Winter Season: ಮೈ ಕೊರೆಯುವ ಚಳಿಗೆ ಥಂಡಾ ಹೊಡೆದ ಧಾರವಾಡ ಮಂದಿ: ರಾಜ್ಯದಲ್ಲೇ ಕನಿಷ್ಠ ತಾಪಮಾನ

By Kannadaprabha News  |  First Published Dec 22, 2021, 6:58 AM IST

*    ರಾಜ್ಯದಲ್ಲಿಯೇ ಧಾರವಾಡದಲ್ಲಿ ಅತೀ ಹೆಚ್ಚು ಚಳಿ ದಾಖಲೆ
*    ಹೊಸ ವರ್ಷದ ವರೆಗೂ ಜೋರಾಗಿದ್ದು ನಂತರ ಕಡಿಮೆ ಸಾಧ್ಯತೆ
*    ಜನತೆ ಚಳಿಯಿಂದ ರಕ್ಷಿಸಿಕೊಳ್ಳಬೇಕು
 


ಬಸವರಾಜ ಹಿರೇಮಠ

ಧಾರವಾಡ(ಡಿ.22):  ಸೂರ್ಯ ತನ್ನ ಪಥ ಬದಲಿಸುವ ಸಂಕ್ರಮಣದ(Makar Sankranti) ವರೆಗೂ ಮೈ ಕೊರೆಯುವ ಚಳಿಯು ಧಾರವಾಡದಲ್ಲಿ(Dharwad) ಚಳವಳಿ ಹೂಡುವುದು ನಿಶ್ಚಿತ. ಡಿಸೆಂಬರ್‌ ಮೊದಲ ವಾರದ ವರೆಗೂ ಈ ವರ್ಷ ಚಳಿಗಾಲವು ಮಳೆಯಲ್ಲಿಯೇ ಮುಗಿದು ಬಿಡುತ್ತದೆ ಎಂದುಕೊಂಡವರು ಒಂದು ವಾರದಿಂದ ದಪ್ಪನೆಯ ರಗ್ಗು ಹೊದ್ದುಕೊಂಡು ಥಂಡಿ ಹೊಡೆತಕ್ಕೆ ಮುದ್ದೆಯಾಗಿ ಕೂತಿದ್ದಾರೆ..!

Latest Videos

ಹೌದು... ಕಳೆದ ಡಿ. 19ರಂದು ಇಡೀ ರಾಜ್ಯದಲ್ಲಿಯೇ(Karnataka) ಧಾರವಾಡದಲ್ಲಿ 9.4 ಡಿಗ್ರಿ ಸೆಲ್ಸಿಯಸ್‌ ಹವಾಮಾನ(Weather) ದಾಖಲಾಗಿದ್ದು, ಹವಾಮಾನ ತಜ್ಞರ ಪ್ರಕಾರ ಹೊಸ ವರ್ಷದ ನಂತರ ಸಂಕ್ರಮಣದ ವರೆಗೂ ಇದೇ ರೀತಿ ಮೈ ಕೊರೆಯುವ ಚಳಿ ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮುಂದುವರೆಯಲಿದೆ. ಬಿಸಿಲು ಕಾಣುವ ಮಧ್ಯಾಹ್ನದ ಹೊತ್ತೇ ಸುಳು-ಸುಳು ತಂಪು ಗಾಳಿಯ ಥಂಡಿಯ ಅನುಭವ. ಇನ್ನು, ಬೆಳಗ್ಗೆ ಮತ್ತು ರಾತ್ರಿ ಚಳಿಯು ತನ್ನ ಪರಾಕಾಷ್ಠೆ ಮುಟ್ಟಿರುತ್ತದೆ. ನಾವು ಧಾರವಾಡದಲ್ಲಿ ಇದ್ದೆವೆಯೋ ಅಥವಾ ಯುರೋಪ ರಾಷ್ಟ್ರಗಳಲ್ಲಿಯೇ ಎನ್ನುವಷ್ಟು ಚಳಿಯ(Cold) ಅನುಭವ ಉಂಟಾಗುತ್ತಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಕೈಗಳನ್ನು ಉಜ್ಜಿ ಉಜ್ಜಿ ಬಿಸಿ ಮಾಡಿಕೊಳ್ಳುವುದು, ಬೆಚ್ಚನೆಯ ಧಿರಿಸು ಧರಿಸುವುದು, ಆಗಾಗ ಬಿಸಿ ಬಿಸಿ ಕಾಫಿ, ಟೀ ಹಾಗೂ ಸೂಪ್‌ ಸೇವನೆ ಮಾಡುತ್ತಿದ್ದಾರೆ. ಮಾರುಕಟ್ಟೆಯ ರಗ್ಗುಗಳ ಅಂಗಡಿಗೆ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ ಬಿಸಿ ಬಿಸಿಯ ಆಹಾರ ಸೇವನೆ ಮಾಡುವ ಮೂಲಕ ಚಳಿಯನ್ನು ನಿಯಂತ್ರಿಸಿದರೂ ಮತ್ತೆ ಕೆಲವರು ಮನೆಗಳಲ್ಲಿ ಹೀಟರ್‌ಗಳನ್ನು ಕೊಂಡಿದ್ದಾರೆ.

