ಸಾಮಾಜಿಕ ಅಂತರ ಎಲ್ಲಿದೆ ಸಚಿವರೇ? ಅಕ್ಕಪಕ್ಕದಲ್ಲೇ ಕುಳಿತೇ ಬಸ್‌ ಪ್ರಯಾಣ

By Kannadaprabha News  |  First Published Jun 10, 2020, 11:47 AM IST

ವಿಜಯಪುರ ನಗರ ಸಾರಿಗೆ ಬಸ್‌ನಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ| ಕೊರೋನಾ ಹರಡುವ ಆತಂಕ|  ಆಟೋಗಳಲ್ಲಿ ಇಬ್ಬರು ಪ್ರಯಾಣಿಸಬೇಕೆಂಬ ನಿಯಮವಿದೆ. ಆದರೆ ಕೆಲ ಆಟೋ ಚಾಲಕರು ಲಾಭದ ಆಸೆಗಾಗಿ ಇಬ್ಬರ ಬದಲು ಹಿಂಬದಿ ಮೂವರು, ಚಾಲಕನ ಪಕ್ಕದಲ್ಲಿ ಒಬ್ಬರನ್ನು ಒಯ್ಯುತ್ತಿರುವುದು ಅಲ್ಲಲ್ಲಿ ಗೋಚರ|


ರುದ್ರಪ್ಪ ಆಸಂಗಿ

ವಿಜಯಪುರ(ಜೂ.10): ಜಿಲ್ಲೆಯ ಕೆಲ ಬಸ್‌ಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಪ್ರಯಾಣಿಕರು ಬಸ್‌ಗಳಲ್ಲಿ ಸಂಚಾರ ಮಾಡುತ್ತಿದ್ದು, ಇದರಿಂದಾಗಿ ಕೊರೋನಾ ಹರಡುವಿಕೆಗೆ ಅನುಕೂಲ ಮಾಡಿಕೊಟ್ಟಂತಾಗಿದೆ.
ಹೌದು, ವಿಜಯಪುರದ ನಗರ ಸಾರಿಗೆ ಬಸ್‌ ಹಾಗೂ ಹೊರ ಭಾಗಗಳಿಗೆ ತೆರಳುವ ಕೆಲ ಬಸ್‌ಗಳಲ್ಲಿ ಯಾವುದೇ ಭಯವಿಲ್ಲದೆ ಪ್ರಯಾಣಿಕರು ಸಾಮಾಜಿಕ ಅಂತರ ಗಾಳಿಗೆ ತೂರಿ ಒಬ್ಬರ ಪಕ್ಕ ಒಬ್ಬರು ಕುಳಿತು ಪ್ರಯಾಣ ಮಾಡುತ್ತಿರುವುದು ತುಂಬಾ ಅಪಾಯಕಾರಿಯಾಗಿದೆ.

Latest Videos

undefined

ಸರ್ಕಾರ ಬಸ್‌ಗಳನ್ನು ಆರಂಭಿಸುವ ಮುನ್ನ ಮಾಸ್ಕ್‌ ಕಡ್ಡಾಯವಾಗಿ ಹಾಕಬೇಕು. ಮೂವರು ಕೂರುವ ಆಸನದಲ್ಲಿ ಇಬ್ಬರು, ಇಬ್ಬರು ಕೂರುವ ಆಸನದಲ್ಲಿ ಒಬ್ಬರೆ ಕುಳಿತು ಪ್ರಯಾಣಿಸಬೇಕು ಎಂದು ಸ್ಪಷ್ಟಪಡಿಸಿತ್ತು. ಆದರೆ ವಿಜಯಪುರ ಜಿಲ್ಲೆಯಲ್ಲಿ ಕೆಲ ಪ್ರಯಾಣಿಕರು ಜೀವದ ಹಂಗು ತೊರೆದು ಕೊರೋನಾ ಏನ್‌ ಮಾಡ್ತದ, ಅದೆಲ್ಲೈತಿ ಕುತ್ಕೊಳ್ರೋ... ಎಂಬ ಮನೋಭಾವನೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರಯಾಣಿಸುತ್ತಿದ್ದಾರೆ. ಇದು ಹುಂಬತನ ಪ್ರದರ್ಶಿಸುವ ಕಾಲವಲ್ಲ. ಒಬ್ಬರಿಗೆ ಕೊರೋನಾ ಇದ್ದರೆ ಅದು ಅಕ್ಕ ಪಕ್ಕದಲ್ಲಿ ಕುಳಿತುಕೊಂಡು ಪ್ರಯಾಣಿಸುವವರಿಗೂ ವಕ್ಕರಿಸುವದಂತೂ ಗ್ಯಾರಂಟಿ. ಬಸ್‌ ನಿರ್ವಾಹಕನಿಗೆ ಸೋಂಕು ತಗುಲಿದರೆ ಸಾಕು. ಎಲ್ಲರ ಬಳಿ ಟಿಕೆಟ್‌ ಪಡೆಯುವ ಸಂದರ್ಭದಲ್ಲಿ ಕೊರೋನಾ ವೈರಸ್‌ ಹರಡುತ್ತದೆ. ಆಗ ಅದು ಇಡೀ ಬಸ್ಸಿಗೆ ಹರಡುವ ಸಾಧ್ಯತೆ ಇದೆ. ಪ್ರಯಾಣಿಕರು ಮನೆಗೆ ಹೋಗುವ ಮುನ್ನ ತಮ್ಮ ಗೆಳೆಯರು, ಮನೆ ಮಂದಿಗೆಲ್ಲ ಕೊರೋನಾ ಹರಡಿಸಿ ಬಿಡುವ ಸಾಧ್ಯತೆ ಇದೆ.

