ವಕೀಲರಿಗೆ ಬೆದರಿಕೆ ಸಹಿಸಲ್ಲ: ಆರೋಪಿಗೆ ಹೈಕೋರ್ಟ್‌ ಎಚ್ಚರಿಕೆ

By Kannadaprabha NewsFirst Published Feb 7, 2023, 5:30 AM IST
Highlights

ಮಧುಕರ್‌ ಅಂಗೂರ್‌ಗೆ ನೀಡಿರುವ ಜಾಮೀನು ರದ್ದುಪಡಿಸಲು ಕೋರಿ ಬೆಂಗಳೂರಿನ ಅಲಯನ್ಸ್‌ ವಿಶ್ವವಿದ್ಯಾಲಯ ಮತ್ತು ಅಲಯನ್ಸ್‌ ಬ್ಯುಸಿನೆಸ್‌ ಶಾಲೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ, ಇಂತಹ ಘಟನೆಯನ್ನು ಸಹಿಸುವುದಿಲ್ಲ ಎಂದು ಕಟುವಾಗಿ ನುಡಿದಿದೆ.

ಬೆಂಗಳೂರು(ಫೆ.07):  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾದ ಅಲಯನ್ಸ್‌ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್‌ ಅಂಗೂರ್‌ಗೆ ನೀಡಲಾಗಿರುವ ಜಾಮೀನು ರದ್ದುಪಡಿಸಲು ಕೋರಿದ ಅರ್ಜಿ ಸಂಬಂಧ ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲರಿಗೆ ಬೆದರಿಕೆ ಹಾಕಿರುವ ಘಟನೆ ಕುರಿತು ಹೈಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮಧುಕರ್‌ ಅಂಗೂರ್‌ಗೆ ನೀಡಿರುವ ಜಾಮೀನು ರದ್ದುಪಡಿಸಲು ಕೋರಿ ಬೆಂಗಳೂರಿನ ಅಲಯನ್ಸ್‌ ವಿಶ್ವವಿದ್ಯಾಲಯ ಮತ್ತು ಅಲಯನ್ಸ್‌ ಬ್ಯುಸಿನೆಸ್‌ ಶಾಲೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ, ಇಂತಹ ಘಟನೆಯನ್ನು ಸಹಿಸುವುದಿಲ್ಲ ಎಂದು ಕಟುವಾಗಿ ನುಡಿದಿದೆ.

ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ವಿವಾಹಿತ ಮಹಿಳೆಗೆ ಪೋಷಕರ ಜಾತಿಯೇ ಆಧಾರ ಹೊರತು ಗಂಡನದಲ್ಲ: ಹೈಕೋರ್ಟ್

ವಿಚಾರಣೆ ವೇಳೆ ವಿಚಾರಣೆಗೆ ಅಲಯನ್ಸ್‌ ವಿವಿ ಪರ ಹಾಜರಾಗಿದ್ದ ಹಿರಿಯ ವಕೀಲ ಶ್ಯಾಮಸುಂದರ್‌, ತಮ್ಮ ಮನೆಯ ಮುಂದೆ ಕೆಲವು ಸಮಾಜಘಾತುಕ ಶಕ್ತಿಗಳು ಕಾಣಿಸಿಕೊಂಡಿವೆ. ತಮಗೆ ಬೆದರಿಕೆಯಿದ್ದು, ತಮ್ಮ ಮಹಿಳಾ ಸಹೋದ್ಯೋಗಿಯ ಚಲನವಲನಗಳ ಮೇಲೆ ಮಧುಕರ್‌ ಅಂಗೂರ್‌ ಪರ ವ್ಯಕ್ತಿಗಳೂ ನಿಗಾ ಇಟ್ಟಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದನ್ನು ತೀವ್ರವಾಗಿ ಖಂಡಿಸಿದ ನ್ಯಾಯಪೀಠ, ಈ ಹೇಳಿಕೆಯ ಸತ್ಯಾಸತ್ಯತೆ ಅರಿಯಲು ಮಧುಕರ್‌ ಅಂಗೂರ್‌ ಅವರನ್ನು ನ್ಯಾಯಾಲಯಕ್ಕೆ ಕರೆಸಿ ವಿಚಾರಿಸಿತು. ಈ ವೇಳೆ ತಮ್ಮ ಸೂಚನೆಯಂತೆ ಘಟನೆ ನಡೆದಿಲ್ಲ. ತಮಗೂ ಘಟನೆಗೂ ಯಾವುದೇ ಸಂಬಂಧವಿಲ್ಲ. ಆದರೂ ಇದು ನಡೆಯಬಾರದಿತ್ತು ಎಂದು ತಿಳಿಸಿದ ಮಧುಕರ್‌, ತಿಳಿದೋ, ತಿಳಿಯದೆಯೋ ತಮ್ಮ ಬೆಂಬಲಿಗರು ಮೇಲೆ ಈ ಕೃತ್ಯದಲ್ಲಿ ಭಾಗಿಯಾಗಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ ಎಂದು ಹೇಳಿ ಆ ಕುರಿತು ಪ್ರಮಾಣ ಪತ್ರ ಸಹ ಸಲ್ಲಿಸಿದರು. ಅದನ್ನು ಒಪ್ಪಿದ ನ್ಯಾಯಪೀಠ, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲು ನ್ಯಾಯಾಲಯ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿ ಅರ್ಜಿ ವಿಚಾರಣೆಯನ್ನು ಮಾ.1ಕ್ಕೆ ಮುಂದೂಡಿದೆ.

ಮಧುಕರ್‌ ಜಾಮೀನು ರದ್ದತಿಗೆ ವಿವಿ ಅರ್ಜಿ

ಮಧುಕರ್‌ ಅಂಗೂರ್‌ ಅವರು ಬೆಂಗಳೂರಿನ ಅಲಯನ್ಸ್‌ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ವೇಳೆ, ತಾವು ಅಕ್ರಮವಾಗಿ ತೆರೆದ ಬ್ಯಾಂಕ್‌ ಖಾತೆಗೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ಟ್ಯೂಷನ್‌ ಶುಲ್ಕ ಪಾವತಿಸಿಕೊಂಡಿದ್ದರು. ಕುಲಪತಿ ಹುದ್ದೆಯಿಂದ ವಜಾ ಮಾಡಿದ್ದರೂ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸುತ್ತಿದ್ದರು. ಹೀಗಾಗಿ, ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ 2022ರ ಏಪ್ರಿಲ್‌ನಲ್ಲಿ ಮಧುಕರ್‌ ಅಂಗೂರ್‌ಗೆ ಹೈಕೋರ್ಟ್‌ ಜಾಮೀನು ನೀಡಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಅಲಯನ್ಸ್‌ ವಿಶ್ವವಿದ್ಯಾಲಯ ಅರ್ಜಿ ಸಲ್ಲಿಸಿದೆ.

click me!