
ಶಿವಮೊಗ್ಗ: ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ ಸಂಭವಿಸಿದ್ದು, ಇದೇ ಸಂದರ್ದಲ್ಲಿ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ ನೇರವಾಗಿ ಬಸ್‌ಅನ್ನು ಆಸ್ಪತ್ರೆ ಬಳಿ ಕರೆತಂದಿದ್ದಾರೆ. ಸೂಕ್ತ ಸಮಯದಲ್ಲಿ ಪ್ರಯಾಣಿಕನಿಗೆ ಸಿಕ್ಕ ಪರಿಣಾಮ ಆತ ಜೀವ ಉಳಿದಿರುವ ಘಟನೆ ಶಿವಮೊಗ್ಗದ ಚಿನ್ನಮನೆ ಸಮೀಪ ನಡೆದಿದೆ. ರಿಪ್ಪನ್ ಪೇಟೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಖಾಸಗಿ ಗುರುಶಕ್ತಿ ಬಸ್ ನಲ್ಲಿ ಚಾಲಕ ತೋರಿದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆನವಳ್ಳಿಯಿಂದ ಪ್ರಯಾಣಿಸುತ್ತಿದ್ದ ರಮೇಶ್ (45) ಎಂಬ ಪ್ರಯಾಣಿಕನಿಗೆ ಚಿನ್ನಮನೆ ಸಮೀಪ ಬಸ್ ಚಲಿಸುತ್ತಿದ್ದಾಗಲೇ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ಹೃದಯಾಘಾತದ ಲಕ್ಷಣ ಕಾಣಿಸಿಕೊಂಡಿದೆ. ಪ್ರಯಾಣಿಕನ ಸ್ಥಿತಿ ಗಂಭೀರವಾಗಿರೋದನ್ನು ಗಮನಿಸಿದ ಚಾಲಕ ಮುಸ್ತಾಕ್ ಜಯನಗರ ಮತ್ತು ನಿರ್ವಾಹಕ ಅಶ್ರಫ್ ಜಯನಗರ ಸಮಯ ವ್ಯರ್ಥ ಮಾಡಿಲ್ಲ.
ನಿಗದಿತ ಸ್ಟಾಪ್ ಗಳಲ್ಲಿ ಬಸ್ ನಿಲ್ಲಿಸದೇ ನೇರವಾಗಿ ಗಾಡಿಕೊಪ್ಪದ ಸಮೀಪದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಮುಖ್ಯದ್ವಾರದ ಬಳಿಯೇ ಬಸ್ ನಿಲ್ಲಿಸಿದ್ದಾರೆ. ಸಹ ಪ್ರಯಾಣಿಕರ ಸಹಾಯದಿಂದ ರಮೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೃದಯಾಘಾತದ ಸಂದರ್ಭದಲ್ಲಿ ಅತ್ಯಂತ ನಿರ್ಣಾಯಕವಾದ ಗೋಲ್ಡನ್ ಅವರ್ ನಲ್ಲೇ ಚಿಕಿತ್ಸೆ ಸಿಕ್ಕಿದ್ದರಿಂದ ರಮೇಶ್ ಅವರ ಜೀವ ಉಳಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಟೋ ಡಿಕ್ಕಿ, ಬಾಲಕ ಸಾವು
ರಸ್ತೆ ಬದಿ ನಿಂತಿದ್ದಾಗ ಆಟೋ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ. ಸಾಗರ ತಾಲೂಕಿನ ದಾಸಕೊಪ್ಪ ಗ್ರಾಮದ ಪ್ರಶಾಂತ್ ಎಂಬುವರ ಪುತ್ರ ತನ್ಮಯ್ (8) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಸೆ.27ರ ಸಂಜೆ ಸಾಗರ ತಾಲೂಕಿನ ದಾಸಕೊಪ್ಪ ಗ್ರಾಮದ ಪಾಂಡುರಂಗ ದೇವಸ್ಥಾನದ ಬಳಿ ರಸ್ತೆ ಬದಿ ನಿಂತಿದ್ದ ಬಾಲಕ ತನ್ಮಯ್‌ಗೆ ಗೂಡ್ಸ್ ಆಟೋ ಡಿಕ್ಕಿಯಾಗಿದೆ. ಆಟೋದ ಗ್ರಿಲ್ ತನ್ಮಯ್ ತಲೆ ಭಾಗಕ್ಕೆ ಬಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದ. ತಕ್ಷಣ ಆತನನ್ನು ಆನಂದಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಡೆದು 6 ದಿನದ ಬಳಿಕ ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಗ್ಗೆ ತನ್ಮಯ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.