* 5 ಸಾವಿರ ವಿದ್ಯಾರ್ಥಿಗಳ ಪ್ರಸಾದ ನಿಲಯ ಶೀಘ್ರ
* ಗವಿಸಿದ್ಧೇಶ್ವರ ಶ್ರೀ ಕಣ್ಣೀರಿಟ್ಟ ಮೂರು ಪ್ರಸಂಗಗಳು
* ಬಂಗಾರ ಖರೀದಿ ಹಣ ಮಠಕ್ಕೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.26): 5 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದ ನಿಲಯದ ಅಡಿಗಲ್ಲು ಸಮಾರಂಭದ ವೇಳೆಯಲ್ಲಿ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಲಕ್ಷಾಂತರ ಜನರ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿಯೂ ಇದು ಹರಿದಾಡುತ್ತಿದೆ.
undefined
ಶ್ರೀಗಳು ಬಿಕ್ಕಿ ಬಿಕ್ಕಿ ಅತ್ತಿರುವ ದೃಶ್ಯಗಳನ್ನು ಅನೇಕ ಆ್ಯಪ್‌ಗಳಲ್ಲಿಯೂ ನಾನಾ ರೀತಿಯಲ್ಲಿ ಎಡಿಟ್ ಸಹ ಮಾಡಿ, ಹರಿಬಿಡುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಗವಿಮಠ ಶ್ರೀಗಳು ಅತ್ತಿರುವುದೇ ಟ್ರೋಲ್ ಆಗುತ್ತಿದೆ.
ಬಡ ಮಕ್ಕಳನ್ನ ಓದಿಸಲು ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ: ಕಣ್ಣೀರು ಹಾಕಿದ ಗವಿಮಠ ಶ್ರೀ
ಮೂರು ಪ್ರಸಂಗಗಳು:
2002 ಡಿಸೆಂಬರ್ 13ರಂದು ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪಟ್ಟಾಭಿಷೇಕವಾಗಿದ್ದು, ತಮ್ಮ 20 ವರ್ಷಗಳ ಅನುಭವದಲ್ಲಿ ಇದುವರೆಗೂ ಸಾರ್ವಜನಿಕವಾಗಿ ಮೂರು ಬಾರಿ ಕಣ್ಣೀರು ಹಾಕಿದ್ದಾರೆ.
ಕೊಪ್ಪಳ ಗವಿಮಠದ ಪೀಠಾಧಿಪತಿಗಳಾದ ಮೇಲೆ ಗವಿಸಿದ್ಧೇಶ್ವರ ಜಾತ್ರೆಯ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಾಗ ಜಾತ್ರೆಗೆ ಬರುವ ಭಕ್ತಾಧಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಲೇ ಇತ್ತು. ಈ ನಡುವೆ ಶ್ರೀಗಳ ಮೇಲಿನ ಭಾರ ಹೆಚ್ಚಿ ಬರುವ ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆಯಾಗಬೇಕು. ಅದರಲ್ಲಿ ಒಂಚೂರು ಏರಿಳಿತವಾಗಬಾರದು ಎಂದು ಶಕ್ತಿಮೀರಿ ಶ್ರಮಿಸುತ್ತಿದ್ದರು. ಈ ನಡುವೆ ಉಂಟಾದ ಮಾನಸಿಕ ಗೊಂದಲದಿಂದಾಗ ಅವರು ವೇದಿಕೆಯಲ್ಲಿಯೇ ಕಣ್ಣೀರಿಟ್ಟು, ಪೀಠತ್ಯಾಗದ ಮಾತುಗಳನ್ನಾಡಿದ್ದರು. ಮಾರನೆಯ ದಿನವೇ ಮಠಕ್ಕೆ ಜನಸಾಗರವೇ ಹರಿದು ಬಂದಿತು. ಪೀಠತ್ಯಾಗದ ಮಾತುಗಳನ್ನಾಡದಿರಿ ಎಂದು ಭಕ್ತರು ಪರಿಪರಿಯಾಗಿ ಬೇಡಿಕೊಂಡರು. ಭಕ್ತರ ಭಕ್ತಿಗೆ ಶ್ರೀಗಳು ಮೌನದಿಂದಲೇ ಸಮ್ಮತಿಸಿದ್ದರು.
