ಹಾಸಿಗೆ ಹಿಡಿದ ಬಾಲಕನಿಗೆ ನಟ ಪುನೀತ್ ರಾಜಕುಮಾರ್ ನೋಡುವಾಸೆ| ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕ ಆದರ್ಶ| ಆದರ್ಶನಿಗೆ ಪುನೀತ್ ರಾಜಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ| ಅವರ ಸಿನಿಮಾಗಳನ್ನು ಟಿವಿಯಲ್ಲಿ ತಪ್ಪದೇ ನೋಡುತ್ತಾನೆ|
ಹೊಸಪೇಟೆ(ಜ.30): ದೀರ್ಘ ಕಾಲದ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ನಗರದ ಬಾಲಕ ಕನ್ನಡ ಚಲನಚಿತ್ರ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೋಡುವ ಮತ್ತು ಅವರೊಂದಿಗೆ ಮಾತನಾಡುವ ಆಸೆ ವ್ಯಕ್ತಪಡಿಸಿದ್ದಾನೆ.
ನಗರದ ತಳವಾರಕೇರಿ ನಿವಾಸಿ ಆಟೋ ಚಾಲಕ ಜಿ. ಹನುಮಂತಪ್ಪ ಎಂಬುವವರ ಪುತ್ರ ಆದರ್ಶ (16) ಪುನೀತ್ ಅಭಿಮಾನಿ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸುಮಾರು 16 ವರ್ಷಗಳಿಂದ ಪಾಲಕರು ಆದರ್ಶನನ್ನು ಪೋಷಿಸುತ್ತಿದ್ದಾರೆ. ಇಲ್ಲಿವರೆಗೂ ಕಾಯಿಲೆ ಬಗ್ಗೆ ವೈದ್ಯರು ಯಾವುದೇ ಖಚಿತತೆ ವ್ಯಕ್ತಪಡಿಸಿಲ್ಲ. ಕುಳಿತುಕೊಂಡು ಊಟ ಮಾಡಲು ಆಗುವುದಿಲ್ಲ. ಸದಾ ಮಲಗಿಕೊಂಡ ರೀತಿಯಲ್ಲಿ ಬಾಲಕ ಇರುತ್ತಾನೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಆದರ್ಶನಿಗೆ ದೇಹದ ಮಾಂಸ-ಖಂಡ ಬೆಳವಣಿಗೆ ಆಗಿಲ್ಲ. ಕುಳಿತ ಜಾಗದಲ್ಲಿ ಕುಳಿತಿರುತ್ತಾನೆ. ಅಲ್ಲಿಯೇ ಎಲ್ಲವನ್ನೂ ನಿರ್ವಹಿಸಬೇಕು. ಈ ಬಾಲಕನಿಗೆ ಬೆಂಗಳೂರು ಕೆಲ ಆಸ್ಪತ್ರೆ, ದಾವಣಗೇರಿಯ ಬಾಪೂಜಿ ಆಸ್ಪತ್ರೆ, ತಿರುಪತಿ, ಬರೋಡ ಆಸ್ಪತ್ರೆ ಸೇರಿದಂತೆ ಹಲವು ಕಡೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ.
ಮೂವರು ಮಕ್ಕಳಲ್ಲಿ ಆದರ್ಶನೇ ಹಿರಿಯ ಮಗ. ಇನ್ನು ಆದರ್ಶನಿಗೆ ಒಬ್ಬ ತಂಗಿ ಮತ್ತು ತಮ್ಮ ಇದ್ದಾರೆ.
ಆದರ್ಶನಿಗೆ ಪುನೀತ್ ರಾಜಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ. ಅವರ ಸಿನಿಮಾಗಳನ್ನು ಟಿವಿಯಲ್ಲಿ ತಪ್ಪದೇ ನೋಡುತ್ತಾನೆ. ಅಷ್ಟೊಂದು ಪ್ರೀತಿ ಪುನೀತ್ ರಾಜಕುಮಾರ್ ಅವರ ಮೇಲೆ. ಜೀವನದಲ್ಲಿ ಒಮ್ಮೆಯಾದರೂ ಪುನೀತ್ ರಾಜಕುಮಾರ್ ಅವರನ್ನು ಹತ್ತಿರದಿಂದ ನೋಡಿ ಮಾತನಾಡುವ ಆಸೆಯಂತೆ. ಈ ವಿಷಯವನ್ನು ತಕ್ಷಣವೇ ಪುನೀತ್ ರಾಜಕುಮಾರ್‌ಗೆ ತಿಳಿಸುತ್ತೇವೆ. ಖಂಡಿತವಾಗಿಯೂ ಹೊಸಪೇಟೆಗೆ ಪುನೀತ್ ರಾಜಕುಮಾರ್ ಬಂದು ಬಾಲಕನನ್ನು ನೋಡಿಕೊಂಡು ಹೋಗುತ್ತಾರೆ ಎಂಬ ಭರವಸೆಯ ಮಾತುಗಳನ್ನು ಪುನೀತ್ ರಾಜಕುಮಾರ್ ಅಭಿಮಾನಿಗಳು ಆ ಬಾಲಕನಿಗೆ ಹೇಳುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಬಾಲಕನ ತಂದೆ ಜಿ. ಹನುಮಂತ ಅವರು, ಹೊಸಪೇಟೆಯಲ್ಲಿ ಇತ್ತೀಚಿಗೆ ಟಗರು ಸಿನಿಮಾ ಚಿತ್ರಕರಣ ಸಂದರ್ಭದಲ್ಲಿ ಶಿವರಾಜಕುಮಾರ್ ಅವರನ್ನು ಮನೆಗೆ ಕರೆದುಕೊಂಡು ಬಂದು ತಮ್ಮ ಮಗ ಆದರ್ಶನ ಆಸೆಯನ್ನು ತಿಳಿಸಬೇಕು ಎಂದು ಅಂದುಕೊಂಡಿದ್ದೆ. ಆದರೆ, ಚಿತ್ರೀಕರಣದ ಸಂದರ್ಭದಲ್ಲಿ ಬಾರೀ ಗಲಾಟೆ ಇರುವುದರಿಂದ ಶಿವರಾಜಕುಮಾರ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಸ್ಥಳೀಯ ಶಾಸಕ ಆನಂದ್ ಸಿಂಗ್ ಅವರು ಪುನೀತ್ ರಾಜಕುಮಾರ್ನನ್ನು ಭೇಟಿ ಮಾಡಿಸಲು ಸಹಾಯ ಮಾಡುವುದಾಗಿ ಬರವಸೆ ನೀಡಿದ್ದಾರೆ. ಅದು ಯಾವಾಗ ಆಗುತ್ತೋ ನೋಡಣ ಎಂದು ತಿಳಿಸಿದ್ದಾರೆ.