ಕೊರೋನಾತಂಕ: ಫಲಿತಾಂಶ ಬರೋವರೆಗೆ ಕ್ವಾರಂಟೈನ್‌ ಕಡ್ಡಾಯ

ಮಾಸ್ಕ್‌ ಹಾಕದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಸ್‌ನಲ್ಲಿ ಪ್ರಯಾಣಿಸಿದರೆ ಬಸ್‌ ನಿರ್ವಾಹಕರು, ಚಾಲಕರು ಅಂಥ ಪ್ರಯಾಣಿಕರನ್ನು ಬಸ್ಸಿನಲ್ಲಿ ಕರೆದುಕೊಳ್ಳಬಾರದು. ಅಂಥವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿವಳಿಕೆ ನೀಡಬೇಕು. ಆದರೆ ಕೆಲ ಬಸ್‌ ನಿರ್ವಾಹಕರು, ಚಾಲಕರು ಇದು ತಮಗೆ ಸಂಬಂಧವಿಲ್ಲದವರಂತೆ ವ್ಯವಹರಿಸುತ್ತಿರುವುದರಿಂದಾಗಿ ಪ್ರಯಾಣಿಕರು ಅಕ್ಕಪಕ್ಕದಲ್ಲಿಯೇ ಕುಳಿತು ಪ್ರಯಾಣಿಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಗಳು, ಜಿಲ್ಲಾ ಸಾರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಬಹು ಬೇಗನೆ ಕೊರೋನಾ ಹರಡುವುದು ತಪ್ಪುವುದೇ ಇಲ್ಲ. ಇದು ಅಪಾಯದ ಮುನ್ಸೂಚನೆಯಾಗಿದೆ.

ಬಸ್ಸಿನಲ್ಲಿ ಪಕ್ಕದ ಆಸನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಗೆ ಬೇರೆ ಆಸನದಲ್ಲಿ ಕುಳಿತುಕೊಳ್ಳುವಂತೆ ಪ್ರಯಾಣಿಕರು ಹೇಳಿದರೆ ಆ ಪ್ರಯಾಣಿಕ ಜೊತೆಗೆ ಬಸ್ಸಿನಲ್ಲಿ ಜಗಳದ ಪ್ರಸಂಗಗಳು ನಡೆಯುತ್ತಿವೆ. ಇದರಿಂದಾಗಿ ಅನಿವಾರ್ಯವಾಗಿ ಅಕ್ಕಪಕ್ಕದಲ್ಲಿಯೇ ಕುಳಿತುಕೊಂಡು ಪ್ರಯಾಣಿಸುವ ಪ್ರಸಂಗಗಳು ಹೆಚ್ಚುತ್ತಿವೆ.

ಆಟೋಗಳಲ್ಲಿ ಇಬ್ಬರು ಪ್ರಯಾಣಿಸಬೇಕೆಂಬ ನಿಯಮವಿದೆ. ಆದರೆ ಕೆಲ ಆಟೋ ಚಾಲಕರು ಲಾಭದ ಆಸೆಗಾಗಿ ಇಬ್ಬರ ಬದಲು ಹಿಂಬದಿ ಮೂವರು, ಚಾಲಕನ ಪಕ್ಕದಲ್ಲಿ ಒಬ್ಬರನ್ನು ಒಯ್ಯುತ್ತಿರುವುದು ಅಲ್ಲಲ್ಲಿ ಗೋಚರಿಸುತ್ತಿವೆ. ಇದು ಕೂಡಾ ಕೊರೋನಾ ಹರಡಲು ಅನುವು ಮಾಡಿದಂತೆಯೇ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪೊಲೀಸರು ಈ ಬಗ್ಗೆ ನಿಗಾ ವಹಿಸುವುದು ಹೆಚ್ಚು ಸೂಕ್ತ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.

ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕು. ಅದನ್ನು ಉಲ್ಲಂಘನೆ ಮಾಡುವುದು ತಪ್ಪು. ಎಲ್ಲ ಬಸ್ಸಿನ ನಿರ್ವಾಹಕರು, ಚಾಲಕರಿಗೆ ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ವಿಜಯಪುರದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಅಧಿಕಾರಿ ಡಿ.ಎ. ಬಿರಾದಾರ ಅವರು ಹೇಳಿದ್ದಾರೆ. 
 

click me!