ಮಂಗಳೂರಿನಲ್ಲಿ ನೇಣು ಕಂಬಕ್ಕೇರಿದ ಈರುಳ್ಳಿ..!

By Kannadaprabha News  |  First Published Dec 6, 2019, 10:57 AM IST

ಎರಡು ದಿನಗಳ ಹಿಂದೆ ಆಮದುಗೊಂಡ ಟರ್ಕಿ ಈರುಳ್ಳಿ ಈಗ ಅಂಗಡಿಗಳಿಗೆ ಚಿಲ್ಲರೆ ಮಾರಾಟವಾಗುತ್ತಿದೆ. 10ರಿಂದ 20 ಚೀಲಗಳಷ್ಟು ಟರ್ಕಿ ಈರುಳ್ಳಿಯನ್ನು ಚಿಲ್ಲರೆ ವರ್ತಕರು ಖರೀದಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಾದ್ಯಂತ ದಿನಸಿ ಅಂಗಡಿಗಳಲ್ಲಿ ತುಸು ಮಟ್ಟಿಗೆ ಈರುಳ್ಳಿ ಲಭ್ಯವಾಗುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಪೂರೈಕೆಯಾದ ಈಜಿಪ್ಟ್‌ ಈರುಳ್ಳಿ ಬಹುತೇಕ ಖಾಲಿಯಾಗುವ ಹಂತಕ್ಕೆ ಬಂದಿದೆ.


ಮಂಗಳೂರು(ಡಿ.06): ಮಂಗಳೂರು ಮಾರುಕಟ್ಟೆಗೆ ಟರ್ಕಿ ಈರುಳ್ಳಿ ಲಗ್ಗೆ ಇರಿಸಿದೆಯಾದರೂ ಈರುಳ್ಳಿಯ ಕೊರತೆ ಸೃಷ್ಟಿಯಾಗಿದೆ. ಗುರುವಾರ ಈರುಳ್ಳಿ ಧಾರಣೆಯಲ್ಲಿ ತುಸು ಏರಿಕೆ ಕಂಡುಬಂದಿದೆ.

ಎರಡು ದಿನಗಳ ಹಿಂದೆ ಆಮದುಗೊಂಡ ಟರ್ಕಿ ಈರುಳ್ಳಿ ಈಗ ಅಂಗಡಿಗಳಿಗೆ ಚಿಲ್ಲರೆ ಮಾರಾಟವಾಗುತ್ತಿದೆ. 10ರಿಂದ 20 ಚೀಲಗಳಷ್ಟು ಟರ್ಕಿ ಈರುಳ್ಳಿಯನ್ನು ಚಿಲ್ಲರೆ ವರ್ತಕರು ಖರೀದಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಾದ್ಯಂತ ದಿನಸಿ ಅಂಗಡಿಗಳಲ್ಲಿ ತುಸು ಮಟ್ಟಿಗೆ ಈರುಳ್ಳಿ ಲಭ್ಯವಾಗುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಪೂರೈಕೆಯಾದ ಈಜಿಪ್ಟ್‌ ಈರುಳ್ಳಿ ಬಹುತೇಕ ಖಾಲಿಯಾಗುವ ಹಂತಕ್ಕೆ ಬಂದಿದೆ.

