Peenya Flyover ಸಂಚಾರಕ್ಕೆ ಸುರಕ್ಷಿತವಲ್ಲ: ಸಿಎಂ ಬೊಮ್ಮಾಯಿ

By Kannadaprabha News  |  First Published Feb 16, 2022, 4:39 AM IST

*   ಕಳಪೆ ಕಾಮಗಾರಿಯಿಂದ ಸಮಸ್ಯೆ
*   ಲೋಡ್‌ ಪರೀಕ್ಷೆ ವೇಳೆ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ಎಂಜಿನಿಯರ್‌ಗಳಿಂದ ವರದಿ
*   ದುರಸ್ತಿ ಕಾರ್ಯ ಪೂರ್ಣಗೊಂಡರೂ ಸಂಚಾರಕ್ಕೆ ಅವಕಾಶ ನೀಡಿಲ್ಲ
 


ಬೆಂಗಳೂರು(ಫೆ.16): ತುಮಕೂರು ರಸ್ತೆ ಮೇಲ್ಸೇತುವೆಯ(Flyover) ಎರಡು ಪಿಲ್ಲರ್‌ಗಳ ನಡುವಿನ ಕೇಬಲ್‌ ದುರಸ್ತಿಗೊಂಡಿದೆ. ಆದರೆ, ದುರಸ್ತಿ ಕಾಮಗಾರಿ ಮುಗಿದಿದ್ದರೂ ಲೋಡ್‌ ಪರೀಕ್ಷೆ ವೇಳೆ ವಾಹನ ಸಂಚಾರ ಸುರಕ್ಷಿತವಲ್ಲ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ವಾಹನಗಳಿಗೆ ಅವಕಾಶ ನೀಡಿಲ್ಲ. ಯಾವುದಾದರೂ ಅನಾಹುತ ಉಂಟಾದರೆ ಯಾರು ಹೊಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪ್ರಶ್ನಿಸಿದ್ದಾರೆ.

ಕಳಪೆ ಕಾಮಗಾರಿಯಿಂದಲೇ ಎರಡು ಪಿಲ್ಲರ್‌ ನಡುವಿನ ಭಾಗಕ್ಕೆ ಸಮಸ್ಯೆಯಾಗಿದೆ. ಅದನ್ನು ಹೊಸದಾಗಿಯೇ ಮಾಡಬೇಕು ಎಂದು ಎಂಜಿನಿಯರ್‌ಗಳು ಹೇಳುತ್ತಿದ್ದಾರೆ. ತಾತ್ಕಾಲಿಕವಾಗಿ ಲಘು ವಾಹನಗಳಿಗಾದರೂ ಅವಕಾಶ ನೀಡುವಂತೆ ಕೇಂದ್ರ ಹೆದ್ದಾರಿ ಖಾತೆ ಸಚಿವರಿಗೆ ಪತ್ರ ಬರೆದಿದ್ದೇನೆ. ಎರಡು ದಿನದೊಳಗೆ ಅಂತಿಮ ತೀರ್ಮಾನ ಬರಲಿದೆ ಎಂದು ಹೇಳಿದರು.

Tap to resize

Latest Videos

Peenya Flyover: ಕಾಮಗಾರಿ ಮುಗಿದಿದ್ದರೂ ಸಂಚಾರಕ್ಕಿಲ್ಲ ಅವಕಾಶ, ಸಾರ್ವಜನಿಕರ ಆಕ್ರೋಶ

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ದಾಸರಹಳ್ಳಿ ಶಾಸಕ ಮಂಜುನಾಥ್‌, ಕಳೆದ 56 ದಿನಗಳಿಂದ ಪೀಣ್ಯ ಮೇಲ್ಸೇತುವೆ ಸಂಪೂರ್ಣ ಸ್ಥಗಿತಗೊಂಡಿದೆ. ಸುಮಾರು 18 ಜಿಲ್ಲೆಗಳನ್ನು ಬೆಂಗಳೂರಿಗೆ(Bengaluru) ಸಂಪರ್ಕಿಸುವ ರಸ್ತೆಯಲ್ಲಿ ಸಮಸ್ಯೆ ಕಾಣಿಸಿಕೊಂಡು ಎರಡು ತಿಂಗಳಾದರೂ ದುರಸ್ತಿ ಮಾಡಿಲ್ಲ. ಕನಿಷ್ಠ ಲಘು ವಾಹನ, ತುರ್ತು ವಾಹನಗಳಿಗೂ ಅವಕಾಶ ನೀಡಿಲ್ಲ. ಗಂಟೆಗಟ್ಟಲೇ ಸಂಚಾರದಟ್ಟಣೆಯಿಂದ ಹಲವರು ಆ್ಯಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದಾರೆ. ಕೈಗಾರಿಕಾ ಪ್ರದೇಶಕ್ಕೆ ಬರುವ ಕಾರ್ಮಿಕರೂ ಪರದಾಡುವಂತಾಗಿದೆ ಎಂದು ಹೇಳಿದರು.

