9 ತಿಂಗಳು ಕಳೆದರೂ ಪತ್ತೆ ಆಗದ ‘ನವಜಾತ ಶಿಶು’: ಪೊಲೀಸರಿಗೆ ಹೈಕೋರ್ಟ್‌ ಚಾಟಿ

By Kannadaprabha NewsFirst Published Mar 1, 2021, 8:27 AM IST
Highlights

ಹೈಕೋರ್ಟ್‌ ಚಾಟಿ| ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಶಿಶು ಹೊತ್ತೊಯ್ದ ಮಹಿಳೆ| ಅಡಕತ್ತರಿಗೆ ಸಿಲುಕಿದ ಪೊಲೀಸರು| ಹೈಕೋರ್ಟ್‌ನ ಕಠಿಣ ಆದೇಶ ಹೊರಡಿಸಿದ್ದರೂ ಶಿಶು ಪತ್ತೆ ಹಚ್ಚದ ಪೊಲೀಸರು| 

ವೆಂಕಟೇಶ್‌ ಕಲಿಪಿ/ಎನ್‌.ಲಕ್ಷ್ಮಣ್‌

ಬೆಂಗಳೂರು(ಮಾ.01): ರಾಜಧಾನಿಯ ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ ಪ್ರಕರಣದಲ್ಲಿ ಪೊಲೀಸ್‌ ಇಲಾಖೆ ಅಡಕತ್ತರಿಗೆ ಸಿಲುಕಿದೆ!

ಒಂದು ಕಡೆ ಕಳೆದ ಒಂಬತ್ತು ತಿಂಗಳಲ್ಲಿ ಸತತ ಪರಿಶ್ರಮ ಹಾಕಿದರೂ ಶಿಶುವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಪ್ರಕರಣ ಸಂಬಂಧ ಹೈಕೋರ್ಟ್‌ ಹಲವಾರು ಬಾರಿ ಪೊಲೀಸರಿಗೆ ಚಾಟಿ ಬೀಸುತ್ತಿದೆ. ಈ ನಡುವೆ ಶಿಶು ಪತ್ತೆ ಮಾಡದ ಬಗ್ಗೆ ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ತಾಕೀತು ಮಾಡಿದೆ.

ಕಳೆದ ಮೇ 29ರಂದು ಬೆಳಗ್ಗೆ 6.20ಕ್ಕೆ ಹುಸ್ನಾ ಬಾನು ಎಂಬುವರು ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬೆಳಗ್ಗೆ 7.50ಕ್ಕೆ ಜನಿಸಿದ ಗಂಡು ಶಿಶು ಬೆಳಗ್ಗೆ 11ಕ್ಕೆ ಅಪಹರಣವಾಗಿತ್ತು. ಪ್ರಕರಣ ದಾಖಲಿಸಿಕೊಂಡು ಮೂರು ತಿಂಗಳು ಕಳೆದರೂ ಚಾಮರಾಜಪೇಟೆ ಠಾಣಾ ಪೊಲೀಸರು, ಶಿಶುವನ್ನು ಪತ್ತೆ ಮಾಡದಿದ್ದಾಗ ಹುಸ್ನಾ ಬಾನು ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಪೊಲೀಸರು ಪ್ರಕರಣದ ತನಿಖೆಯಲ್ಲಿ ವಿಳಂಬ ಮತ್ತು ಸಾಕಷ್ಟುಲೋಪ ಎಸಗಿದ್ದಾರೆ. ಹೀಗಾಗಿ, ಕರ್ತವ್ಯ ಲೋಪ ಎಸಗಿದ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು, ಮಗುವನ್ನು ಪತ್ತೆ ಹಚ್ಚಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ಎಂಟು ವಾರದಲ್ಲಿ ಸಲ್ಲಿಸುವಂತೆ 2020ರ ಅ.5ರಂದು ನಗರ ಪೊಲೀಸ್‌ ಆಯುಕ್ತರಿಗೆ ತಾಕೀತು ಮಾಡಿತ್ತು.

KSRTC ಮುಷ್ಕರ : ಶಿಶುವಿನೊಂದಿಗೆ ನಿಲ್ದಾಣದಲ್ಲಿ ಮೂರು ದಿನ ಕಾಲ ಕಳೆದ ಬಾಣಂತಿ

ಒಂದು ವರ್ಷ ಅಮಾನತು:

ಇತ್ತೀಚೆಗೆ ನಗರ ಪೊಲೀಸ್‌ ಆಯುಕ್ತರು ವರದಿ ಸಲ್ಲಿಸಿ, ಅಪಹರಣವಾದ ಶಿಶು ಪತ್ತೆಗೆ ಎಲ್ಲ ರೀತಿಯ ಕ್ರಮ ಜರುಗಿಸಲಾಗಿದೆ. ಕರ್ತವ್ಯಲೋಪ ಎಸಗಿದ್ದ ಚಾಮರಾಜಪೇಟೆ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ವಿಶ್ವನಾಥ ಬಿರಾದಾರ್‌ ಅವರನ್ನು ಒಂದು ವರ್ಷ ಸೇವೆಯಿಂದ ಅಮಾನತು ಪಡಿಸಿ, ಅವರ ಒಂದು ಬಡ್ತಿ ಮತ್ತು ವೇತನ ಹೆಚ್ಚಳ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದರು. ಆದರೆ, ಸಬ್‌ ಇನ್‌ಸ್ಪೆಕ್ಟರ್‌ಗೆ ನೀಡಿದ ಶಿಕ್ಷೆ ಪ್ರಮಾಣ ತುಂಬಾ ಕಡಿಮೆ ಎಂದು ಅಭಿಪ್ರಾಯಪಟ್ಟಹೈಕೋರ್ಟ್‌, ಶಿಶುವನ್ನು ಪತ್ತೆ ಹಚ್ಚದಕ್ಕೆ ಮಾ.3ರಂದು ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಡಿಜಿ-ಐಜಿಪಿಗೆ ನಿರ್ದೇಶಿಸಿದೆ.

