
ಹಾಸನ (ಫೆ.08): 10 ರು. ನಾಣ್ಯ ಚಲಾವಣೆಯಲ್ಲಿದ್ದರು ಸಹ ಸಾರ್ವಜನಿಕರು ನಾಣ್ಯ ಬಳಕೆ ಮಾಡಲು ಹಿಂಜರಿಯುತ್ತಿರುವುದು ಕಂಡು ಬಂದಿದೆ. ಸಾರ್ವಜನಿಕರು ದೈನಂದಿನ ವ್ಯವಹಾರದಲ್ಲಿ ಹತ್ತು ರು. ನಾಣ್ಯವನ್ನು ಬಳಸ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ನಗರದ ಜಿಪಂ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಕೆನರಾ ಬ್ಯಾಂಕ್ ಮತ್ತು ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕತೆಯಲ್ಲಿ ಬ್ಯಾಂಕ್‌ಗಳ ಪಾತ್ರ ಅತ್ಯಂತ ಪ್ರಮುಖವಾದದು ಎಂದರು.
ಜೇಬಿನಲ್ಲಿದೆಯಾ ಹರಿದ 10 ರೂ. ನೋಟು, ಕ್ಷಣಾರ್ಧದಲ್ಲಿ ಶ್ರೀಮಂತರಾಗಿ!
ತಂತ್ರಜ್ಞಾನ ಸಾಕಷ್ಟುಅಭಿವೃದ್ಧಿ ಹೊಂದಿದೆ, ಅದನ್ನು ಬಳಸಿಕೊಂಡು ನಕಲಿ ನೋಟು ಚಲಾವಣೆ ತಡೆಗಟ್ಟುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರ ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಬ್ಯಾಂಕ್‌ಗಳು ಸಾರ್ವಜನಿಕರಿಗೆ ನೀಡುವ ವಿವಿಧ ಸವಲತ್ತುಗಳಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಮಾತನಾಡಿ, ಸಾರ್ವಜನಿಕರಿಗೆ ಬ್ಯಾಂಕ್ ಸೇವೆ ಅತ್ಯಗತ್ಯ ಬ್ಯಾಂಕ್‌ಗಳಿಗೆ ಅಗತ್ಯವಿರುವ ಸುರಕ್ಷತೆಯನ್ನು ಪೊಲೀಸ್ ಇಲಾಖೆಯಿಂದ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ರಿಸವ್‌ರ್ ಬ್ಯಾಂಕ್ ಆಫ್ ಇಂಡಿಯಾದ ಎಜಿಎಂ ಮಹೇಶ್, ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಜಗದೀಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ರೇವತಿ ಸುಧಾಕರ್, ನಬಾರ್ಡ್ ವ್ಯವಸ್ಥಾಪಕ ಬಿ.ಜಿ.ಭಟ್, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶ್ ಇದ್ದರು.