ಕೊಡಗು: ಮನೆ ಕುಸಿದು, ಕೊಟ್ಟಿಗೆಯಲ್ಲೇ ಉಳಿದು ಬದು​ಕಿ​ದೆ​ವು, ಸಂತ್ರಸ್ತರ ಕರಾಳ ಅನುಭವ

By Kannadaprabha News  |  First Published Aug 9, 2020, 8:56 AM IST

ಕೊಡಗು ಮಹಾ ಮಳೆ ಸಂತ್ರಸ್ತರ ನೋವು| ವಿಮಾನ ಅಪ್ಪಳಿಸಿದಂತೆ ಶಬ್ದ ಬಂತು. ಮನೆ ಹೊರಗೆ ಬಂದು ನೋಡಿದರೆ ಮನೆಯ ಸಮೀಪದಲ್ಲೇ ಜಲ ಸಮೇತ ಗುಡ್ಡ ಕುಸಿದಿತ್ತು: ಸಂತ್ರಸ್ತರ ಅನುಭವ| ರಾತ್ರಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಬೇರೆ ಕಡೆಗೆ ತೆರಳಲು ಸಾಧ್ಯವಾಗಿಲ್ಲ|


ವಿನೇಶ್‌ ಎಂ.ಭೂತನಕಾಡು 

ಮಡಿಕೇರಿ(ಆ.09): ಮಧ್ಯರಾತ್ರಿ ಮನೆಯಲ್ಲಿ ಗೋಡೆ ಕುಸಿದಿತ್ತು. ಸ್ವಲ್ಪ ಅಜಾಗರೂಕತೆಯಿಂದ ಇದ್ದಿದ್ದರೂ ನಾವು ಮಲಗಿದಲ್ಲೇ ಸಮಾಧಿ ಆಗುತ್ತಿದ್ದೆವು. ನನ್ನ ಎಚ್ಚರಿಕೆಯಿಂದ ಕ್ಷಣಾರ್ಧದಲ್ಲಿ ದೊಡ್ಡ ಅಪಾಯದಿಂದ ಪಾರಾಗಿ ಕುಸಿದು ಬಿದ್ದ ಮನೆಯಿಂದ ಓಡಿ ಹೋಗಿ ಜೀವ ಉಳಿಸಿಕೊಂಡು ಕೊಟ್ಟಿಗೆಯಲ್ಲೇ ದಿನ ಕಳೆದವು. ಇದು ಕೊಡಗು ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದ ಮನೆ ಕುಸಿದು ಬದುಕಿಬಂದ ಕೊಣಜಗೇರಿ ಗ್ರಾಪಂ ವ್ಯಾಪ್ತಿಯ ಕೈಕಾಡು ಗ್ರಾಮದ ರೋಸಿ ಮೋಹನ್‌ ಅವರ ಮಾತು.

Tap to resize

Latest Videos

‘ಎಂದಿನಂತೆ ನಾವು ನಿದ್ದೆಗೆ ಜಾರಿದ್ದೆವು. ಆದರೆ ಭಾರಿ ಮಳೆಯಿಂದಾಗಿ ಗುರುವಾರ ಮಧ್ಯರಾತ್ರಿ ಗೋಡೆಯ ಮಣ್ಣು ಬೀಳತೊಡಗಿತ್ತು. ಭಯದಿಂದ ನಾನು ಎಚ್ಚರವಾಗಿಯೇ ಇದ್ದೆ. ಮನೆಯಲ್ಲಿ ಕರೆಂಟ್‌ ಕೂಡ ಇರಲಿಲ್ಲ. ಹೊರಗೆ ಬಂದು ನೋಡುವಾಗ ಗೋಡೆ ಬಿರುಕು ಬಿಡುತ್ತಾ ಬರುತ್ತಿತ್ತು. ನಿದ್ದೆಯಲ್ಲಿದ್ದ ಮಕ್ಕಳು ಹಾಗೂ ಪತಿಯನ್ನು ಎಬ್ಬಿಸಿ ಹೊರಗೆ ಕರೆದುಕೊಂಡು ಬಂದೆ. ಕ್ಷಣ ಮಾತ್ರದಲ್ಲಿ ಮನೆ ಗೋಡೆ ನೆಲಸಮವಾಯಿತು. ಸ್ಪಲ್ಪ ಹೊತ್ತು ಅಲ್ಲೇ ಇದ್ದಿದ್ದರೆ ನಾವು ಇಂದು ಬದುಕಿರಲು ಸಾಧ್ಯವಿರುತ್ತಿರಲಿಲ್ಲ’ ಎಂದು ರೋಸಿ ತಮ್ಮ ಅನುಭವ ಹಂಚಿಕೊಂಡರು.

