಿದ್ದಾರೆ. ಕಾರ್ಮಿಕರನ್ನು ಮೇ 3 ರ ನಂತರ ಕರೆತರುವ ಪ್ರಯತ್ನ ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಚಿರ್ಚಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಬಿ. ಕೂಡಲಗಿ ತಿಳಿಸಿದ್ದಾರೆ.