ಖಾಸಗಿ ಆಸ್ಪತ್ರೆ ಬಿಲ್‌ ಪಾವತಿಸಲಾಗದೆ ವ್ಯಕ್ತಿಯ ಪರದಾಟ: ನೆರವಿಗೆ ಮೊರೆ

By Kannadaprabha NewsFirst Published Sep 30, 2020, 8:59 AM IST
Highlights

ಕೊರೋನಾ ಲಕ್ಷಣ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದ ಅಧಿಕಾರಿಗಳು, ಬಳಿಕ ನಿರ್ಲಕ್ಷ್ಯ ಆರೋಪ| ನಮ್ಮ ಮನೆಯಲ್ಲಿ 10 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ನನಗೆ ಏನು ಮಾಡಬೇಕು ಎಂಬುದು ದಿಕ್ಕು ತೋಚುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡ ರೋಗಿ| 

ಬೆಂಗಳೂರು(ಸೆ.30): ಕೊರೋನಾ ಲಕ್ಷಣದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದರೂ ಆಸ್ಪತ್ರೆ ಬಿಲ್‌ ಪಾವತಿಸಲು ಸಾಧ್ಯವಾಗದೇ ಪರದಾಡಿದ ಘಟನೆ ನಡೆದಿದೆ.

ದ್ಡೊಡಕನ್ನಮಂಗಲ ನಿವಾಸಿ ಶ್ರೀನಿವಾಸ ಎಂಬುವವರು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೆ.17ರಂದು ರಾರ‍ಯಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮಾಡಿಸಿದ್ದಾರೆ. ಈ ವೇಳೆ ನೆಗೆಟಿವ್‌ ಬಂದಿದೆ. ಆದರೂ ಜ್ವರ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾಗ ಅವರ ಸೂಚನೆ ಮೇರೆಗೆ ಅಪೋಲೋ ಆಸ್ಪತ್ರೆಯಲ್ಲಿ ಸೆ.20ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್‌ ಬಂದಿದೆ. ಹೀಗಾಗಿ ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರ ವೈದ್ಯರು ಡಿಸ್ಚಾರ್ಜ್‌ ಮಾಡಿದ್ದಾರೆ. ಆದರೆ, ಆಸ್ಪತ್ರೆಯವರು 22 ಸಾವಿರ ಬಿಲ್‌ ಪಾವತಿಸಿ ಮನೆಗೆ ಹೋಗಿ ಎಂದು ಹೇಳಿದ್ದಾರೆ. ಡಿಸ್ಚಾರ್ಜ್‌ ಆಗಿ 4 ದಿನ ಕಳೆದರೂ ಶ್ರೀನಿವಾಸ ಅವರು ಬಿಲ್‌ ಪಾವತಿಸಲಾಗದೆ ಆಸ್ಪತ್ರೆಯಲ್ಲೇ ಉಳಿಯುವಂತಾಗಿದೆ.

ಕರ್ನಾಟಕದಲ್ಲಿ ಮಂಗಳವಾರ ದಾಖಲೆ ಪ್ರಮಾಣದಲ್ಲಿ ಕೊರೋನಾ ಕೇಸ್ ಪತ್ತೆ

ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ:

ಈ ಘಟನೆ ಸಂಬಂಧ ಆಸ್ಪತೆಯಿಂದಲೇ ಒಂದು ವಿಡಿಯೋ ಮಾಡಿರುವ ಶ್ರೀನಿವಾಸ, ಬಿಬಿಎಂಪಿ ಅಧಿಕಾರಿಗಳು ಆಸ್ಪತ್ರೆಗೆ ಸೇರಿಸಿ, ಇದೀಗ ಸ್ಪಂದಿಸುತ್ತಿಲ್ಲ. ಹತ್ತಾರು ಬಾರಿ ಕರೆ ಮಾಡಿದರೂ ಉಡಾಫೆ ಉತ್ತರ ಕೊಡುತ್ತಿದ್ದಾರೆ. ನಮ್ಮ ಮನೆಯಲ್ಲಿ 10 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ನನಗೆ ಏನು ಮಾಡಬೇಕು ಎಂಬುದು ದಿಕ್ಕು ತೋಚುತ್ತಿಲ್ಲ. ಆಸ್ಪತ್ರೆ ಬಿಲ್‌ ಪಾವತಿಸಲು ಹಣವಿಲ್ಲ. ಸರ್ಕಾರ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲು ನಾನು ಸಿದ್ಧನಿದ್ದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಇದೀಗ ಕೈಬಿಟ್ಟಿದ್ದಾರೆ ಅಳಲು ತೋಡಿಸಿಕೊಂಡಿದ್ದಾರೆ.

‘ಸೋಂಕಿತರೊಂದಿಗೆ ಇದ್ದೇನೆ’

ಆಸ್ಪತ್ರೆಯಲ್ಲಿ ಬಿಲ್‌ ಪಾವತಿಸುವವರೆಗೂ ಮನೆಗೆ ಹೋಗುವಂತಿಲ್ಲ ಎನ್ನುತ್ತಾರೆ. ಹೀಗಾಗಿ ದಿಕ್ಕು ತೋಚದೆ ಕೊರೋನಾ ಪಾಸಿಟಿವ್‌ ರೋಗಿಗಳ ಜೊತೆಗೆ ಆಸ್ಪತ್ರೆಯಲ್ಲಿ ಇದ್ದೇನೆ. ಭಯದಲ್ಲಿ ದಿನ ದೂಡುತ್ತಿದ್ದೇನೆ. ನನಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರಬಾರದು. ಸರ್ಕಾರ ಈ ಬಗ್ಗೆ ಗಮನ ಕೊಡಬೇಕು. ನಾನು ಬಿಲ್‌ ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಆಸ್ಪತ್ರೆಯಲ್ಲೇ ಇದ್ದೇನೆ. ಸರ್ಕಾರ ಹಾಗೂ ಆರೋಗ್ಯ ಸಚಿವರು ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
 

click me!