Mysterious Sound Chamarajanagar : ಭಾರಿ ನಿಗೂಢ ಶಬ್ದಕ್ಕೆ ಬೆಚ್ಚಿ ಬಿದ್ದ ಜನ

By Kannadaprabha News  |  First Published Dec 22, 2021, 7:32 AM IST
  •  ಭಾರಿ ನಿಗೂಢ ಶಬ್ದಕ್ಕೆ ಬೆಚ್ಚಿ ಬಿದ್ದ ಜನ
  • ಮನೆ ಅಂಗಡಿ ಜಖಂ, ಹತ್ತಾರು ಮನೆಗಳ ಗೋಡೆ ಬಿರುಕು
  • ಸೋಮವಾರ ಮಧ್ಯರಾತ್ರಿ ವೇಳೆ ಭಾರಿ ಶಬ್ದಕ್ಕೆ ಗಾಬರಿಗೊಂಡ ಗ್ರಾಮಸ್ಥರು
  •  ಜಖಂಗೊಂಡ ಮನೆಯಲ್ಲಿದ್ದವರ ರಕ್ಷಣೆ
  •  ತಾಯಿ, ಪುಟ್ಟಮಗು ಸೇರಿದಂತೆ ಮೂವರ ರಕ್ಷಣೆ -  ಪ್ರಾಣಾಪಾಯದಿಂದ ಪಾರು

 ಕೊಳ್ಳೇಗಾಲ (ಡಿ.22):  ತಾಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ (Village) ಸೋಮವಾರ ಮಧ್ಯರಾತ್ರಿ 2-30ರಲ್ಲಿ ಕೇಳಿ ಬಂದ ಭಾರಿ ನಿಗೂಢ ಶಬ್ದ (Sound) ಜನರನ್ನು ಗಾಬರಿಗೊಳಿಸಿದೆ. ಜೊತೆಗೆ ಭಾರಿ ಶಬ್ದಕ್ಕೆ 1 ಅಂಗಡಿ, ಮನೆ ಸಂಪೂರ್ಣ ಜಖಂಗೊಂಡಿದ್ದು, 10ಕ್ಕೂ ಅಧಿಕ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.  ಹೌದು, ಸಿಂಗಾನಲ್ಲೂರು ಗ್ರಾಮದಲ್ಲಿ ಸುಮಾರು 2-30ರಿಂದ 2-40ರ ಸಮಯದಲ್ಲಿ ಕೇಳಿ ಬಂದ ಭಾರಿ ಶಬ್ದವು ಸುಮಾರು 3 ಕಿಮಿ ನಷ್ಟುಕೇಳಿದೆ. ಈ ಶಬ್ದಕ್ಕೆ ಸಿಂಗಾನಲ್ಲೂರಿನ ಹಲವು ನಿವಾಸಿಗಳು ಎಚ್ಚರಗೊಂಡು ಆಚೆ ಬಂದು ನೋಡುತ್ತಿದ್ದಂತೆ ಸಿದ್ದರಾಜು ಎಂಬುವರ ಅಂಗಡಿ, ಮನೆ ಕುಸಿದಿದ್ದು, ಅಂಗಡಿ ಪಕ್ಕದಲ್ಲಿಯೇ ಇದ್ದ ಮನೆಯಲ್ಲಿದ್ದ ತಾಯಿ ರತ್ನಮ್ಮ, ಮಗು ಐಶ್ವರ್ಯ ಮತ್ತು ಮತ್ತೊಬ್ಬ ವೃದ್ದ ಮಹಿಳೆ ರತ್ನಮ್ಮ ಎಂಬುವರನ್ನು ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.

ಈ ವೇಳೆ ರತ್ನಮ್ಮ ಅವರಿಗೆ ಮಾತ್ರ ಸಣ್ಣ, ಪುಟ್ಟ ಗಾಯಗಳಾಗಿವೆ, ತಾಯಿ, ಮಗುವಿಗೆ ಯಾವುದೆ ತೊಂದರೆಯಾಗಿಲ್ಲ, ಮಹದೇವಮ್ಮ, ಶೈಲ್ಲಪ್ಪ, ಸೋಮಣ್ಣ, ಸಿದ್ದರಾಜು, ಸುರೇಶ್‌ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಮನೆಗಳ ಬಾಗಶಃ ಹಾನಿಯಾಗಿದ್ದು ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಗ್ರಾಮದಲ್ಲಿ (Village) ಕೇಳಿ ಬಂದ ಭಾರೀ ಶಬ್ದ ಸಿಂಗಾನಲ್ಲೂರು ಗ್ರಾಮಸ್ಥರ ನಿದ್ರೆಗೆಡಿಸಿದ್ದು, ಈ ಶಬ್ದಕ್ಕೆ ಕಾರಣವೇನು ಎಂಬ ರೀತಿಯಲ್ಲಿ ನಾನಾ ಚರ್ಚೆಗಳು ನಡೆದಿವೆ.

