ಅಧೀಕ್ಷಕ ಎಂಜಿನಿಯರ್‌ಗಳಿಗೆ ಹಣಕಾಸು ಅನುಮೋದನೆಗೆ ಇಲ್ಲ ಅವಕಾಶ| ಖಾಸಗಿ ಐ.ಟಿ. ಕಂಪನಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲು ಹಣ ನೀಡಿದ್ದರೂ ಕ್ರಮ ಕೈಗೊಂಡಿಲ್ಲ| ಪ್ರತಿ ಕಾಮಗಾರಿಗೂ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಮುಖ್ಯ ಎಂಜಿನಿಯರ್ ಬಳಿ ಅಲೆಯುವಂತಾಗಿದೆ ಎಂಬ ದೂರುಗಳು|
ಬೆಂಗಳೂರು(ನ.02): ಬೆಸ್ಕಾಂ ಆಡಳಿತದ ನಿರ್ಲಕ್ಷ್ಯದಿಂದಾಗಿ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ಗಳಿಗೆ (ಎಸ್.ಇ) ಸ್ವಯಂ ನಿರ್ವಹಣಾ ಕಾಮಗಾರಿಗಳ ಹಣಕಾಸು ಅನುಮೋದನೆಗೆ ಅವಕಾಶವೇ ಇಲ್ಲದಂತಾಗಿದ್ದು, ಲಕ್ಷಾಂತರ ರುಪಾಯಿ ಮೊತ್ತದ ಕಾಮಗಾರಿಗಳು ನೆನೆಗುದಿಗೆಗೆ ಬಿದ್ದಿವೆ. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದು ಕೂಡಲೇ ತಂತ್ರಾಂಶ ಲೋಪ ಸರಿಪಡಿಸುವಂತೆ ಅಧೀಕ್ಷಕ ಎಂಜಿನಿಯರ್‌ಗಳು ಒತ್ತಾಯ ಮಾಡಿದ್ದಾರೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಆರ್ಥಿಕ ಅನುಮೋದನೆಯ ಅಧಿಕಾರ ಹಂಚಿಕೆ ಮಾಡುವ ಮೂಲಕ ಕಾಮಗಾರಿಗಳಿಗೆ ವೇಗ ನೀಡಲು 2018ರಲ್ಲಿ ಅಧೀಕ್ಷಕ ಎಂಜಿನಿಯರ್‌ಗೆ (ಸೂಪರಿಂಡೆಂಟ್ ಎಂಜಿನಿಯರ್) 25 ಲಕ್ಷದಿಂದ 50 ಲಕ್ಷದವರೆಗೆ ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ 25 ಲಕ್ಷದವರೆಗೆ ಹಣಕಾಸು ಅನುಮೋದನೆಗೆ ಅವಕಾಶ ನೀಡಲಾಗಿತ್ತು
ಬೆಸ್ಕಾಂ ಗುತ್ತಿಗೆ ಸ್ಥಳೀಯರ ಬದಲು ದೊಡ್ಡ ಕಂಪನಿಗೆ?
ಆದರೆ, ಇದನ್ನು ಅಧಿಕಾರಿಗಳು ಕಾಮಗಾರಿಗೆ ಹಣಕಾಸು ಅನುಮೋದನೆ ನೀಡುವ ವ್ಯಾಂಫ್ಸ್ (ಡಬ್ಲ್ಯೂಎಎಂಪಿಎಸ್) ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಿ ಅಧೀಕ್ಷಕ ಎಂಜಿನಿಯರ್‌ಗಳಿಗೆ ಆಯ್ಕೆ ನೀಡಿಲ್ಲ. ಹೀಗಾಗಿ ಹಣಕಾಸು ಅಧಿಕಾರವಿದ್ದರೂ ಕಳೆದ ಎರಡು ವರ್ಷದಿಂದ ಬೆಸ್ಕಾಂನ ಐಟಿ ವಿಭಾಗದ ವೈಫಲ್ಯದಿಂದ ಅಧೀಕ್ಷಕ ಎಂಜಿನಿಯರ್‌ಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಈಗಲೂ 25 ಲಕ್ಷ ಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಮುಖ್ಯ ಎಂಜಿನಿಯರ್ ಐ.ಡಿ.ಯಲ್ಲೇ ಅನುಮೋದನೆ ನೀಡಬೇಕಾಗಿದೆ. ಈ ಬಗ್ಗೆ ಬೆಸ್ಕಾಂನ ಆಡಳಿತ ವಿಭಾಗದ ಪ್ರಧಾನ ವ್ಯವಸ್ಥಾಪಕರಿಗೆ ಸೆಪ್ಟೆಂಬರ್‌ನಲ್ಲಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಅಧೀಕ್ಷಕ ಎಂಜಿನಿಯರ್ ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಸ್ಕಾಂ ಆಡಳಿತ ಮಂಡಳಿ ಸಭೆಯಲ್ಲೇ ಅಧೀಕ್ಷಕ ಎಂಜಿನಿಯರ್‌ಗಳಿಗೆ ಆರ್ಥಿಕ ಅಧಿಕಾರ ನೀಡಿದ್ದರೂ, ತಾಂತ್ರಿಕ ವೈಫಲ್ಯಗಳಿಂದ ಅಧಿಕಾರ ಕಸಿದುಕೊಂಡತಾಗಿದೆ. ಖಾಸಗಿ ಐ.ಟಿ. ಕಂಪನಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲು ಹಣ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಪ್ರತಿ ಕಾಮಗಾರಿಗೂ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಮುಖ್ಯ ಎಂಜಿನಿಯರ್ ಬಳಿ ಅಲೆಯುವಂತಾಗಿದೆ ಎಂಬ ದೂರುಗಳು ವ್ಯಕ್ತವಾಗಿವೆ.