Latest Videos

ಚಂದ್ರಯಾನ-2 ಮುಂದಿನ ಸಾಧನೆಗೆ ಮುನ್ನುಡಿ: ಡಾ.ಕಸ್ತೂರಿ ರಂಗನ್‌

ಹಿಂದಿನಂತೆ ಬೇಕಾದಷ್ಟುಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿ ರಖಂ ಮಾರಾಟ ನಡೆಯುತ್ತಿಲ್ಲ. ಇದರಿಂದಾಗಿ ಈರುಳ್ಳಿಯ ಅಭಾವ ತಲೆದೋರಿದೆ. ಸಾಮಾನ್ಯ ಈರುಳ್ಳಿ ಇದ್ದರೂ ಕೊಳ್ಳುವವರಿಲ್ಲ ಎಂಬಂತಾಗಿದೆ. ಟರ್ಕಿ ಈರುಳ್ಳಿ ಇನ್ನಷ್ಟುಪ್ರಮಾಣದಲ್ಲಿ ಆಮದಾಗುವ ನಿರೀಕ್ಷೆ ಇದೆ. ಆದರೆ ಯಾವಾಗ ಆಮದಾಗುತ್ತದೆ ಎಂಬ ಮಾಹಿತಿ ಇಲ್ಲ ಎನ್ನುತ್ತಾರೆ ರಖಂ ಮಾರುಕಟ್ಟೆವರ್ತಕರು.

ಖರೀದಿಗೆ ಅಂಗಡಿಗಳ ಹಿಂದೇಟು:

ಈರುಳ್ಳಿ ದರ ವಿಪರೀತ ಏರುಗತಿ ಕಾಣುತ್ತಿರುವುದರಿಂದ ಸಾಮಾನ್ಯ ಅಂಗಡಿಗಳು ಈರುಳ್ಳಿ ಖರೀದಿಸಿ ಮಾರಾಟಕ್ಕೆ ಹಿಂದೇಟು ಹಾಕುತ್ತಿವೆ. ಸಣ್ಣಪುಟ್ಟಅಂಗಡಿಗಳಲ್ಲಿ ಈರುಳ್ಳಿ ಮಾರಾಟ ಇಲ್ಲ ಎಂದು ಹೇಳುತ್ತಿದ್ದಾರೆ. ಈರುಳ್ಳಿ ದರ ದುಬಾರಿ ಆಗಿರುವುದರಿಂದ ನಾವು ಕಳೆದ ನಾಲ್ಕೈದು ದಿನಗಳಿಂದ ಈರುಳ್ಳಿಯನ್ನು ಖರೀದಿಸಿ ತರುತ್ತಿಲ್ಲ ಎನ್ನುತ್ತಿದ್ದಾರೆ.

ಇದೇ ಪರಿಸ್ಥಿತಿ ಸಾಮಾನ್ಯ ಹೊಟೇಲ್‌ಗಳಲ್ಲಿ ಕೂಡ ಇದೆ. ಈರುಳ್ಳಿಯನ್ನು ಪದಾರ್ಥಗಳಿಗೆ ಉಪಯೋಗಿಸುತ್ತಿಲ್ಲ. ಈರುಳ್ಳಿ ಬಜೆ, ಈರುಳ್ಳಿ ದೋಸೆಯನ್ನೂ ಸದ್ಯಕ್ಕೆ ಕೈಬಿಟ್ಟಿದ್ದಾರೆ.

 

ಈರುಳ್ಳಿ ಧಾರಣೆ

  • ಮಂಗಳೂರು ಮಾರುಕಟ್ಟೆಯಲ್ಲಿ ಗುರುವಾರ ಈರುಳ್ಳಿ ಧಾರಣೆ ಇಂತಿದೆ.
  • ಟರ್ಕಿ ಈರುಳ್ಳಿ ರಖಂ ಕಿಲೋಗೆ 130 ರು., ಚಿಲ್ಲರೆಗೆ 140 ರು.
  • ಸಾಮಾನ್ಯ ಈರುಳ್ಳಿ ರಖಂ ಕಿಲೋಗೆ 130 ರು., ಚಿಲ್ಲರೆಗೆ 135 ರು.