ಬೀದರಲ್ಲಿ ಮೈಕೊರೆಯುವ ಚಳಿ: ಕನಿಷ್ಠ ತಾಪಮಾನ ದಾಖಲು

ವಾಕಿಂಗ್‌ ಸಮಯ ಬದಲು:

ನಿತ್ಯ ಬೆಳಗ್ಗೆ 5-6ಕ್ಕೆ ಎದ್ದು ನಿಯಮಿತವಾಗಿ ವಾಯುವಿಹಾರಕ್ಕೆ ಹೋಗುತ್ತಿದ್ದ ವೃದ್ಧರು, ಮಹಿಳೆಯರು ಚಳಿಯ ಸಲುವಾಗಿ ವಾಕಿಂಗ್‌ ಸಮಯ ಬದಲು ಮಾಡಿದ್ದಾರೆ. ಬಿಸಿಲು ಬಿದ್ದ ನಂತರ ಬೆಳಿಗ್ಗೆ 8ರ ನಂತರ ಬಿಸಿ ಬಿಸಿ ಚಹಾ, ಕಾಫಿ ಸೇವಿಸಿ ನಂತರದಲ್ಲಿ ವಾಕಿಂಗ್‌(Walking) ಹೋಗುವಷ್ಟು ಚಳಿಯು ಪರಿಣಾಮ ಬೀರಿದೆ. ಕೆಲವರಂತೂ ಸಂಜೆ 4 ರಿಂದ 6ರ ವರೆಗೆ ವಾಕಿಂಗ್‌ ಹೊರಟಿದ್ದಾರೆ. ಶಾಲಾ ಮಕ್ಕಳಂತೂ ಚಳಿಯ ಹೊಡೆತಕ್ಕೆ 2-3 ರಗ್ಗು ಹೊದ್ದು ಮಲಗುತ್ತಿದ್ದು ಅವರನ್ನು ಎಬ್ಬಿಸಿ ಸಿದ್ಧಪಡಿಸಿ ಶಾಲೆಗೆ ಕಳುಹಿಸುವದರಲ್ಲಿ ಪಾಲಕರಿಗೆ ಸಾಕಾಗಿ ಹೋಗುತ್ತಿದೆ. ಒಂದೂವರೆ ವರ್ಷ ಲಾಕ್‌ಡೌನ್‌(Lockdown) ಹಿನ್ನೆಲೆಯಲ್ಲಿ ಮನೆಯಲ್ಲಿದ್ದು ಸೋಮಾರಿಗಳಾಗಿರುವ ಮಕ್ಕಳು ಚಳಿಗೆ ಬೇಗ ಎದ್ದು ಶಾಲೆಗೆ ಹೋಗಲು ರಚ್ಚೆ ಹಿಡಿಯುತ್ತಿವೆ.

ಹಾಗೆಯೇ, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಬಯಲು ಸೀಮೆಯಲ್ಲಿ ತುಸು ಥಂಡಿಯ ವಾತಾವರಣ ಮಲೆನಾಡು ಪ್ರದೇಶಕ್ಕಿಂತ ಜಾಸ್ತಿ. ಹೀಗಾಗಿ ಗ್ರಾಮದ ಒಂದೆಡೆ ಕಟ್ಟಿಗೆ ಬೆಂಕಿ ಹಚ್ಚಿ ಕಾಯಿಸಿಕೊಂಡು ಕೂರುತ್ತಿದ್ದಾರೆ. ವಿಪರೀತ ಚಳಿಯು ಸಾಮಾನ್ಯ ಜನರಿಗೆ ತೀವ್ರ ತಲೆನೋವಾದರೆ ರೈತರಿಗೆ(Farmers) ಮಾತ್ರ ಖುಷಿ ತಂದಿದೆ. ನಿರಂತರ ಮಳೆಯಿಂದ ಬೇಸತ್ತಿದ್ದ ರೈತರಿಗೆ ಚಳಿ ತುಸು ಪ್ರಮಾಣದಲ್ಲಿ ಕೈ ಹಿಡಿದಿದೆ. ಕಡಲೆ, ಗೋದಿ, ಕುಸಬೆ ಹಾಗೂ ಮಾವು ಬೆಳೆಗೆ ಚಳಿ ಅನುಕೂಲ ಕಲ್ಪಿಸಿದೆ. ಚಳಿಯ ಹವಾಗುಣಕ್ಕೆ ಈ ಬೆಳೆಗಳು ಬರಲಿದ್ದು ರೈತರಿಗೆ ಸಮಾಧಾನ. ಇನ್ನು ಚಳಿ ಇದ್ದಷ್ಟು ಮಾವಿನ ಗಿಡಗಳು ಹೂ ಬಿಡುವ ಪ್ರಕ್ರಿಯೆ ಶುರು ಮಾಡಲಿವೆ ಎಂದು ತೋಟಗಾರಿಕಾ ಇಲಾಖೆ ತಜ್ಞರು ಅಭಿಪ್ರಾಯ ಪಡುತ್ತಾರೆ.

