ಅಪ್ಪನ ಸಾವಿನಲ್ಲೂ ಇಬ್ಬರ ಜೀವ ಉಳಿಸಿದ KMC ಆಸ್ಪತ್ರೆ ವೈದ್ಯ!

By Kannadaprabha News  |  First Published Mar 1, 2021, 8:44 AM IST

ಅಪ್ಪನ ಸಾವಿನ ನೋವಿನಲ್ಲೂ ಇಬ್ಬರ ಜೀವ ಉಳಿಸುವ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಅವರು ವೈದ್ಯ ವೃತ್ತಿಯ ಸಾರ್ಥಕತೆ ಮೆರೆದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ. 


ಮಂಗಳೂರು (ಮಾ.01):  ಅಪ್ಪನ ಸಾವಿನ ನೋವಿನಲ್ಲೂ ಇಬ್ಬರ ಜೀವ ಉಳಿಸುವ ಮೂಲಕ ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಅವರು ವೈದ್ಯ ವೃತ್ತಿಯ ಸಾರ್ಥಕತೆ ಮೆರೆದಿದ್ದು, ‘ವೈದ್ಯೋ ನಾರಾಯಣೋ ಹರಿಃ’ ಎಂಬುದನ್ನು ಅಕ್ಷರಶಃ ಸಾಬೀತು ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್‌ ಫೆ.26ರಂದು ರಾತ್ರಿ ಎಂದಿನಂತೆ ರೋಗಿಗಳ ಪರೀಕ್ಷೆಯಲ್ಲಿ ನಿರತರಾಗಿದ್ದರು. ಈ ವೇಳೆ ಪದ್ಮನಾಭ್‌ ಅವರ ತಂದೆ, ದ.ಕ. ಜಿಲ್ಲೆಯ ಮಾಜಿ ಮಲೇರಿಯಾ ಅಧಿಕಾರಿ ಡಾ. ಮಂಜುನಾಥ ಕಾಮತ್‌ ಅವರ ದೇಹಸ್ಥಿತಿ ಗಂಭೀರವಾಗಿದೆ ಎಂದು ಮನೆಯಿಂದ ಫೋನ್‌ ಬಂದಿತ್ತು. ಕೂಡಲೇ ಮನೆಗೆ ತೆರಳಿದ ಪದ್ಮನಾಭ್‌, ತುರ್ತು ಚಿಕಿತ್ಸೆ ನೀಡಿದರಾದರೂ ವಯೋ ಸಹಜವಾಗಿಯೇ ಅವರ ಕಣ್ಣ ಮುಂದೆಯೇ ತಂದೆ ತೀರಿಕೊಂಡಿದ್ದರು.

Latest Videos

undefined

ಮೃತದೇಹ ಮೇಲೆ ಶಸ್ತ್ರಚಿಕಿತ್ಸೆ: ಭಾರತದಲ್ಲೇ ಮೊದಲು, ಬಾಗಲಕೋಟೆ ವೈದ್ಯರ ಸಾಧನೆ..! .

ತಕ್ಷಣ ತಂದೆಯವರ ಶರೀರವನ್ನು ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಸಾವನ್ನು ಖಚಿತ ಪಡಿಸಿದ್ದರು. ಮೃತದೇಹ ಹಸ್ತಾಂತರಕ್ಕೆ ಇನ್ನೂ ಕೆಲವು ಸಮಯ ಇದ್ದಾಗ, ಹೃದ್ರೋಗಿಯೊಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯ ಇರುವುದಾಗಿ ಕರೆ ಬಂದಿತ್ತು. ಪದ್ಮನಾಭ್‌ ಅವರು ತಂದೆಯನ್ನು ಕಳೆದುಕೊಂಡ ನೋವಲ್ಲೂ, ರೋಗಿಯ ಶಸ್ತ್ರಚಿಕಿತ್ಸೆ ನೆರವೇರಿಸಿದರು, ಜೀವದಾನ ಮಾಡಿದ್ದರು.

ಇನ್ನು ಫೆ.27ರಂದು ಮಂಜುನಾಥ ಕಾಮತ್‌ ಅವರ ಅಂತ್ಯಕ್ರಿಯೆ ನೆರವೇರಿತು. ಅಪ್ಪನ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಪದ್ಮನಾಭ ಕಾಮತ್‌ ಅವರಿಗೆ ಸ್ನಾತಕೋತ್ತರ ವಿದ್ಯಾರ್ಥಿಯಿಂದ ಪದೇ ಪದೆ ಫೋನ್‌ ಕರೆ ಬರತೊಡಗಿತ್ತು. ಕರೆ ಸ್ವೀಕರಿಸಿದರೆ ಆಸ್ಪತ್ರೆಯ ಅಡುಗೆ ಸಿಬ್ಬಂದಿಯೊಬ್ಬರಿಗೆ ತೀವ್ರ ಹೃದಯಾಘಾತವಾಗಿರುವುದು ತಿಳಿಯಿತು. ಕೂಡಲೇ ಆಸ್ಪತ್ರೆಗೆ ಹೊರಟ ಕಾಮತರು, ಕೆಲವೇ ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದರು. ಅಪ್ಪನ ಸಾವಿನಲ್ಲೂ ಎರಡು ಜೀವ ಉಳಿಸಿ ಡಾ. ಪದ್ಮನಾಭ ಕಾಮತ್‌ ಅವರು ಅಪರೂಪದ ಕರ್ತವ್ಯನಿಷ್ಠೆ ಮೆರೆದಿದ್ದಾರೆ.


ರೋಗಿಯ ಒಳಿತೇ ನನ್ನ ಆದ್ಯ ಕರ್ತವ್ಯವಾಗಿತ್ತು. ಹಾಗಾಗಿ ರೋಗಿಯನ್ನು ಉಳಿಸಲು ಆಸ್ಪತ್ರೆಗೆ ಹೊರಟಾಗ ಯಾವುದೇ ರೀತಿಯ ಅಸ್ಥೈರ್ಯ ನನಗಾಗಲಿಲ್ಲ. ಅಂತಿಮವಾಗಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ.

- ಡಾ. ಪದ್ಮನಾಭ ಕಾಮತ್‌, ಹೃದ್ರೋಗ ವೈದ್ಯ

click me!