ನೇಣು ಹಗ್ಗಕ್ಕೆ ಈರುಳ್ಳಿ ಕಟ್ಟಿವಿಶಿಷ್ಟಪ್ರತಿಭಟನೆ

ದಿನೇ ದಿನೇ ತುಟ್ಟಿಯಾಗುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಒತ್ತಾಯಿಸಿ ಹಳೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ನೇಣು ಹಗ್ಗಕ್ಕೆ ಈರುಳ್ಳಿ ಕಟ್ಟಿವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಜ್‌ ಮಾತನಾಡಿ, ಇದೀಗ ಮಾರುಕಟ್ಟೆಭಯೋತ್ಪಾದನೆ ಹೆಚ್ಚಾಗಿದ್ದು, ದಲ್ಲಾಳಿಗಳ ಲಾಭ ಕೋರತನದ ಕ್ರೌರ್ಯಕ್ಕೆ ದೇಶದ ಜನ ತತ್ತರಿಸಿ ಹೋಗುತ್ತಿದ್ದಾರೆ. ಮಂಗಳೂರು ಮಾರುಕಟ್ಟೆಯಲ್ಲಿ ಗಂಟೆಗೊಂದು ಬೆಲೆಗೆ ಈರುಳ್ಳಿ ಮಾರಾಟ ಆಗುತ್ತಿದೆ. ಟರ್ಕಿ ಮತ್ತು ಈಜಿಪ್ಟ್ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಈರುಳ್ಳಿಯನ್ನು ದಲ್ಲಾಳಿಗಳು ಬೇಕಾಬಿಟ್ಟಿದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹೆಚ್ಚಿದ ಈರುಳ್ಳಿ ದರ: ಮುಚ್ಚುವ ಸ್ಥಿತಿಗೆ ಬಂದ ಹೋಟೆಲ್‌ಗಳು!

ಈರುಳ್ಳಿ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಕಳೆದ ಒಂದು ತಿಂಗಳಿನಿಂದ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಪ್ರತಿನಿತ್ಯ 300 ಟನ್‌ ಈರುಳ್ಳಿ ವಹಿವಾಟು ನಡೆಯುತ್ತಿದ್ದ ಮಂಗಳೂರು ಮಾರುಕಟ್ಟೆಯಲ್ಲಿ ಈಗ 10 ಟನ್‌ ಈರುಳ್ಳಿ ಕೂಡ ವ್ಯಾಪಾರ ಆಗುತ್ತಿಲ್ಲ. ಇದು ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈರುಳ್ಳಿ ಬೆಲೆ ನಿಯಂತ್ರಿಸಬೇಕಾದ ಸರ್ಕಾರಿ ಸಂಸ್ಥೆಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿವೆ. ಸರ್ಕಾರವೂ ಬೆಲೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈರುಳ್ಳಿ ಪ್ರತಿ ಕೆಜಿಗೆ 140 ರು. ದಾಟುತ್ತಿದ್ದರೂ ಆಮದು ಮತ್ತು ರಫ್ತು ವಹಿವಾಟಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿಯೇ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಇಮ್ತಿಯಾಜ್‌ ಆರೋಪಿಸಿದ್ದಾರೆ.

ಬಿರಿಯಾನಿ ಜೊತೆ ಈರುಳ್ಳಿ ಕೊಡದ್ದಕ್ಕೆ ಮಾರಾಮಾರಿ!

ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್‌, ನವೀನ್‌ ಬೊಲ್ಪುಗುಡ್ಡೆ ಮಾತನಾಡಿದರು. ಸಂಘದ ಉಪಾಧ್ಯಕ್ಷ ಹಸನ್‌ ಮೋನು, ಕೋಶಾಧಿಕಾರಿ ಹರೀಶ್‌ ಕೆರೆಬೈಲ್‌, ಪ್ರಮುಖರಾದ ಯಲ್ಲಪ್ಪ, ಫಾರೂಕ್‌ ಉಳ್ಳಾಲ, ಮಜೀದ್‌ ಉಳ್ಳಾಲ, ಮಾಧವ ಕಾವೂರು, ಅಸ್ಲಂ ಬೆಂಗ್ರೆ, ಹಂಝ ಜಪ್ಪಿನಮೊಗರು, ಮೊಯಿದೀನ್‌ ಕಲ್ಕಟ್ಟ, ಡಿವೈಎಫ್‌ಐ ಮುಖಂಡ ಹನೀಫ್‌ ಬೆಂಗ್ರೆ ಮತ್ತಿತರರು ಇದ್ದರು.

click me!