ಕನಿಷ್ಠ ತಾಪಮಾನ ದಾಖಲು: ಇನ್ನೂ ಹೆಚ್ಚಾಗಲಿದೆ ಮೈಕೊರೆಯುವ ಚಳಿ

ಎಚ್ಚರ ವಹಿಸಿ:

ಧಾರವಾಡದಲ್ಲಿ ಪ್ರಸ್ತುತ ಗಾಳಿ ಸಮೇತ ಚಳಿ ಬೀಸುತ್ತಿದೆ. ಧಾರವಾಡದಲ್ಲಿ ಮೊದಲೇ ರಸ್ತೆಗಳು ಹಾಳಾಗಿವೆ. ತಗ್ಗು- ಗುಂಡಿಗಳಲ್ಲಿ ಮಣ್ಣು ಹಾಕಿ ತುಂಬಿಸಲಾಗಿದ್ದು ವಾಹನಗಳ ಸಂಚಾರದಿಂದ ಧೂಳೋ ಧೂಳು. ಹೀಗಾಗಿ ಬೈಕ್‌ ಸವಾರರು ಮತ್ತು ಪಾದಾಚಾರಿಗಳಿಗೆ ಚಳಿಯ ಜೊತೆಗೆ ಧೂಳಿನ ಅಭಿಷೇಕವೂ ಆಗುತ್ತಿದೆ. ಇದರಿಂದ ಸೈನಸ್‌ ಸಮಸ್ಯೆ, ಧೂಳು, ಚಳಿಯ ಅಲರ್ಜಿ ಉಂಟಾಗುತ್ತಿದೆ. ಇನ್ನು ಕೆಲವರಿಗೆ ಕೆಮ್ಮು, ನೆಗಡಿ, ಚರ್ಮದಲ್ಲಿ ನೀರಿನಾಂಶ ಕಡಿಮೆಯಾಗಿ ಚರ್ಮ ಒಡೆದು ರಕ್ತಸ್ರಾವದಂತಹ ದೈಹಿಕ ಸಮಸ್ಯೆಗಳೂ ಆಗುತ್ತಿವೆ. ಬಹುತೇಕ ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ಹೃದಯಾಘಾತ(Heartattack) ಆಗುವ ಸಾಧ್ಯತೆಗಳು ಇರುವುದರಿಂದ ಬೆಚ್ಚನೆಯ ವಾತಾವರಣ ಕಾಯ್ದುಕೊಳ್ಳುವುದು ಮತ್ತು ಚಳಿ ಹೆಸರಿನಲ್ಲಿ ನಿರಂತರ ವ್ಯಾಯಾಮ ನಿಲ್ಲಿಸೋದು ಬೇಡ ಎನ್ನುತ್ತಾರೆ ವೈದ್ಯರು.

ಚಳಿಯಿಂದ ರಕ್ಷಿಸಿಕೊಳ್ಳಿ:

ಕಳೆದ ಡಿ. 19ರಂದು ಇಡೀ ರಾಜ್ಯದ ಪೈಕಿ ಧಾರವಾಡದಲ್ಲಿ ಅತೀ ಕನಿಷ್ಠ ತಾಪಮಾನ ದಾಖಲಾಗಿದೆ. ಅಲ್ಲದೇ ಇನ್ನೊಂದು ವಾರ ಕಾಲ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್‌ ಒಳಗೆ ಹಾಗೂ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌ ಒಳಗೆ ಇರುತ್ತದೆ. ನಂತರದಲ್ಲಿ ನಿಧಾನವಾಗಿ ತಾಪಮಾನದಲ್ಲಿ ಏರಿಕೆ ಕಂಡು ಸಂಕ್ರಮಣ ಸಂದರ್ಭದಲ್ಲಿ ಬಿಸಿಲು ಏರಿಕೆಯಾಗಲಿದೆ. ಅಲ್ಲಿಯ ವರೆಗೂ ಜನತೆ ಚಳಿಯಿಂದ ರಕ್ಷಿಸಿಕೊಳ್ಳಬೇಕು. ಈ ಚಳಿ ಮಾತ್ರ ಹಿಂಗಾರು ಬೆಳೆಗಳಿಗೆ ಅನಕೂಲ ಕಲ್ಪಿಸಿದೆ ಅಂತ  ಕೃಷಿ ವಿವಿ ಹವಾಮಾನ ತಜ್ಞ ಡಾ.ಆರ್‌.ಎಚ್‌. ಪಾಟೀಲ ತಿಳಿಸಿದ್ದಾರೆ. 
 

click me!