ತಗಡಿನ ಶೀಟ್‌ನಿಂದ ಸೋಂಕಿತನ ಮನೆ ಸೀಲ್ಡೌನ್‌: ಬಿಬಿಎಂಪಿ ಮತ್ತೆ ಎಡವಡ್ಡು

By Kannadaprabha NewsFirst Published Jul 25, 2020, 7:25 AM IST
Highlights

ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಮನೆಯ ಬಾಗಿಲಿಗೆ ಅಡ್ಡಲಾಗಿ ತಗಡಿನ ಶೀಟ್‌ ಅಳವಡಿಸಿದ್ದ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು(ಜು.25): ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಮನೆಯ ಬಾಗಿಲಿಗೆ ಅಡ್ಡಲಾಗಿ ತಗಡಿನ ಶೀಟ್‌ ಅಳವಡಿಸಿದ್ದ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ನಗರದ ಶಾಂತಿನಗರ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತರು ಹಾಗೂ ಅವರ ನೆರೆಮನೆಯವರ ಬಾಗಿಲುಗಳಿಗೆ ತಗಡಿನ ಶೀಟ್‌ ಅಳವಡಿಸಿ ಗುರುವಾರ ಸೀಲ್‌ಡೌನ್‌ ಮಾಡಿದ್ದರು. ಬಿಬಿಎಂಪಿ ಸಿಬ್ಬಂದಿಯ ಎಡವಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ಬಳಿಕ ಶೀಟನ್ನು ತೆರವುಗೊಳಿಸಿತ್ತು. ಈ ಘಟನೆ ಬಗ್ಗೆ ಆಯುಕ್ತರು ಕೂಡ ಕ್ಷಮೆಯಾಚಿಸಿದ್ದರು.

ಧಾರವಾಡ: ಸತ್ತ ವ್ಯಕ್ತಿ ನೀರು ಕುಡಿದನೆಂದು ಆಸ್ಪತ್ರೆಗೆ ಓಡೋಡಿ ಬಂದ ಜನರು..!

ಇದೀಗ ಈ ರೀತಿಯ ಘಟನೆ ವನ್ನಾರ್‌ಪೇಟೆ ವಾರ್ಡ್‌ನ ವಿವೇಕನಗರದಲ್ಲಿ ಬೆಳಕಿಗೆ ಬಂದಿದೆ. ವಿವೇಕನಗರದಲ್ಲಿ ಸೋಂಕು ದೃಢಪಟ್ಟಹುಡುಗ ವಾಸವಿದ್ದ ಕಟ್ಟಡವನ್ನೇ ಬಿಬಿಎಂಪಿ ಅಧಿಕಾರಿಗಳು ತಗಡಿನ ಶೀಟ್‌ ಹಾಕಿ ಸೀಲ್‌ಡೌನ್‌ ಮಾಡಿದ್ದಾರೆ. ಕಳೆದ ಭಾನುವಾರ ಮನೆಯ ಮುಂಭಾದ ಗೇಟ್‌ಗೆ ತಗಡಿನ ಶೀಟ್‌ ಹಾಕಿ ಮನೆಯಿಂದ ಯಾರು ಹೊರ ಬರದಂತೆ ಕಂಪ್ಲೀಟ್‌ ಬಂದ್‌ ಮಾಡಲಾಗಿತ್ತು. ಇದರಿಂದ ಕಳೆದ ಐದು ದಿನಗಳಿಂದ ಆ ಕಟ್ಟಡದ ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಅಗತ್ಯ ವಸ್ತುಗಳನ್ನು ಕೂಡ ನೀಡಲು ನೆರೆಹೊರೆಯವರು ಸಹಾಯ ಮಾಡಿಲ್ಲ.

5 ದಿನದ ಬಳಿಕ ತೆರವು:

ಕೊನೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಫೋನ್‌ ಮಾಡಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಐದು ದಿನಗಳಾದರೂ ಯಾವ ಅಧಿಕಾರಿಯೂ ಬಂದಿರಲಿಲ್ಲ ಎನ್ನಲಾಗಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಬಂದು ತಗಡಿನ ಶೀಟ್‌ ತೆರವುಗೊಳಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಎಡವಟ್ಟಿಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಎಂಜಿನಿಯರ್‌ ಸೂಚಿಸಿದ್ದರು:

ಮನೆಯ ಬಾಗಿಲಿಗೆ ತಗಡು ಹಾಕಿ ಸೀಲ…ಡೌನ್‌ ಮಾಡುವಂತೆ ಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಕಂಟೈನ್ಮೆಂಟ್‌ ಝೋನ್‌ ಮೇಲ್ವಿಚಾರಕರು ತಿಳಿಸಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ನಾಲ್ಕೈದು ದಿನದಿಂದ ನಮಗೆ ಹಾಲು, ದಿನಸಿ, ಔಷಧಿಯ ಸಹಾಯವನ್ನು ಯಾರೂ ಮಾಡಿಲ್ಲ. ಬಿಬಿಎಂಪಿಗೆ ಫೋನ್‌ ಮಾಡಿದ್ದರೂ ಯಾವ ಅಧಿಕಾರಿಯೂ ಸ್ಪಂದಿಸಿಲ್ಲ. ನಾವು ತುಂಬಾ ಕಷ್ಟಪಟ್ಟಿದ್ದೇವೆ. ಬಿಬಿಎಂಪಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

click me!