ಹಾವೇರಿ: ಮುಂಬೈನಿಂದ ಆಗಮಿಸಿದ್ದ ಯುವತಿಗೆ ಕೊರೋನಾ

Kannadaprabha News   | Asianet News
Published : Jun 03, 2020, 08:23 AM IST
ಹಾವೇರಿ: ಮುಂಬೈನಿಂದ ಆಗಮಿಸಿದ್ದ ಯುವತಿಗೆ ಕೊರೋನಾ

ಸಾರಾಂಶ

ಮುಂಬೈನಿಂದ ತಂದೆ-ತಾಯಿಯೊಂದಿಗೆ ಹಾವೇರಿ ಜಿಲ್ಲೆಗೆ ಆಗಮಿಸಿದ್ದ ಖಾಸಗಿ ಕಂಪನಿಯ ಉದ್ಯೋಗಿ ಪಿ-3668, 24 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢ| ಶಿಗ್ಗಾಂವಿ ಪಟ್ಟಣದ ನಿವಾಸಿಯಾದ ಸೋಂಕಿತೆ ಮುಂಬೈನಿಂದ ಆಗಮಿಸಿದ್ದರು| ಸೋಂಕಿತೆಗೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ|

ಹಾವೇರಿ(ಜೂ.03): ಜಿಲ್ಲೆಯಲ್ಲಿ ಮಂಗಳವಾರ ಮತ್ತೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುಂಬೈನಿಂದ ತಂದೆ-ತಾಯಿಯೊಂದಿಗೆ ಜಿಲ್ಲೆಗೆ ಆಗಮಿಸಿದ್ದ ಖಾಸಗಿ ಕಂಪನಿಯ ಉದ್ಯೋಗಿ ಪಿ-3668, 24 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಮೂಲತಃ ಶಿಗ್ಗಾಂವಿ ಪಟ್ಟಣದ ನಿವಾಸಿಯಾದ ಇವರು ಮುಂಬೈನಿಂದ ಆಗಮಿಸಿದ್ದರು. ಮೇ 31ರಂದು ಯುವತಿಯ ತಂದೆಗೆ (ಪಿ-3271) ಸೋಂಕು ದೃಢಪಟ್ಟಿತ್ತು. ಈ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಈ ವರೆಗೆ 16 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಆರು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಹಾವೇರಿ: ನಾಲ್ವರಿಗೆ ಮಹಾಮಾರಿ ಕೊರೋನಾ ದೃಢ

ಪ್ರವಾಸ ಹಿನ್ನೆಲೆ:

ಮುಂಬೈನ ಸಿದ್ಧಿವಿನಾಯಕ ಚಾಳ, ಸಾಂತಾಕ್ರೂಸ್‌ನಲ್ಲಿ ತಂದೆ-ತಾಯಿಯೊಂದಿಗೆ 24 ವರ್ಷದ ಯುವತಿ ಪಿ-3730 ವಾಸವಾಗಿದ್ದು, ಅಂಧೇರಿಯ ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಓಲಾ ಕಂಪನಿಯ ಕಾರನ್ನು ಬಾಡಿಗೆಗೆ ಪಡೆದು ಮೇ 19ರಂದು ಮುಂಬೈನಿಂದ ಹೊರಟು ಪುಣೆ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್‌ಪೋಸ್ಟ್‌ಗೆ ಅಂದು ರಾತ್ರಿ 9-30ಕ್ಕೆ ಆಗಮಿಸಿದ್ದರು. ಇವರನ್ನು ವೈದ್ಯಕೀಯ ತಪಾಸಣೆ ನಂತರ ಜಕ್ಕಿನಕಟ್ಟೆರಾಣಿ ಚೆನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 24ರಂದು ಸ್ವಾಬ್‌ ಪರೀಕ್ಷೆಗೆ ಕಳಹಿಸಲಾಗಿತ್ತು. ಜೂ. 2ರಂದು ಪಾಸಿಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಕ್ಕಿನಕಟ್ಟೆರಾಣಿ ಚೆನ್ನಮ್ಮ ವಸತಿ ಶಾಲೆಯ 100 ಮೀಟರ್‌ ವ್ಯಾಪ್ತಿಯನ್ನು ಈಗಾಗಲೇ ಕಂಟೈನ್‌ಮೆಂಟ್‌ ಜೋನ್‌ ಎಂದು ಘೋಷಿಸಲಾಗಿದೆ ಹಾಗೂ ಜಕಿನಕಟ್ಟಿ ಗ್ರಾಮವನ್ನು ಬಫರ್‌ ಜೋನ್‌ ಎಂದು ಗುರುತಿಸಲಾಗಿದೆ. ಶಿಗ್ಗಾಂವಿ ತಹಸೀಲ್ದಾರ್‌ ಅವರನ್ನು ಇನ್ಸಿಡೆಂಟ್‌ ಕಮಾಂಡರ್‌ ಎಂದು ನೇಮಿಸಲಾಗಿದೆ.
 

PREV
click me!

Recommended Stories

ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!