ಆಕ್ಸಿಜನ್‌ಗಾಗಿ..:
ಇಡೀ ದೇಶವೇ ಕೋವಿಡ್‌ನಿಂದ ಬಳಲುತ್ತಿತ್ತು. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಜನರು ಪರದಾಡುತ್ತಿದ್ದರು. ಆಕ್ಸಿಜನ್ ಸಮಸ್ಯೆಯಿಂದ ನರಳುತ್ತಿದ್ದರು. ದಿಟ್ಟಹೆಜ್ಜೆಯನ್ನಿಟ್ಟಶ್ರೀಗಳ ಕೋವಿಡ್ ಆಸ್ಪತ್ರೆಯನ್ನೇ ಪ್ರಾರಂಭಿಸಿದ್ದರು. ಜಿಲ್ಲೆಯಿಂದ ಅಷ್ಟೇ ಅಲ್ಲ, ರಾಜ್ಯದ ನಾನಾ ಮೂಲೆಯಿಂದ ಕೋವಿಡ್ ರೋಗಿಗಳು ದಾಖಲಾಗಿ, ಗುಣಮುಖರಾಗುತ್ತಿದ್ದರು. ಖುದ್ದು ಶ್ರೀಗಳೇ ಕೋವಿಡ್ ಆಸ್ಪತ್ರೆಯಲ್ಲಿ ಸುತ್ತಾಡಿ, ಅವರ ಬೆನ್ನುತಟ್ಟಿಧೈರ್ಯ ತುಂಬುತ್ತಿದ್ದರು. ಈ ವೇಳೆ ಆಕ್ಸಿಜನ್ ಕೊರತೆ ಎದುರಾದಾಗ ಶ್ರೀಗಳು ಹಗಲು-ರಾತ್ರಿ ಸ್ಥಳದಲ್ಲಿಯೇ ಇದ್ದು ನಿಗಾವಹಿಸುತ್ತಿದ್ದರು. ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಅವರೊಂದಿಗೆ ಚರ್ಚೆ ಮಾಡುತ್ತಿರುವಾಗ ಆಕ್ಸಿಜನ್ ಪೂರೈಕೆ ಅಸಾಧ್ಯವೆಂದು ಗೊತ್ತಾದಾಗ ಅಕ್ಷರಶಃ ಕಣ್ಣೀರು ಹಾಕಿದ್ದರು. ತಕ್ಷಣ ಪರ್ಯಾಯ ಕ್ರಮದ ಮೂಲಕ ಆಕ್ಸಿಜನ್ ಸಮಸ್ಯೆಯಾಗದಂತೆ ವ್ಯವಸ್ಥೆಯಾಯಿತು.
ವಸತಿ ನಿಲಯಕ್ಕಾಗಿ..:
ಗವಿಸಿದ್ಧೇಶ್ವರ ವಸತಿ ಮತ್ತು ಪ್ರಸಾದ ನಿಲಯದಲ್ಲಿ ಈಗಾಗಲೇ ಮೂರೂವರೆ ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನು ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಇರುವ 2 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದ ನಿಲಯ ಭರ್ತಿಯಾಗಿ ಗೋದಾಮು, ಒಳಾಂಗಣ ಕ್ರೀಡಾಂಗಣ, ವೃದ್ಧಾಶ್ರಮ ಸೇರಿದಂತೆ ಮಠದಲ್ಲಿ ಎಲ್ಲೆಲ್ಲಿ ಜಾಗ ಇದೆಯೂ ಅಲ್ಲೆಲ್ಲಾ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಸಾಲುತ್ತಿಲ್ಲ. ಇದಕ್ಕಾಗಿ ತಕ್ಷಣ 5 ಸಾವಿರ ವಿದ್ಯಾರ್ಥಿಗಳ ಸಾಮರ್ಥ್ಯಇರುವ ವಸತಿ ಮತ್ತು ಪ್ರಸಾದ ನಿಲಯ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾವು ಓದುವಾಗ ಇದ್ದ ಪರಿಸ್ಥಿತಿ, ತಮ್ಮ ಗುರುಗಳು, ಮಠ ನೀಡಿದ ಆಶ್ರಯ ನೆನೆದು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗೆ ಭೂಮಿ ನೀಡಲ್ಲ, ರೈತರ ಆಕ್ರೋಶ
ನೆರವಿನ ಮಹಾಪೂರ
ಈ ನಡುವೆ ಪ್ರಸಾದ ಮತ್ತು ವಸತಿ ನಿಲಯ ನಿರ್ಮಾಣಕ್ಕೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಅನೇಕರು ವಾಗ್ದಾನ ಮಾಡಿರುವ ಮೊತ್ತವೇ . 3 ಕೋಟಿ ಆಗಿದೆ. ಈ ನಡುವೆ ಮಠದ ಭಕ್ತಾದಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಅನೇಕರು ತಮ್ಮ ಕೈಲಾದ ದೇಣಿಗೆ ನೀಡುತ್ತಿದ್ದಾರೆ.
ಬಂಗಾರ ಖರೀದಿ ಹಣ ಮಠಕ್ಕೆ
ರಾಜೇಶ ಯಾವಗಲ್ ಅವರು ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ಬಂಗಾರ ಖರೀದಿ ಮಾಡಲು ಸಂಗ್ರಹಿಸಿದ್ದ ಹಣವನ್ನು ಗವಿಮಠದ ಪ್ರಸಾದ ನಿಲಯ ನಿರ್ಮಾಣಕ್ಕೆ ಕೊಡಲು ನಿರ್ಧರಿಸಿದ್ದಾರೆ. ವಾರ್ಷಿಕೋತ್ಸವ ಆಚರಣೆಯನ್ನು ಕೈಬಿಟ್ಟು ಮಠದ ಕಲ್ಯಾಣ ಕಾರ್ಯಕ್ಕೆ ನೀಡುವುದಾಗಿ ಹೇಳಿಕೊಂಡಿದ್ದಾರೆ.