ಆಹಾರದ ಕಿಟ್ ಕೇಳಿದ ಮಹಿಳೆ ಮೇಲೆ ಹಲ್ಲೆ| ಸಂಕಷ್ಟದಲ್ಲಿ ಇರುವವರಿಗೆ ನೆರವಾಗಲೆಂದು ಸ್ಪಾಂಜ್ ಐರನ್ ಕಂಪನಿಗಳು ನೀಡಿದ ಆಹಾರಧಾನ್ಯಗಳ ವಿತರಣೆ ವೇಳೆ ನಡೆದ ಘಟನೆ| ಹಲ್ಲೆಗೊಳಗಾದ ಮಹಿಳೆ ವಿಮ್ಸ್ ಆಸ್ಪತ್ರೆಗೆ ದಾಖಲು|
ಬಳ್ಳಾರಿ(ಏ.19): ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಲೆಂದು ಸ್ಪಾಂಜ್ ಐರನ್ ಕಂಪನಿಗಳು ನೀಡಿದ ಆಹಾರಧಾನ್ಯಗಳ ವಿತರಣೆ ವೇಳೆ ಪಡಿತರ ಕೇಳಿದ ಕಾರಣಕ್ಕಾಗಿ ಮಹಿಳೆಯರೊಬ್ಬರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ತಾಲೂಕಿನ ಬೆಳಗಲ್ಲು ತಾಂಡಾದಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ ಹಲ್ಲೆಗೊಳಗಾದ ಮೋತಿಬಾಯಿ ಎಂಬ ವಿಧವೆ ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪಾಂಜ್ ಐರನ್ ಕಂಪನಿಯವರು ನೀಡಿದ ಆಹಾರ ಕಿಟ್‌ಗಳನ್ನು ಸ್ಥಳೀಯರ ನೆರವಿನೊಂದಿಗೆ ಮನೆಮನೆಗೆ ಹಂಚಿಕೆ ಮಾಡಲಾಗುತ್ತಿತ್ತು. ಇದೇ ವೇಳೆ ಮೋತಿಬಾಯಿ ತನಗೂ ಕಿಟ್ ನೀಡುವಂತೆ ಕೇಳಿದ್ದಾರೆ.
ಸಂಕಷ್ಟದಲ್ಲೂ ರಾಜಕೀಯ ಮಾಡುತ್ತಿರುವ ಪುಡಿ ರಾಜಕಾರಣಿಗಳು..!
ಕಿಟ್ ನೀಡಲು ನಿರಾಕರಿಸಲಾಗಿದೆ. ಇದೇ ವೇಳೆ ಸ್ಥಳೀಯ ಲಕ್ಷ್ಮಣನಾಯ್ಕ, ಬಾಬುನಾಯ್ಕ, ರಾಮನಾಯ್ಕ ಹಾಗೂ ವೆಂಕಟೇಶ್ ನಾಯ್ಕ ಹಾಗೂ ಮೋತಿಬಾಯಿ ನಡುವೆ ಮಾತಿಗೆ ಮಾತು ಬೆಳೆದಿದ್ದು, ಮೋತಿಬಾಯಿ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ತೀವ್ರ ಅಸ್ವಸ್ಥರಾದ ಮೋತಿಬಾಯಿ ಅವರನ್ನು ಇಲ್ಲಿನ ವಿಮ್ಸ್‌ಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.