ಮಳೆ ನೀರಲ್ಲಿ ಬಸ್ ಸಿಲುಕಿದ್ದರಿಒಂದ ಪರಡಾಡಿದ ಪ್ರಯಾಣಿಕರು| ಅವೈಜ್ಞಾನಿಕ ರೈಲ್ವೆ ಸೇತುವೆ ಕಾಮಗಾರಿ ವಿರುದ್ಧ ಆಕ್ರೋಶ| ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್| ಕೂಡಗಿ ಬಳಿಯ ಎನ್‌ಟಿಪಿಸಿ ಕಲ್ಲಿದ್ದಲು ಸಾಗಾಣಿಕೆಯ ರೈಲ್ವೆ ಸೇತುವೆ ಕೆಳಗಿನ ಮಳೆ ನೀರಿನಲ್ಲಿ ಸಿಲುಕಿದ ಬಸ್| ಸುಮಾರು ನಾಲ್ಕು ಅಡಿ ನೀರು ಸಂಗ್ರಹಗೊಂಡಿದ್ದೇ ಬಸ್ ಸಿಲುಕಿಕೊಳ್ಳಲು ಕಾರಣ|
ಕೊಲ್ಹಾರ(ಸೆ.26) ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್‌ವೊಂದು ಕೂಡಗಿ ಬಳಿಯ ಎನ್‌ಟಿಪಿಸಿ ಕಲ್ಲಿದ್ದಲು ಸಾಗಾಣಿಕೆಯ ರೈಲ್ವೆ ಸೇತುವೆ ಕೆಳಗಿನ ಮಳೆ ನೀರಿನಲ್ಲಿ ಮಂಗಳವಾರ ರಾತ್ರಿ ಸಿಲುಕಿದ್ದರಿಂದಾಗಿ ಪ್ರಯಾಣಿಕರು ಮಧ್ಯರಾತ್ರಿವರೆಗೂ ಪರದಾಡಿದ ಘಟನೆ ಜರುಗಿದೆ.
ಕೂಡಗಿಯಲ್ಲಿ ಮಂಗಳವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಹೊಸದಾಗಿ ನಿರ್ಮಿಸಿದ ರೈಲ್ವೆ ಸೇತುವೆ ಕೆಳಗಿನ ರಸ್ತೆಯಲ್ಲಿ ಸುಮಾರು ನಾಲ್ಕು ಅಡಿ ನೀರು ಸಂಗ್ರಹಗೊಂಡಿದ್ದೇ ಬಸ್ ಸಿಲುಕಿಕೊಳ್ಳಲು ಕಾರಣವಾಗಿದೆ.
undefined
ಇದೇ ಮಾರ್ಗವಾಗಿ ಎಲ್ಲ ವಾಹನಗಳು ಸಂಚರಿಸುತ್ತವೆ. ಮಂಗಳವಾರ ರಾತ್ರಿ ವೇಳೆ ವಿಜಯಪುರದಿಂದ ಕೂಡಗಿ ಗ್ರಾಮಕ್ಕೆ ಆಗಮಿಸಿದ ಬಸ್ ಬಳಿಕ ಮಸೂತಿಗೆ ಹೋಗಿ ವಾಸ್ತವ್ಯ ಮಾಡಬೇಕಿತ್ತು. ಮಾರ್ಗಮಧ್ಯೆ ಇರುವ ರೈಲ್ವೆ ಸೇತುವೆ ಮಾರ್ಗವಾಗಿ ಮಸೂತಿ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಸೇತುವೆ ಕೆಳಗೆ ನೀರಿನಲ್ಲಿ ಬಸ್ ಸಿಲುಕಿದ್ದರಿಂದಾಗಿ ಮಸೂತಿ ಗ್ರಾಮಕ್ಕೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಪಡಬೇಕಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಸ್ ಚಾಲಕ, ನಿರ್ವಾಹಕರು ದೂರವಾಣಿ ಮೂಲಕ ವಿಜಯಪುರ ಡಿಪೋ ಮೇಲಧಿಕಾರಿಗಳ ಗಮನ ತರಲು ಪ್ರಯತ್ನಿಸಿದರಾದರೂ ಸಂಪರ್ಕ ಸಿಗದ ಕಾರಣ ಕೊನೆಯಲ್ಲಿ ಕೂಡಗಿ ಗ್ರಾಮಸ್ಥರ ಸಹಕಾರದಿಂದಾಗಿ ಮಸೂತಿ ಗ್ರಾಮಸ್ಥರು ಖಾಸಗಿ ವಾಹನದಲ್ಲಿ ತಮ್ಮೂರಿಗೆ ತೆರಳಿದ್ದಾರೆ. ನಂತರ ಬಸ್ ಹೊರತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬುಧವಾರ ಬೆಳಗ್ಗೆ ಬಸ್ ಹೊರತೆಗೆಯಲಾಗಿದೆ.
ಮಳೆ ಬಂದರೆ ಸಾಕು ಈ ಸೇತುವೆ ಕೆಳಗೆ ನೀರು ನಿಲ್ಲುತ್ತದೆ. ಅವೈಜ್ಞಾನಿಕವಾಗಿ ಗುತ್ತಿಗೆದಾರರು ಈ ಸೇತುವೆ ನಿರ್ಮಾಣ ಮಾಡಿದ್ದರಿಂದಾಗಿ ಇಂಥ ತೊಂದರೆ ಅನುಭವಿಸುವಂತಾಗಿದೆ. ಈ ಮಾರ್ಗವಾಗಿ ಮಳೆಗಾಲದಲ್ಲಿ ಸಂಚರಿಸುವುದು ತೊಂದರೆಯಾಗುತ್ತಿದೆ ಎಂದು ತೊಂದರೆಗೊಳಗಾದ ವಾಹನ ಸವಾರರು, ಪ್ರಯಾಣಿಕರು ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.