ರಾಜ್ಯದ ಮುಖ್ಯಮಂತ್ರಿ ರೇಸ್‌ನಲ್ಲಿ ಸರೇಶ್ ಅಂಗಡಿ ಅವರ ಹೆಸರಿತ್ತು ಎಂದು ಮುಖಂಡರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ
ಬೆಳಗಾವಿ (ಸೆ.30): ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಸುರೇಶ ಅಂಗಡಿ ಹೆಸರು 4 ತಿಂಗಳಿಂದ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿತ್ತು ಎಂದು ದಿ.ಅಂಗಡಿ ಅವರ ಮಾವ ಲಿಂಗರಾಜ್ ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ.
‘ಬಿ.ಎಸ್.ಯಡಿಯೂರಪ್ಪ ಬಳಿಕ ಮುಂದಿನ ಮುಖ್ಯಮಂತ್ರಿ ಅಂಗಡಿಯವರನ್ನೇ ಮಾಡಬೇಕು ಎಂಬ ಚರ್ಚೆ ಬಲವಾಗಿ ಕೇಳಿ ಬರುತ್ತಿತ್ತು. ಈ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಗಳು, ಸಭೆಗಳೂ ನಡೆದಿವೆ. ಯಡಿಯೂರಪ್ಪ ನಂತರ ಲಿಂಗಾಯತ ಪ್ರಬಲ ನಾಯಕರಾಗಿದ್ದ ಅಂಗಡಿಯವರನ್ನು ಮುಖ್ಯಮಂತ್ರಿ ಮಾಡಿದರೆ ಒಳಿತು ಎಂಬ ಮಾತುಗಳೂ ಚರ್ಚೆಯಲ್ಲಿದ್ದವು. ಆದರೆ ವಿಧಿ ಕೈ ಹಿಡಿಯಲಿಲ್ಲ ಎಂದಿದ್ದಾರೆ.
ಮುಂದಿನ 3 ವರ್ಷ ಬಿಎಸ್‌ವೈ ಸಿಎಂ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಯೂ ಆಗಿಲ್ಲ, ಮುಖ್ಯಮಂತ್ರಿ ಬದಲಾವಣೆಯೂ ಆಗುವುದಿಲ್ಲ. ಮುಂದಿನ ಮೂರು ವರ್ಷ ಬಿ.ಎಸ್. ಯಡಿಯೂರಪ್ಪನವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಹೆಸರು ಮುಖ್ಯಮಂತ್ರಿ ಹುದ್ದೆಗೆ ಚಾಲ್ತಿಯಲ್ಲಿತ್ತು ಎಂಬ ಅವರ ಸೋದರ ಮಾವ ಲಿಂಗರಾಜ ಪಾಟೀಲ್ ಹೇಳಿಕೆಗೆ ಸಂಬಂಧಿಸಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಚರ್ಚಿಸಿಲ್ಲ.
ಸುರೇಶ್ ಅಂಗಡಿ ಕೊನೆ 5 ದಿನ, ಏಮ್ಸ್ ಸಿಬ್ಬಂದಿಗೆ ಕೇಂದ್ರ ಮಂತ್ರಿ ಎಂದೂ ತಿಳಿದಿರ್ಲಿಲ್ಲ! ...
ಈ ಬಗ್ಗೆ ಎಲ್ಲೂ ಮಾತುಕತೆಯೂ ನಡೆದಿಲ್ಲ. ಹೀಗಿರುವಾಗ ಈ ಬಗ್ಗೆ ಅನಗತ್ಯ ಗೊಂದಲ ಹುಟ್ಟಿಸುವ ಅಗತ್ಯವಿಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.
ಸುರೇಶ್ ಅಂಗಡಿ ನನಗೆ ಬಹಳ ಆತ್ಮೀಯರಾಗಿದ್ದವರು. ಅವರು ಎಂದೂ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿ ನನ್ನ ಜತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿಗಳಿಗೆ ವಿವೇಚನೆಗೆ ಬಿಟ್ಟವಿಚಾರ ಎಂದು ಕಟೀಲ್ ಹೇಳಿದರು.