
ಬೆಂಗಳೂರು; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜನತಾ ದರ್ಶನ ಹಾಗೂ ಕುಂದುಕೊರತೆ ಆಲಿಸುವ ಕಾರ್ಯಕ್ರಮದಲ್ಲಿ ಹೈಡ್ರಾಮಾವೊಂದು ನಡೆದಿದೆ. ತಮ್ಮ ಅಳಲು ತೋಡಿಕೊಳ್ಳಲು ಬಂದಿದ್ದ ವಿಕಲಚೇತನ ವ್ಯಕ್ತಿಯೊಬ್ಬರು, ತಮ್ಮ ಸಮಸ್ಯೆ ವಿವರಿಸುವ ವೇಳೆ ಆವೇಶಕ್ಕೊಳಗಾಗಿ ಉಪಮುಖ್ಯಮಂತ್ರಿಗಳೊಂದಿಗೇ ಜಗಳಕ್ಕೆ ನಿಂತ ಘಟನೆ ವರದಿಯಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಮಧ್ಯಪ್ರವೇಶಿಸಲು ಯತ್ನಿಸಿದರೂ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಅರ್ಜಿದಾರನ ಮನವೊಲಿಸಿ, ಸೂಕ್ತ ಸಮಾಧಾನಪಡಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಂತ್ರಸ್ತ ವಿಕಲಚೇತನ ವ್ಯಕ್ತಿ ತಮಗಾಗುತ್ತಿರುವ ಅನ್ಯಾಯವನ್ನು ಡಿಸಿಎಂ ಎದುರು ತೊಡಿಕೊಂಡರು. "ಖಾಸಗಿ ವ್ಯಕ್ತಿಯೊಬ್ಬರಿಂದ ಪಡೆದಿದ್ದ ಕೇವಲ 1.50 ಲಕ್ಷ ರೂಪಾಯಿ ಸಾಲಕ್ಕಾಗಿ ನನ್ನ ಸ್ವಂತ ಭೂಮಿಯನ್ನು ಅಡಮಾನ ಇಡಲಾಗಿತ್ತು. ಆದರೆ, ಈಗ ಆ ಸಾಲಕ್ಕೆ ಮೀಟರ್ ಬಡ್ಡಿ ಸೇರಿಸಿ ಬಾರೀ ಅಕ್ರಮ ಎಸಗಲಾಗುತ್ತಿದೆ. 1.50 ಲಕ್ಷ ರೂಪಾಯಿಗೆ ಬಡ್ಡಿ-ಅಸಲು ಸೇರಿ ಬರೋಬ್ಬರಿ 50 ಲಕ್ಷ ರೂಪಾಯಿ ನೀಡುವಂತೆ ಮೀಟರ್ ಬಡ್ಡಿಕೋರರು ಪೀಡಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.
ಸಿಎಂ ಸಮ್ಮುಖದಲ್ಲೇ ಮನವಿ!
"ಪ್ರಸ್ತುತ ಆ ಭೂಮಿಯಲ್ಲಿ ನಾನೇ ಸ್ವತಃ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಸಾಲಕ್ಕೆ ತಕ್ಕಂತೆ ಹಣ ನೀಡಲು ಸಿದ್ಧವಿದ್ದರೂ, ಅಡಮಾನವಿಟ್ಟ ಭೂಮಿಯನ್ನು ನನ್ನ ಹೆಸರಿಗೆ ವಾಪಸ್ ಬರೆದುಕೊಡದೆ ಸತಾಯಿಸಲಾಗುತ್ತಿದೆ. ನಮಗೆ ನ್ಯಾಯ ಒದಗಿಸಿ, ಭೂಮಿಯನ್ನು ಮರಳಿ ಕೊಡಿಸಬೇಕು" ಎಂದು ಸಿಎಂ ಸಮ್ಮುಖದಲ್ಲಿ ಮನವಿ ಮಾಡಿದರು.
