ಚಂದಪ್ಪ ಹರಿಜನ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದ ಪೇಜಾವರ ಶ್ರೀಗಳು| ಹರಿಜನ ಚಂದಪ್ಪ ಅವರ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಪೇಜಾವರ ಶ್ರೀಗಳು| ರಾಜ್ಯವ್ಯಾಪಿ ಚರ್ಚೆಗೂ ಕಾರಣವಾಗಿತ್ತು|ಶ್ರೀಗಳು ತಮ್ಮ ದಿಟ್ಟನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು|
ಕೊಪ್ಪಳ[ಡಿ.30]: ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳ ಸ್ವಾಮೀಜಿಗಳಿಗೂ ಮತ್ತು ಕೊಪ್ಪಳಕ್ಕೂ ಅವಿನಾಭಾವ ನಂಟಿದೆ. ಪ್ರತಿ ವರ್ಷವೂ ಕೊಪ್ಪಳಕ್ಕೆ ಬರುತ್ತಿದ್ದ ಶ್ರೀಗಳು ಅನಾರೋಗ್ಯದ ಕಾರಣ ನಾಲ್ಕು ವರ್ಷಗಳಿಂದ ಬರುವುದು ಕಡೆಮೆಯಾಗಿತ್ತು.
1969ರಲ್ಲಿ ಅಸ್ಪೃಶ್ಯತೆ ದೊಡ್ಡ ಪ್ರಮಾಣದಲ್ಲಿಯೇ ಕೊಪ್ಪಳದಲ್ಲಿ ಆಚರಣೆಯಲ್ಲಿತ್ತು. ದಲಿತರು ಮತ್ತು ದಲಿತ ಕೇರಿಗಳು ಎಂದರೆ ಜನರು ದೂರವೇ ಇರುವ ಕಾಲಘಟ್ಟವದು. ಅಂಥ ಕಾಲದಲ್ಲಿಯೇ ಪೇಜಾವರ ಶ್ರೀಗಳು ನಗರದ ಚಂದಪ್ಪ ಹರಿಜನ ಎನ್ನುವರ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಸ್ವತಃ ತಾವೇ ನೆರವೇರಿಸಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸತ್ಯನಾರಾಯಣ ಪೂಜೆ ಎಂದರೆ ಕೇವಲ ಮೇಲ್ವರ್ಗದವರು ಮಾಡುವ ಆಚರಣೆ ಎನ್ನುವ ಕಾಲವದು. ಆದರೆ, ಅದ್ಯಾವುದಕ್ಕೂ ಮಣೆ ಹಾಕದೆ ಹರಿಜನ ಚಂದಪ್ಪ ಅವರ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸುವ ಮೂಲಕ ಪೇಜಾವರ ಶ್ರೀಗಳು ತೀವ್ರ ಟೀಕೆಗೆ ಗುರಿಯಾಗಿದ್ದರು. ಇದು ರಾಜ್ಯವ್ಯಾಪಿ ಚರ್ಚೆಗೂ ಕಾರಣವಾಗಿತ್ತು. ಆದರೆ, ಅವರು ತಮ್ಮ ದಿಟ್ಟನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.
ಇದಾದ ಮೇಲೆ ಅವರ ಮತ್ತು ಕೊಪ್ಪಳದ ನಂಟು ಮತ್ತಷ್ಟು ಗಟ್ಟಿಯಾಗುತ್ತಾ ಹೋಯಿತು. ಅದರಲ್ಲೂ ಕೊಪ್ಪಳದ ರಾಘವೇಂದ್ರಮಠ ಅವರ ಅಚ್ಚು ಮೆಚ್ಚಿನ ಮಠವಾಗಿದೆ. ಮಂತ್ರಾಲಯಕ್ಕೆ ಹೋಗುವ ವೇಳೆ ಇಲ್ಲಿಗೆ ತಪ್ಪದೇ ಆಗಮಿಸುತ್ತಿದ್ದ ಶ್ರೀಗಳು ನಂತರ ಪ್ರತಿ ವರ್ಷವೂ ಕೊಪ್ಪಳಕ್ಕೆ ಆಗಮಿಸುವುದನ್ನು ಪರಿಪಾಠ ಮಾಡಿಕೊಂಡಿದ್ದರು.
ಕೊಪ್ಪಳದ ಕೃಷ್ಣಮಠದ ಉದ್ಘಾಟನೆಗೆ ಹಾಗೂ ಇದರ ಬಳಿ ಇರುವ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದೇ ಇವರು. ಇನ್ನು ಆನೆಗೊಂದಿಯಲ್ಲಿ ನವವೃಂದಾವನ ಸ್ಥಳಗಳಿಗೂ ಭೇಟಿ ನೀಡಿದ್ದರು. ಅಲ್ಲಿ ವಿವಾದವೆದ್ದು, ಪೂಜೆಗೊಸ್ಕರ ಗಲಾಟೆಯಾದ ವೇಳೆಯಲ್ಲಿ ಬಂದು ಪೂಜೆಯಲ್ಲಿ ಭಾಗವಹಿಸಿದ್ದರು.
ಜಾತ್ರಾಮಹೋತ್ಸವಕ್ಕೆ ಚಾಲನೆ:
ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ 2012ರಲ್ಲಿ ಪೇಜಾರವ ಶ್ರೀಗಳು ಚಾಲನೆ ನೀಡಿ, ಇದು ದಕ್ಷಿಣ ಭಾರತದ ಕುಂಭಮೇಳ ಎಂದು ಬಣ್ಣಿಸಿದ್ದರು.
ಗವಿಸಿದ್ಧೇಶ್ವರ ಶ್ರೀಗಳು ಸಮಾಜಮುಖಿಯಾಗಿದ್ದಾರೆ. ಅವರ ಕಾರ್ಯ ಮತ್ತು ಮಠದ ಕತುೃರ್ ಗದ್ದುಗೆಯ ಶಕ್ತಿ ಇಮ್ಮಡಿಸುತ್ತಿದೆ. ಈ ಕಾರಣಕ್ಕಾಗಿಯೇ ಹೀಗೆ ಲಕ್ಷ ಲಕ್ಷಗಟ್ಟಲೇ ಜನರು ಆಗಮಿಸುತ್ತಿದ್ದಾರೆ ಎಂದು ಮಾತನಾಡಿದ್ದರು. ಅವರ ಆಗಮನ ಕೊಪ್ಪಳ ಗವಿಮಠ ಜಾತ್ರೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲು ಸಾಕ್ಷಿಯಾಯಿತು.
ಕೊಪ್ಪಳದೊಂದಿಗೆ ಪೇಜಾವರ ಶ್ರೀಗಳ ನಂಟು ಬಹಳವೇ ಇದೆ. 1969ರಲ್ಲಿಯೇ ಅವರು ಕೊಪ್ಪಳದ ಚಂದಪ್ಪ ಹರಿಜನ ಅವರ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದರು. ಈ ಮೂಲಕ ಅಸ್ಪೃಶ್ಯತೆ ನಿವಾರಣೆಗೆ ಯತ್ನಿಸಿದ್ದರು ಎಂದು ಸುರೇಶ ಗಂಗೂರು ಅವರು ಹೇಳಿದ್ದಾರೆ.