
ಬೆಂಗಳೂರು(ಫೆ.07): ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಭಾನುವಾರ ವಿದ್ಯುತ್ ಕಡಿತ ಉಂಟಾಗಿ ರೋಗಿಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು. ಅದೃಷ್ಟವಶಾತ್ ವಿದ್ಯುತ್ ವ್ಯತ್ಯಯದಿಂದ ರೋಗಿಗಳಿಗೆ ಯಾವುದೇ ಅಪಾಯ ಉಂಟಾಗಿರುವುದು ವರದಿಯಾಗಿಲ್ಲ. ದೀರ್ಘಕಾಲ ವಿದ್ಯುತ್ ಕಡಿತ ಉಂಟಾಗಿದ್ದರಿಂದ ಬಾಣಂತಿ ತಾಯಿ ಮತ್ತು ಮಗುವನ್ನು ವಾಣಿವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ವರದಿಯಾಗಿದೆ.
ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸಾ ಸೇವೆಗಳನ್ನೂ ಹೊಂದಿರುವ ಅಟಲ್ ಬಿಹಾರಿ ವಾಜಪೇಯಿ ಸಂಶೋಧನಾ ಸಂಸ್ಥೆಯಲ್ಲಿ (ಬೌರಿಂಗ್ ಆಸ್ಪತ್ರೆ) ವಿದ್ಯುತ್ ಕಡಿತ ಉಂಟಾಗಿರುವುದು ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ ಹಳೆ ಕಟ್ಟಡ, ಟ್ರಾಮಾ ಕೇರ್‌ನಲ್ಲಿದ್ದ ಜನರೇಟರ್ ವ್ಯವಸ್ಥೆ ಹಾಗೂ ಟ್ರಾಮಾ ಕೇರ್ ಕಟ್ಟಡದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದ ಕಾರಣ ಹೆಚ್ಚು ಸಮಸ್ಯೆಯಾಗಿಲ್ಲ. ಇಲ್ಲದಿದ್ದರೆ ಆಕ್ಸಿಜನ್ ನೆಚ್ಚಿಕೊಂಡಿರುವವರಿಗೆ ಸಮಸ್ಯೆಯಾಗುತ್ತಿತ್ತು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Bengaluru: ಬೌರಿಂಗ್ ಆಸ್ಪತ್ರೆ ಅವ್ಯವಸ್ಥೆಗೆ ನ್ಯಾಯಮೂರ್ತಿ ವೀರಪ್ಪ ಕಿಡಿ
ಆಸ್ಪತ್ರೆ ಮುಂಭಾಗ ವಿದ್ಯುತ್ ತಂತಿ ಹಾಳಾಗಿತ್ತು. ಇದನ್ನು ಸರಿಪಡಿಸಲು ಬೌರಿಂಗ್ ಆಸ್ಪತ್ರೆ ಹಾಗೂ ಬೆಸ್ಕಾಂ ಸಿಬ್ಬಂದಿ ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿಲ್ಲ. ಹೀಗಾಗಿ 10 ರಿಂದ 12 ಗಂಟೆಗಳ ಕಾಲ ರೋಗಿಗಳು ಕತ್ತಲಲ್ಲೇ ಕಾಲ ಕಳೆಯುಂತಾಗಿತ್ತು ಎಂದು ತಿಳಿದುಬಂದಿದೆ.
ಬೆಸ್ಕಾಂ ಸಮಸ್ಯೆಯಲ್ಲ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಸ್ಕಾಂ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿಯೊಬ್ಬರು, ಬೆಸ್ಕಾಂ ಮಾರ್ಗದಲ್ಲಿ ಉಂಟಾಗಿರುವ ಸಮಸ್ಯೆಯಲ್ಲ. ಆಸ್ಪತ್ರೆಯ ಒಳಾಂಗಣದಲ್ಲಿ ಸಮಸ್ಯೆಯಾಗಿದ್ದು, ವಿಷಯ ತಿಳಿದ ಕೂಡಲೇ ಭಾನುವಾರ ಸಂಜೆಯೇ ಸಮಸ್ಯೆ ಸರಿಪಡಿಸಲಾಗಿದೆ. ಈಗ ವಿದ್ಯುತ್ ಸಮಸ್ಯೆಯಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.