* ಮಾಸಣಗಿ ಗ್ರಾಮದ ಬಳಿ ಗುಡ್ಡದಂಚಿನ ಹೊಲಗಳಲ್ಲಿ ಪ್ರತ್ಯಕ್ಷವಾದ ಚಿರತೆ
* ಅರಣ್ಯ ಪ್ರದೇಶ ಹಾಗೂ ರೈತರ ಹೊಲದಲ್ಲಿಯೇ ಬೀಡುಬಿಟ್ಟ ಎರಡ್ಮೂರು ಚಿರತೆಗಳು
* ಬ್ಯಾಡಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಚಿರತೆ ಹಾವಳಿ
ಬ್ಯಾಡಗಿ(ಆ.09): ತಾಲೂಕಿನ ಮಾಸಣಗಿ ಗ್ರಾಮದ ಬಳಿ ಗುಡ್ಡದಂಚಿನ ಹೊಲಗಳಲ್ಲಿ ಶನಿವಾರ ಸಂಜೆ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಬ್ಯಾಡಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ರೈತರು ಹಾಗೂ ಸಾರ್ವಜನಿಕರನ್ನು ಹೈರಾಣಾಗುವಂತೆ ಮಾಡಿದೆ.
ಚಿರತೆ ಮತ್ತೆ ಪ್ರತ್ಯಕ್ಷ:
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಚಿರತೆ ಹಾವಳಿಯಿಂದಾಗಿ ಗ್ರಾಮೀಣ ಭಾಗದಲ್ಲಿ ಮನೆಯಿಂದ ಹೊರ ಬರಲು ಸಹ ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ತಾಲೂಕಿನ ನೆಲ್ಲಿಕೊಪ್ಪ ಗ್ರಾಮದಲ್ಲಿ ಜಿಂಕೆ ಹಾಗೂ ಚಿನ್ನಿಕಟ್ಟಿ ಗ್ರಾಮದಲ್ಲಿ ಮೇಕೆ ಹಾಗೂ ಶ್ವಾನವೊಂದನ್ನು ತಿಂದು ತೇಗಿರುವ ಚಿರತೆ ಮತ್ಯಾರ ಮೇಲೆ ದಾಳಿ ಮಾಡಲಿದೆಯೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.
ಉಡುಪಿ; ವರ್ಷದಿಂದ ಕಾಟ ಕೊಡ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ಎರಡು ಚಿರತೆ ಸೆರೆ:
ತಾಲೂಕಿನಲ್ಲಿ ಅರಳಿಕಟ್ಟಿ ಹಾಗೂ ಚಿನ್ನಿಕಟ್ಟಿ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನಿಟ್ಟು ಈಗಾಗಲೇ 2 ಚಿರತೆಗಳನ್ನು ಸೆರೆ ಹಿಡಿದಿದ್ದಾರೆ. ಆದರೆ ಇಷ್ಟಾದರೂ ಇನ್ನೂ ಎರಡ್ಮೂರು ಚಿರತೆಗಳು ಸುತ್ತಮುತ್ತಲ ಅರಣ್ಯ ಪ್ರದೇಶ ಹಾಗೂ ರೈತರ ಹೊಲದಲ್ಲಿಯೇ ಬೀಡುಬಿಟ್ಟಿವೆ. ಅವುಗಳಲ್ಲಿ ಒಂದು ಚಿರತೆ ಇದೀಗ ಮಾಸಣಗಿ ಗ್ರಾಮದಲ್ಲಿ ಬಳಿ ಕಾಣಿಸಿಕೊಂಡಿದ್ದು ರೈತರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.
ಗೋವಿನ ಜೋಳ ಇನ್ನಿತರ ಬೆಳೆಗಳು ಹುಲುಸಾಗಿ ಬೆಳೆದಿದ್ದು, ಅವುಗಳಿಗೆ ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಅತ್ಯಗತ್ಯ. ಆದರೆ ಚಿರತೆ ಹಾವಳಿಯಿಂದಾಗಿ ರೈತರು ಹೊಲಗಳಿಗೆ ತೆರಳಲು ಹಿಂಜರಿಯುತ್ತಿದ್ದಾರೆ. ಗ್ರಾಮಸ್ಥರ ನಿದ್ದೆಗೆಡಿಸಿರುವ ಚಿರತೆಯನ್ನು ಅರಣ್ಯ ಇಲಾಖೆ ಕೂಡಲೇ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲಿ ಎಂದು ಮಾಸಣಗಿ ರೈತ ಭರಮಗೌಡ ಪಾಟೀಲ ತಿಳಿಸಿದ್ದಾರೆ.