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ಅತಿ ಗಂಭೀರವಾದ ವಿಷಯ. ಸರ್ಕಾರವು(Government of Karnataka)  ಕೂಡಲೇ ಇದಕ್ಕೆ ಸ್ಪಂದಿಸಿ ಅಗತ್ಯ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.

ಕಳಪೆ ಕಾಮಗಾರಿಯಿಂದ ಸಮಸ್ಯೆ:

ಈ ವೇಳೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(National Highway Authority) ವ್ಯಾಪ್ತಿಗೆ ಬರುತ್ತದೆ. ಕಳಪೆ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಯಿಂದ ಲಕ್ಷಾಂತರ ಮಂದಿ ನರಳುತ್ತಿದ್ದಾರೆ. ರಿಪೇರಿ ಮುಗಿದ ಮೇಲೆ ಲೋಡ್‌ ಟೆಸ್ಟಿಂಗ್‌ ನಡೆಸಿದ್ದು, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು, ಐಐಎಸ್ಸಿ ಎಂಜಿನಿಯರ್‌ಗಳು ಪರೀಕ್ಷೆ ನಡೆಸಿದ್ದಾರೆ. 102-103 ಪಿಲ್ಲರ್‌ ನಡುವಿನ ಕೇಬಲ್‌ ಹೆಚ್ಚು ಗಾತ್ರದ ವಾಹನ ಸಂಚರಿಸಿದರೆ ಈಗಲೂ ಬಕಲ್‌ ಆಗುತ್ತಿದೆ. ಯಾವುದಾದರೂ ಅನಾಹುತ ಆದರೆ ಯಾರು ಹೊಣೆ ಎಂಬ ಕಾರಣಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸಚಿವರಿಗೆ ಮನವಿ:

ಆದರೆ, ಸ್ಥಳೀಯವಾಗಿ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಉತ್ತರ ಕರ್ನಾಟಕ(North Karnataka), ಉತ್ತರ ಭಾರತದ(North India) ಜನರನ್ನು ಬೆಂಗಳೂರಿಗೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೇಂದ್ರ ಹೆದ್ದಾರಿ ಸಚಿವರಿಗೆ ಪತ್ರ ಬರೆದು ಕನಿಷ್ಠ ಲಘು ವಾಹನಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ವಾರದಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಬುಧವಾರ ಅಥವಾ ಗುರುವಾರ ಈ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ ಎಂದರು.

ಇಂದು ಅಥವಾ ನಾಳೆ ಲಘು ವಾಹನಕ್ಕೆ ಮುಕ್ತ?

ಪೀಣ್ಯ ಮೇಲ್ಸೇತುವೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಬುಧವಾರ ಅಥವಾ ಗುರುವಾರ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Karnataka Budget 2022-23: ಬಜೆಟ್‌ ತಯಾರಿ ಆರಂಭ: ಇಲಾಖಾವಾರು ಪ್ರಸ್ತಾವನೆ, ಬೇಡಿಕೆ ಆಲಿಸಿದ ಸಿಎಂ

ಲೋಡ್‌ ಪರೀಕ್ಷೆ ವೇಳೆ ವಾಹನಗಳ ಸಂಚಾರಕ್ಕೆ ಪೀಣ್ಯ ಮೇಲ್ಸೇತುವೆ ಸುರಕ್ಷಿತವಲ್ಲ ಎಂದು ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಆದರೆ, 18 ಜಿಲ್ಲೆಗಳನ್ನು ರಾಜಧಾನಿಗೆ ಸಂಪರ್ಕಿಸುವ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದ(Peenya Industrial Area) ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಪಿಲ್ಲರ್‌ಗಳ ನಡುವಿನ ಜಾಯಿಂಟ್‌ ಲಿಂಕ್‌ನಲ್ಲಿ ಸಮಸ್ಯೆ ಉಂಟಾದ ಕಾರಣ ಸುಮಾರು 2 ತಿಂಗಳಿಂದ ಸಂಚಾರಕ್ಕೆ ಭಾರೀ ಸಮಸ್ಯೆ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಕನಿಷ್ಠ ಪಕ್ಷ ಲಘು ವಾಹನಗಳ ಸಂಚಾರಕ್ಕಾದರೂ ಅವಕಾಶ ನೀಡುವಂತೆ ಕೇಂದ್ರ ಹೆದ್ದಾರಿ ಸಚಿವರಿಗೆ ರಾಜ್ಯ ಸರ್ಕಾರ ಈಗಾಗಲೇ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಅಥವಾ ಗುರುವಾರದಿಂದ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ರಾ.ಹೆ. ಪ್ರಾಧಿಕಾರದ ಮೂಲಗಳು ತಿಳಿಸಿವೆ. ಇದಕ್ಕೆ ಪೂರಕ ಎಂಬಂತೆ ದೊಡ್ಡ ವಾಹನಗಳು ಫ್ಲೈಓವರ್‌ನಲ್ಲಿ ಸಂಚಾರಿಸದಂತೆ ಕಬ್ಬಿಣದ ಕಮಾನ್‌ಗಳನ್ನು ಅಳವಡಿಸಲಾಗಿದೆ.
 

click me!