ಸವಣೂರು: ಸೋಂಕಿತರು ಗುಣಮುಖ, ಸೀಲ್‌ಡೌನ್‌ ತೆರವಿಗೆ ಆಗ್ರಹಿಸಿ ಪ್ರತಿಭಟನೆ

By Kannadaprabha News  |  First Published Jun 3, 2020, 8:38 AM IST

ಕೊರೋನಾ ವೈರಸ್‌ ಸೋಂಕಿತರು ಗುಣಮುಖವಾಗಿ ಬಂದರೂ ಬಡಾವಣೆಗಳ ಸೀಲ್‌ಡೌನ್‌ನ್ನು ತೆರವುಗೊಳಿಸಿಲ್ಲ| ಹಾವೇರಿ ಜಿಲ್ಲೆಯ ಸವಣೂರು ಪಟ್ಟಣ| ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ|


ಸವಣೂರು(ಜೂ.03):  ಕೊರೋನಾ ವೈರಸ್‌ ಸೋಂಕಿತರು ಗುಣಮುಖವಾಗಿ ಬಂದರೂ ಬಡಾವಣೆಗಳ ಸೀಲ್‌ಡೌನ್‌ನ್ನು ತೆರವುಗೊಳಿಸಿಲ್ಲ. ಅದನ್ನು ತೆರವುಗೊಳಿಸಿ ಕೆಲಸಕ್ಕೆ ತೆರಳಲು ಮುಕ್ತ ಅವಕಾಶ ಕಲ್ಪಿಸಬೇಕು ಒತ್ತಾಯಿಸಿ ಬಡಾವಣೆಗಳ ಜನರು ಪ್ರತಿಭಟನೆ ಕೈಗೊಂಡ ಘಟನೆ ಮಂಗಳವಾರ ನಡೆದಿದೆ.

ಕೊರೊನಾ ವೈರಸ್‌ ಸೋಂಕಿತರು ಜಿಲ್ಲೆಯಲ್ಲಿಯೆ ಪ್ರಥಮವಾಗಿ ಪಟ್ಟಣದ ಎಸ್‌.ಎಂ. ಕೃಷ್ಣನಗರ ಹಾಗೂ ರಾಜೀವಗಾಂಧಿ ಬಡಾವಣೆಗಳಲ್ಲಿ ಕಂಡು ಬಂದಿರುವದರಿಂದ ಎರಡು ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಮೊದಲು ಕಂಡು ಬಂದ ಎರಡು ಪ್ರಕರಣಗಳು ಗುಣಮುಖವಾಗಿ ಬರುವ ದಿನಗಳು ಹತ್ತಿರ ಬರುತ್ತಿದ್ದಂತೆ ಅದೇ ಬಡಾವಣೆಯಲ್ಲಿ ಮತ್ತೊಂದು ಪ್ರಕರಣ ಕಂಡು ಬಂತು. ಹೀಗಾಗಿ ನಿರಂತರವಾಗಿ ಸೀಲ್‌ಡೌನ್‌ ಮುಂದುವರಿಸಿ ಮೂಲಭೂತ ಸೌಲಭ್ಯವನ್ನು ಒದಗಿಸುವಂತೆ ಜಿಲ್ಲಾಡಳಿತ ಸ್ಥಳೀಯ ಆಡಳಿತ ವ್ಯವಸ್ಥೆಗೆ ಸೂಚನೆಯನ್ನು ನೀಡಿತ್ತು. ಅದರಂತೆ, ಕ್ರಮಕೈಗೊಂಡ ಅಧಿಕಾರಿಗಳು ನಿರಂತರವಾಗಿ ವ್ಯವಸ್ಥೆ ಕಲ್ಪಿಸುತ್ತಿದ್ದರು.