ಇಷ್ಟಕ್ಕೇ ನಿಲ್ಲದ ವಿಕಲಚೇತನ ಅರ್ಜಿದಾರ, ತಮ್ಮ ಸಾಗುವಳಿ ಭೂಮಿಯ ವಿಚಾರದಲ್ಲೂ ಇಲಾಖೆಯಿಂದ ತೊಂದರೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಹಲವು ವರ್ಷಗಳಿಂದ ನಾನು ಅದೇ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದೇನೆ. ಆದರೆ, ಈಗ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ನನ್ನನ್ನು ಆ ಜಮೀನಿನಿಂದ ಬಲವಂತವಾಗಿ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ" ಎಂದು ಆಕ್ರೋಶದಿಂದ ಮಾತನಾಡತೊಡಗಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲೇ ವಿಕಲಚೇತನ ವ್ಯಕ್ತಿ ತೀವ್ರ ಭಾವೋದ್ವೇಗಕ್ಕೊಳಗಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚೆಗೆ ಇಳಿದು ಆವೇಶ ವ್ಯಕ್ತಪಡಿಸಿದರು. ಸಚಿವ ಈಶ್ವರ ಖಂಡ್ರೆ ಅವರು ಮಧ್ಯಪ್ರವೇಶಿಸಿ ಆತನನ್ನು ಶಾಂತಗೊಳಿಸಲು ಯತ್ನಿಸಿದಾಗ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಮುಂಚೂಣಿಗೆ ಬಂದು ಸಚಿವರನ್ನು ತಡೆದು, ಅರ್ಜಿದಾರನನ್ನು ಶಾಂತಗೊಳಿಸಿದರು.
ಅರ್ಜಿದಾರನ ಸಂಕಟ ಹಾಗೂ ಭಾವನೆಗಳನ್ನು ಶಾಂತಚಿತ್ತದಿಂದ ಆಲಿಸಿದ ಡಿ.ಕೆ. ಶಿವಕುಮಾರ್, ಆತನ ಕೈಯಲ್ಲಿದ್ದ ಅರ್ಜಿ ಹಾಗೂ ಕೋರ್ಟ್ ಆದೇಶದ (Court Order) ಪ್ರತಿಗಳನ್ನು ಖುದ್ದಾಗಿ ಪರಿಶೀಲಿಸಿದರು. ಕೋರ್ಟ್ ದಾಖಲೆಗಳನ್ನು ಪರಿಶೀಲಿಸಿದ ನಂತರ ಅರ್ಜಿದಾರನಿಗೆ ಧೈರ್ಯ ತುಂಬಿದ ಡಿಸಿಎಂ, "ನೋಡಯ್ಯ, ಕೋರ್ಟ್‌ನಲ್ಲಿ ನಿನಗೆ ಅನುಕೂಲಕರವಾದ ಆದೇಶವಿದೆ. ಕೋರ್ಟ್‌ನಲ್ಲಿ ಯಾರಾದರೂ ನಿನ್ನನ್ನು ಜಮೀನಿನಿಂದ ಖಾಲಿ ಮಾಡಿಸಿ ಎಂದು ಹೇಳಿದ್ದಾರಾ? ಇಲ್ಲ ತಾನೇ? ಹಾಗಿದ್ದ ಮೇಲೆ ನೀನು ಜಮೀನಿನಿಂದ ಎದ್ದೋಗುವ ಅಗತ್ಯವೇ ಇಲ್ಲ. ಧೈರ್ಯವಾಗಿ, ಬಿಗಿಯಾಗಿ ಅಲ್ಲೇ ಇರು" ಎಂದು ಅಭಯ ನೀಡಿದರು.
ಖಾಸಗಿ ಮೀಟರ್ ಬಡ್ಡಿಕೋರರ ಕಿರುಕುಳ ಹಾಗೂ ಅರಣ್ಯ ಭೂಮಿಯ ಸಮಸ್ಯೆಯ ಕುರಿತು ಕಾನೂನಾತ್ಮಕವಾಗಿ ಸೂಕ್ತ ತನಿಖೆ ನಡೆಸಿ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿ.ಕೆ. ಶಿವಕುಮಾರ್, ವಿಕಲಚೇತನನಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿ ಕಳುಹಿಸಿಕೊಟ್ಟರು.