ಬಾಗಲಕೋಟೆ ಜಿಲ್ಲೆಯ ಹೊಸ ಮುರನಾಳ ಮತ್ತು ಕೆಲೂರು ಗ್ರಾಮಗಳ ಕೆರೆಗಳಲ್ಲಿ ಮೊಸಳೆ ಕಂಡು ಅಚ್ಚರಿಗೊಂಡ ಜನ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಅ.21): ಸಾಮಾನ್ಯವಾಗಿ ಮಳೆ ಬಂದ್ರೆ ನದಿ ತೀರದ ಗ್ರಾಮಸ್ಥರಿಗೆ ಮೊಸಳೆಗಳು ಬಂದು ಆತಂಕ ಸೃಷ್ಟಿಸೋದು ಕಾಮನ್. ಆದ್ರೆ ಈ ಒಂದು ಜಿಲ್ಲೆಯಲ್ಲಿ ಇದೀಗ ಊರ ಪಕ್ಕ ನದಿ ಇರಲಿ, ಇರದೇ ಇರಲಿ, ಊರಿನ ಕೆರೆಗಳಲ್ಲಿ ಏಕಾಏಕಿ ಮೊಸಳೆಗಳು ಪತ್ತೆಯಾಗುತ್ತಿದ್ದು, ಇದೀಗ ಜನರ ಇನ್ನಿಲ್ಲದ ಆತಂಕಕ್ಕೆ ಕಾರಣವಾಗಿದೆ. ಹಾಗಾದ್ರೆ ಅದೆಲ್ಲಿ? ಏನಾಗ್ತಿದೆ ಅಂತೀರಾ. ಈ ಕುರಿತ ವರದಿ ಇಲ್ಲಿದೆ.
undefined
ಒಂದೆಡೆ ಊರುಗಳ ಕೆರೆಯಲ್ಲಿ ಏಕಾಏಕಿ ಕಂಡು ಬರುತ್ತಿರೋ ಮೊಸಳೆಗಳು, ಮತ್ತೊಂದೆಡೆ ಮೊಸಳೆಗಳನ್ನ ಕಂಡು ಆತಂಕಗೊಳ್ಳುವ ಜನರು, ಇವುಗಳ ಮಧ್ಯೆ ಮೊಸಳೆ ಪಾರ್ಕ್ ನಿರ್ಮಿಸಿ ಮೊಸಳೆಗಳನ್ನ ಸಂರಕ್ಷಣೆ ಮಾಡುವಂತೆ ಮನವಿ ಮಾಡುತ್ತಿರುವ ನಾಗರಿಕರು. ಅಂದಹಾಗೆ ಇಂತಹವೊಂದು ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ. ಹೌದು. ಸಾಮಾನ್ಯವಾಗಿ ನದಿ ದಡದ ಗ್ರಾಮಗಳಲ್ಲಿ ಕಂಡು ಬರುತ್ತಿದ್ದು ಮೊಸಳೆಗಳು ಇದೀಗ ನದಿ ದಡ ಬಿಟ್ಟು ದೂರ ಇರುವ ಗ್ರಾಮಗಳಲ್ಲೂ ಕಂಡು ಬರುತ್ತಿವೆ. ಇತ್ತೀಚಿಗೆ ನಿರಂತರವಾಗಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ಬರುವ ನೀರು ಕೆರೆಗಳಿಗೆ ಬಂದು ಸೇರುತ್ತಿರೋದ್ರಿಂದ ಅದರೊಟ್ಟಿಗೆ ಇದೀಗ ಮೊಸಳೆಗಳು ಕಂಡು ಬರುತ್ತಿವೆ.
ಕಾಂತಾರ ಚಿತ್ರ ವಿವಾದ: ನಟ ಚೇತನ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ
ಹೊಸ ಮುರನಾಳ & ಆಲೂರು ಗ್ರಾಮದ ಕೆರೆಗಳಲ್ಲಿ ಮೊಸಳೆ ಪ್ರತ್ಯಕ್ಷ
ಇನ್ನು ನಿರಂತರ ಮಳೆಯಿಂದ ಎಲ್ಲೆಂದರಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಇವುಗಳ ಮಧ್ಯೆ ಜಿಲ್ಲೆಯ ಹೊಸ ಮುರನಾಳ ಮತ್ತು ಕೆಲೂರು ಗ್ರಾಮಗಳಲ್ಲಿ ಏಕಾಏಕಿ ಕೆರೆಗಳಲ್ಲಿ ಮೊಸಳೆ ಪತ್ತೆಯಾಗಿವೆ. ಇದ್ರಿಂದ ಗ್ರಾಮಸ್ಥರು ಆತಂಕವನ್ನ ಎದುರಿಸುವಂತಾಗಿದೆ. ಮೊಸಳೆಗಳು ಪತ್ತೆಯಾಗಿದ್ದೇ ತಡ ಜನರು ಅದನ್ನು ನೋಡಲು ಬರುತ್ತಿದ್ದು, ಇದ್ರಿಂದ ಸ್ಥಳದಲ್ಲೇ ಬೀಡುಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟು, ಮೊಸಳೆಗಳನ್ನ ಸುರಕ್ಷಿತ ತಾಣಕ್ಕೆ ಕೊಂಡೊಯ್ಯುವವರೆಗೆ ಮುಂಜಾಗೃತೆ ವಹಿಸುತ್ತಿದ್ದಾರೆ. ಏಕಾಏಕಿ ಮೊಸಳೆ ಪತ್ತೆಯಾಗಿರೋದು ಇದೀಗ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ ಅಂತಾರೆ ಸ್ಥಳೀಯರಾದ ಶ್ರೀನಿವಾಸ ಬಳ್ಳಾರಿ.