Tap to resize

Latest Videos

ಹಾವೇರಿ: ಮುಂಬೈನಿಂದ ಆಗಮಿಸಿದ್ದ ಯುವತಿಗೆ ಕೊರೋನಾ

ಕೊರೋನಾ ವೈರಸ್‌ ಪ್ರಕರಣಗಳು ಗುಣಮುಖವಾಗಿ ಬಂದಿವೆ. ಇನ್ನೂ ಕೂಡಾ ಎಸ್‌.ಎಂ. ಕೃಷ್ಣನಗರ ಹಾಗೂ ರಾಜೀವಗಾಂಧಿ ಬಡಾವಣೆಗಳನ್ನು ಸೀಲ್‌ಡೌನ್‌ ಮಾಡಿ ನಮ್ಮನ್ನು ಇಲ್ಲಿಯೇ ಕೂರುವಂತೆ ಮಾಡಿದೆ. ಎರಡು ಬಡಾವಣೆಗಳ ಜನರು ಹಲವಾರು ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲಿಯೇ ಕೂತು ಕಾಲಹರಣ ಮಾಡಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಮಳೆಗಾಲ ಪ್ರಾರಂಭವಾಗಿದೆ. ಇಲ್ಲಿ ಗುಡಿಸಲು ಮನೆಗಳು ಹೆಚ್ಚಿನ ಪ್ರಮಾಣದಲ್ಲಿ ಇರುವದರಿಂದ ಅವುಗಳು ಮಳೆಯ ನೀರಿನಿಂದ ಸೋರುತ್ತಿವೆ. ಅದಕ್ಕೆ ಹೊದಿಕೆಯನ್ನು ತಂದು ಹೊದಿಸಲು ಹಣವಿಲ್ಲ. ಕೆಲಸಕ್ಕೆ ಹೋದರೆ ಕೆಲಸವನ್ನು ಯಾರು ಕೊಡುತ್ತಿಲ್ಲ. ಆದ್ದರಿಂದ, ಸೀಲ್‌ಡೌನ್‌ ಪ್ರದೇಶವನ್ನು ತೆರವುಗೊಳಿಸುವಂತೆ ಬಡಾವಣೆಗಳ ಜನರು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಅಂಜುಮನ್‌ ಇಸ್ಲಾಂ ಕಮಿಟಿ ಅಧ್ಯಕ್ಷ ಜೀಶಾನಖಾನ್‌ ಪಠಾಣ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಖಲಂದರ ಅಕ್ಕೂರ ಭೇಟಿ ನೀಡಿ ಪ್ರತಿಭಟನಾ ನಿರತರನ್ನು ಮನವೊಲಿಸಲು ಮುಂದಾದರೂ ಯಾವುದೇ ಪ್ರಯೋಜನ ಕಂಡು ಬರಲಿಲ್ಲ. ಸ್ಥಳಕ್ಕೆ ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಭೇಟಿ ನೀಡಿ, ಪ್ರತಿಭಟನಾನಿರತ ಬಡವಾಣೆಗಳ ಜನರ ತೊಂದರೆಗಳನ್ನು ಆಲಿಸಿ ಅವರೊಂದಿಗೆ ಮಾತನಾಡಿದರು. ಸೀಲ್‌ಡೌನ್‌ ಬಡಾವಣೆಗಳಿಗೆ ಈಗಾಗಲೇ ತಾಲೂಕು ಆಡಳಿತ ಮೂಲಭೂತ ಸೌಲಭ್ಯಗಳನ್ನು ನೀಡಿದೆ. ಸೀಲ್‌ಡೌನ್‌ ತೆರವುಗೊಳಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅವರ ಆದೇಶದಂತೆ ಕ್ರಮಕೈಗೊಳ್ಳುತ್ತೇವೆ. ಅಲ್ಲಿಯ ವರೆಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆ ನಿರತ ಸಾರ್ವಜನಿಕರು ಅಧಿಕಾರಿಗಳ ಮಾತಿಗೆ ಸ್ಪಂದಿಸಿ ಬಹುಬೇಗನೆ ತೆರವುಗೊಳಿಸಿ ಕೆಲಸಕ್ಕೆ ತೆರಳಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿ ಪ್ರತಿಭಟನೆಯನ್ನು ಹಿಂಪಡೆದರು.

ಈ ವೇಳೆ ತಾಪಂ ಎಡಿ ಎಸ್‌.ಎಚ್‌. ಅಮರಾಪುರ, ಪಿಎಸ್‌ಐ ಎಚ್‌.ಎಸ್‌. ಶಿವಣ್ಣವರ, ಎಎಸ್‌ಐ ಎಂ.ಎಸ್‌. ದೊಡ್ಡಮನಿ, ಎಂ.ವಿ. ಶಿರಹಟ್ಟಿ, ಡಬ್ಲೂಎಎಸ್‌ಐ ಜಿ.ವಿ. ಹೊನ್ನಳ್ಳಿ, ಗ್ರಾಮ ಲೆಕ್ಕಾಧಿಕಾರಿಗಳಾದ, ರವಿ ಮಾಚಕ್ಕನೂರ, ನಾಗರಾಜ ಹೊಸಮನಿ, ವೆಂಕಟೇಶ ಲಮಾಣಿ ಹಾಗೂ ಪೋಲಿಸ್‌ ಸಿಬ್ಬಂದಿ ಇದ್ದರು.
 

click me!