Tap to resize

Latest Videos

undefined

ಸಿಲಿಂಡರ್‌ ಸ್ಛೋಟದ ಶಬ್ದವಲ್ಲ:

ಸಿಂಗಾನಲ್ಲೂರು ಪರಿಶಿಷ್ಟ ಜಾತಿ ಬೀದಿಯಲ್ಲಿ ಸಂಭವಿಸಿದ ಭಾರೀ ಶಬ್ದಕ್ಕೆ ಸಿಲಿಂಡರ್‌ (Cylinder) ಸ್ಛೋಟ ಕಾರಣವಲ್ಲ ಎಂದು ಹೇಳಲಾಗುತ್ತಿದ್ದರೂ ಸಿಲಿಂಡರ್‌ ಕಡಿಮೆ ಪ್ರಮಾಣದ ಸೋರಿಕೆಯ ಪ್ರಭಾವದಿಂದಾಗಿ ಸ್ಛೋಟಗೊಂಡಿದ್ದೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಜಖಂಗೊಂಡ ಮನೆ ಹಾಗೂ ಅಂಗಡಿಯಲ್ಲಿ (Shop) ಯಾವುದೆ ಸಿಲಿಂಡರ್‌ ಸ್ಛೋಟಗೊಂಡ ನಿದರ್ಶನ ಕಂಡು ಬಂದಿಲ್ಲ ಎನ್ನಲಾಗುತ್ತಿದ್ದರೂ ಸಹಾ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಿಲಿಂಡರ್‌ ಸ್ಛೋಟವೆ ಕಾರಣ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ ಕೆಲವರು ಈ ಶಬ್ದಕ್ಕೆ ಕಾರಣವೇನು,  ನಾಡ ಬಾಂಬ್‌ (Bomb) ಶಬ್ದನಾ, ಭೂಮಿ ಕಂಪಿಸಿದ ಅನುಭವನಾ? ಇಲ್ಲವೇ ಮತ್ತೇನು? ಎಂಬಿತ್ಯಾದಿ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಾನಾ ಸಂಶಯಗಳನ್ನೆ ಹುಟ್ಟುಹಾಕಿದ್ದು ಅಂತಿಮವಾಗಿ ವಿಧಿ ವಿಜ್ಞಾನದ ಅಧಿಕಾರಿಗಳ ನೀಡುವ ವರದಿಯಲ್ಲಿ ಬಹಿರಂಗಗೊಳ್ಳಲಿದೆ.

ಅಧಿಕಾರಿಗಳ (Officers) ತಂಡ ದೌಡು, ಪರಿಶೀಲನೆ- ಸಿಂಗಾನಲ್ಲೂರಿನಲ್ಲಿ ಭಾರಿ ಶಬ್ದ ಕೇಳಿ ಬಂದ ವಿಚಾರ ತಿಳಿಯುತ್ತಿದ್ದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ತಹಸಿಲ್ದಾರ್‌ ಕುನಾಲ್‌, ಇಓ ಮಹೇಶ್‌, ಡಿವೈಎಸ್ಪಿ (DYSP) ನಾಗರಾಜು ಸೇರಿದಂತೆ ಹಲವು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಪಡೆದಿದ್ದಾರೆ. ಜೊತೆಗೆ ಭಾರಿ ಶಬ್ದ ಎಲ್ಲಿಂದ ಬಂತು ಹೊರಬಂದ ಶಬ್ದಕ್ಕೆ ಕಾರಣವೇನು ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಶ್ವಾನ ದಳ, ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳು ಸಹಾ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.

 ಸಿಂಗಾನಲ್ಲೂರಿನ ಅವಘಡಕ್ಕೆ ಕಾರಣ ಏನು ಎಂಬುದು ಇನ್ನು ಗೊತ್ತಾಗಿಲ್ಲ, ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ, ಅವರ ಅಂತಿಮ ವರದಿ ಬಳಿಕವೇ ನಿಖರ ಕಾರಣ ತಿಳಿಯಲಿದೆ.

 ಕುನಾಲ್‌, ತಹಸಿಲ್ದಾರ್‌

ಮಲಗಿದ್ದ ನಾವು ಭಾರೀ ಶಬ್ದ ಕೇಳಿ ಎದ್ದು ಹೊರಬಂದು ನೋಡಲಾಗಿದೆ, ಮನೆ ಕುಸಿದಿದ್ದು ತಕ್ಷಣ ಮನೆಯಲ್ಲಿದ್ದವರನ್ನು ನಾವೆಲ್ಲರೂ ರಕ್ಷಣೆ ಮಾಡಿದೇವು. ಗ್ರಾಮದಲ್ಲಿ ಕೇಳಿ ಬಂದ ಶಬ್ದ ದೊಡ್ಡಿಂದುವಾಡಿಗೂ ಕೇಳಿಸಿದೆ. ಈ ಶಬ್ದ ಕೇಳಿದ ಗಸ್ತಿನಲ್ಲಿದ್ದ ಪೊಲೀಸರು ಸಹಾ ಗ್ರಾಮಕ್ಕೆ ಬಂದು ನೋಡಿದ್ದಾರೆ. 10ಕ್ಕೂ ಅಧಿಕ ಮನೆಗಳು ಶಬ್ದದಿಂದ ಭಾಗಶಃ ಹಾನಿಯಾಗಿವೆ.

- ಸೋಮಣ್ಣ, ಪ್ರತ್ಯಕ್ಷದರ್ಶಿ.

click me!