ಕೆರೆಗಳಲ್ಲಿ ಮೊಸಳೆ ಹಿನ್ನೆಲೆ ಜನ ಜಾನುವಾರುಗಳಿಗೆ ಬ್ರೇಕ್
ಇನ್ನು ಮೊಸಳೆ ಕೆರೆಯಲ್ಲಿ ಪತ್ತೆಯಾಗಿರೋದ್ರಿಂದ ಇತ್ತ ಜನ ಜಾನುವಾರುಗಳು ಕೆರೆಗೆ ಇಳಿಯಲಾರಂದತಹ ಪರಿಸ್ಥಿತಿ ಉಂಟಾಗಿದೆ. ಗ್ರಾಮಗಳಲ್ಲಿ ರೈತರು ತಮ್ಮ ಜಾನುವಾರುಗಳಿಗೆ ಕೆರೆಗಳಲ್ಲಿ ಮೈ ತೊಳೆಯೋದಕ್ಕೆ, ನೀರು ಕುಡಿಸೋದಕ್ಕೆ ಹೋಗುವುದಕ್ಕೆ ತೀವ್ರ ಆತಂಕಪಡುವಂತಾಗಿದೆ. ಈ ಮಧ್ಯೆ ನದಿ ತೀರದ ಗ್ರಾಮಗಳಲ್ಲಿ ಆಗಾಗ ಮೊಸಳೆಗಳು ಕಂಡು ಬರುತ್ತಿದ್ದು, ಇತ್ತ ಜನರ ಆತಂಕ ಹೆಚ್ಚುತ್ತಲಿದೆ.
ಬಡ ಮಕ್ಕಳ ಆಶಾಕಿರಣವಾಗಿರುವ ಶಿಕ್ಷಕ ಶಂಕರ್... ಊರೂರು ಅಲೆದು ಮಕ್ಕಳಿಗೆ ಪಾಠ...
ಮೊಸಳೆ ಪಾರ್ಕ್ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಾಯ
ಇತ್ತ ಜಿಲ್ಲೆಯ ಕೆಲವು ಗ್ರಾಮಗಳ ಕೆರೆಗಳಲ್ಲಿ ಏಕಾಏಕಿ ಮೊಸಳೆ ಪತ್ತೆಯಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದರೆ, ಅತ್ತ ಮೊಸಳೆಗಳನ್ನೂ ಸಹ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸರ್ಕಾರ ಆಲಮಟ್ಟಿ ಹಿನ್ನೀರಿನ ವ್ಯಾಪ್ತಿಯಲ್ಲಿ ಮೊಸಳೆ ಪಾರ್ಕ್ ಸ್ಥಾಪನೆ ಮಾಡಿದರೆ ಅತ್ಯಂತ ಅನುಕೂಲವಾಗಲಿದೆ. ಇದರಿಂದ ಮೊಸಳೆಗಳನ್ನ ರಕ್ಷಣೆ ಮಾಡಲು ಸಾಧ್ಯವಾಗಲಿದೆ. ಈ ಸಂಭಂದ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಜು ಮನ್ನಿಕೇರಿ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಗ್ರಾಮಗಳ ಕೆರೆಗಳಲ್ಲಿ ಏಕಾಏಕಿ ಮೊಸಳೆ ಪ್ರತ್ಯಕ್ಷವಾಗುತ್ತಿರೋದು ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಆದಷ್ಟು ಶೀಘ್ರ ಸರ್ಕಾರ ಮೊಸಳೆ ಪಾರ್ಕ್ ಸ್ಥಾಪನೆ ಮಾಡಿ ಅತ್ತ ಮೊಸಳೆಗಳನ್ನ ರಕ್ಷಿಸಿ, ಇತ್ತ ಜನರ ಆತಂಕವನ್ನು ನಿವಾರಿಸುವತ್ತ ಕ್ರಮಕೈಗೊಳ್ಳಲಿ ಎನ್ನೋದೆ ಎಲ್ಲರ ಆಶಯ.