ಕೊಡಗು: ತಲಕಾವೇರಿ ಅರ್ಚಕರ ಕುಟುಂಬದ ಒಂದು ಮೃತ ದೇಹ ಪತ್ತೆ

‘ಮಧ್ಯರಾತ್ರಿ ಬಿರುಗಾಳಿ ಕೂಡ ಜೋರಾಗಿ ಬೀಸುತ್ತಿದ್ದರಿಂದ ಮನೆಯ ಪಕ್ಕದಲ್ಲಿದ್ದ ನಮ್ಮದೇ ದನದ ಕೊಟ್ಟಿಗೆಯಲ್ಲಿ ಮಕ್ಕಳೊಂದಿಗೆ ದಿನ ಕಳೆದೆವು. ಆ ಮಳೆಯ ಅಬ್ಬರ ನೆನಸಿಕೊಂಡರೆ ಈಗಲೂ ಭಯವಾಗುತ್ತದೆ. ಬೆಳಗ್ಗೆ ಸ್ಥಳೀಯರಿಗೆ ಕರೆ ಮಾಡಿ ಮಾಹಿತಿ ನೀಡಿದೆವು. ಈಗ ಮನೆ ಪಕ್ಕದ ಮನೆಯಲ್ಲಿ ತಂಗಿದ್ದೇವೆ. ನಾಳೆಯಿಂದ ಪರಿಹಾರ ಕೇಂದ್ರಕ್ಕೆ ತೆರಳಬೇಕು’ ಎಂದು ರೋಸಿ ಅಳಲು ತೋಡಿಕೊಂಡರು.

ವಿಮಾನ ಅಪ್ಪಳಿಸಿದಂತೆ ಶಬ್ಧ ಬಂತು

ಗುರುವಾರ ರಾತ್ರಿ 9 ಗಂಟೆಗೆ ವಿಮಾನ ಅಪ್ಪಳಿಸಿದಂತೆ ಶಬ್ದ ಬಂತು. ಮನೆ ಹೊರಗೆ ಬಂದು ನೋಡಿದರೆ ಮನೆಯ ಸಮೀಪದಲ್ಲೇ ಜಲ ಸಮೇತ ಗುಡ್ಡ ಕುಸಿದಿತ್ತು. ಈ ಸಂದರ್ಭ ಕುಟುಂಬಸ್ಥರೆಲ್ಲರೂ ಅಲ್ಲಿಂದ ಓಡಿ ಜೀವ ಉಳಿಸಿಕೊಂಡಿದ್ದೇವೆ ಎಂದು ಭಾಗಮಂಡಲ ಸಮೀಪದ ಚೇರಂಗಾಲದ ನಿವಾಸಿ ರಾಮಚಂದ್ರ ಭೂಕುಸಿತದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. 5 ಕಿ.ಮೀ ದೂರದಿಂದ ಮರಗಳು ಹಾಗೂ ಬಂಡೆಗಲ್ಲುಗಳು ನೀರಿನ ಸಮೇತ ಬಂದು ಮನೆ ಸಮೀಪ ಬಿದ್ದಿವೆ. ಇಲ್ಲಿನ ಹತ್ತು ಮನೆಗಳಿಗೆ ಸಂಪರ್ಕ ಕಳೆದುಕೊಂಡಿದೆ. ಸೇತುವೆ ಇಲ್ಲ, ನಾವು ಪಕ್ಕದ ಮನೆಯಲ್ಲಿ ನೆಲೆಸಿದ್ದೇವೆ ಎಂದು ವಿವರಿಸಿದರು.

ಬೋಟ್‌ನಲ್ಲಿ ಜೀವ ರಕ್ಷ​ಣೆ

4-5 ದಿನಗಳಿಂದ ಭಾರಿ ಮಳೆಯಿಂದಾಗಿ ಭಾಗಮಂಡಲ ಜಲಾವೃತವಾಗಿತ್ತು. ಭಗಂಡೇಶ್ವರ ದೇವಾಲಯದ ಸಮೀಪವೇ ನಮ್ಮ ಮನೆ. ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿತ್ತು. ಗುರುವಾರ ಮಧ್ಯರಾತ್ರಿ 1.30ಕ್ಕೆ ಎದ್ದು ನೋಡುವಾಗ ಮನೆಗೆ ನೀರು ನುಗ್ಗಿತ್ತು ಎಂದು ಭಾಗಮಂಡಲದ ನಿವಾಸಿ ಕುದುಕುಳಿ ಭರತ್‌, ಪ್ರವಾಹನ ಅನುಭವ ವಿವರಿಸಿದರು.

ರಾತ್ರಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಬೇರೆ ಕಡೆಗೆ ತೆರಳಲು ಸಾಧ್ಯವಾಗಿಲ್ಲ. ಮಗಳ ಸಣ್ಣ ಹಸುಗೂಸು ಇದ್ದ ಹಿನ್ನೆಲೆಯಲ್ಲಿ ರಾತ್ರಿ ಪ್ರವಾಹ ಇದ್ದರೂ ಮನೆಯಲ್ಲೇ ಉಳಿದುಕೊಂಡು ಶುಕ್ರವಾರ ಬೆಳಗ್ಗೆ ಬೋಟ್‌ ಬಂದ ಬಳಿಕ ನಾವು ಮನೆಯಲ್ಲಿದ್ದ ನಾಯಿ ಸಮೇತ ಸ್ಥಳಾಂತರವಾದೆವು ಎನ್ನುತ್ತಾರೆ ಭರತ್‌.

click me!