ಎಡವಿದ ತನಿಖಾಧಿಕಾರಿ

ಶಿಶುವನ್ನು ಅಪಹರಿಸಿರುವುದು ಮಹಿಳೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಅಪಹರಣ ಮಾಡಿದ ದಿನದಂದು ಆರೋಪಿ ಮಹಿಳೆ ಆಟೋದಲ್ಲಿ ಮೂಡಲಪಾಳ್ಯದಿಂದ ಚಾಮರಾಜಪೇಟೆಯಲ್ಲಿರುವ ಬಿಬಿಎಂಪಿ ಆಸ್ಪತ್ರೆಗೆ ಬಂದು ಮುಖ್ಯದ್ವಾರದ ಮೂಲಕ ಆಸ್ಪತ್ರೆ ಪ್ರವೇಶಿಸಿದ್ದಾಳೆ. ವಾರ್ಡ್‌ನಲ್ಲಿದ್ದ ಶಿಶುವಿನ ತಾಯಿ ಬಳಿ ಮಾತನಾಡಿದ್ದಾಳೆ. ತಾಯಿ ನಿದ್ರಿಸುವ ವೇಳೆ ಶಿಶುವನ್ನು ಅಪಹರಿಸಿ ಹಿಂಬದಿ ಗೇಟಿನಿಂದ ಹೊರ ಬಂದು ಮತ್ತೊಂದು ಆಟೋ ಹತ್ತಿ ಪರಾರಿಯಾಗಿದ್ದಾಳೆ.

ಆರೋಪಿ ಬೇರೆ ಆಟೋ ಹತ್ತಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಅಸ್ಪಷ್ಟವಾಗಿದೆ. ಅಂದಿನ ತನಿಖಾಧಿಕಾರಿ ಆಟೋ ಹೋದ ಸ್ಥಳದ ಉದ್ದಕ್ಕೂ ಸಿಸಿಟಿವಿ ಪರಿಶೀಲನೆ ನಡೆಸಿದ್ದರೆ ಆಟೋ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಬಹುದಿತ್ತು. ಆದರೆ, ತನಿಖಾಧಿಕಾರಿ ಆ ಗೋಜಿಗೇ ಹೋಗಲಿಲ್ಲ. ನಾಲ್ಕೈದು ತಿಂಗಳ ಬಳಿಕ ಸಿಸಿಟಿವಿಯಲ್ಲಿನ ಹಳೆ ವಿಡಿಯೋ ಸಿಗುವುದಿಲ್ಲ. ಇದರಿಂದ ಆರೋಪಿ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

21 ಸಾವಿರ ಮೊಬೈಲ್‌ ಸಂಖ್ಯೆ ಪರಿಶೀಲನೆ!

ಪ್ರಸ್ತುತ ಪೊಲೀಸರು ಸುಮಾರು 21 ಸಾವಿರ ಸಾರ್ವಜನಿಕರ ಮೊಬೈಲ್‌ ಸಂಖ್ಯೆ ಸಂಗ್ರಹಿಸಿ, ಈ ಪೈಕಿ ಎರಡೂವರೆ ಸಾವಿರ ಸಂಖ್ಯೆ ಪರಿಶೀಲಿಸಿದ್ದಾರೆ. ಇದರಲ್ಲಿ ಶಂಕಿತರೆಂದು ಭಾವಿಸಿ 250 ಮಹಿಳೆಯರ ಫೋಟೋಗಳನ್ನು ಪಡೆದು ಮಾಹಿತಿ ಕಲೆ ಹಾಕಿದ್ದರೂ ಆರೋಪಿ ಪತ್ತೆಯಾಗಿಲ್ಲ. ಸಂಗ್ರಹಿಸಿದ ಮಾಹಿತಿ ಆಧರಿಸಿ ಆರೋಪಿಯ ರೇಖಾ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಹೈಕೋರ್ಟ್‌ನ ಕಠಿಣ ಆದೇಶ ಹೊರಡಿಸಿದ್ದರೂ ಪೊಲೀಸರು ಶಿಶುವನ್ನು ಪತ್ತೆ ಹಚ್ಚಿಲ್ಲ. ಮಗುವನ್ನು ಕಳೆದುಕೊಂಡ ತಾಯಿ ನಿತ್ಯ ವೇದನೆ ಅನುಭವಿಸುತ್ತಿದರಲ್ಲದೇ ಭಯದಲ್ಲಿಯೇ ಬದುಕು ಸವೆಸುತ್ತಿದ್ದಾರೆ ಎಂದು ಹುಸ್ನಾ ಬಾನು ಪರ ವಕೀಲ ಸಿರಾಜುದ್ದೀನ್‌ ಅಹ್ಮದ್‌ ತಿಳಿಸಿದ್ದಾರೆ.
 

click me!