ಡಾಕ್ಟರ್ ಆಗಿ ಮನೆ ಕಟ್ಟಿಸಿಕೊಡುತ್ತೇನೆ, ಅಲ್ಲಿಯವರೆಗೆ ಶೆಡ್‌ನಲ್ಲೇ ಇರೋಣ ಎಂದು ಹೇಳುತ್ತಿದ್ದ ಮಗ ವಾಪಸ್ ಬರಲೇ ಇಲ್ಲ. ಆದರೆ, ಆತನ ನೆರಳಲ್ಲೇ ನಾವು ಬದುಕುತ್ತಿದ್ದೇವೆ. ಅದಕ್ಕಾಗಿ ಕಟ್ಟಿರುವ ಮನೆಗೆ ‘ನವೀನ್ ನಿವಾಸ’ ಎಂದೇ ಹೆಸರಿಟ್ಟಿದ್ದೇವೆ. ಆತನ ನೆನಪಲ್ಲೇ ಜೀವಿಸುತ್ತೇವೆ...
ನಾರಾಯಣ ಹೆಗಡೆ
ಹಾವೇರಿ (ಫೆ.13) : ಡಾಕ್ಟರ್ ಆಗಿ ಮನೆ ಕಟ್ಟಿಸಿಕೊಡುತ್ತೇನೆ, ಅಲ್ಲಿಯವರೆಗೆ ಶೆಡ್‌ನಲ್ಲೇ ಇರೋಣ ಎಂದು ಹೇಳುತ್ತಿದ್ದ ಮಗ ವಾಪಸ್ ಬರಲೇ ಇಲ್ಲ. ಆದರೆ, ಆತನ ನೆರಳಲ್ಲೇ ನಾವು ಬದುಕುತ್ತಿದ್ದೇವೆ. ಅದಕ್ಕಾಗಿ ಕಟ್ಟಿರುವ ಮನೆಗೆ ‘ನವೀನ್ ನಿವಾಸ’ ಎಂದೇ ಹೆಸರಿಟ್ಟಿದ್ದೇವೆ. ಆತನ ನೆನಪಲ್ಲೇ ಜೀವಿಸುತ್ತೇವೆ...
undefined
ರಷ್ಯಾ ದಾಳಿ(Russia attack)ಯಿಂದ ಉಕ್ರೇನ್(Ukrain)ನಲ್ಲಿ ಕಳೆದ ವರ್ಷ ಮೃತಪಟ್ಟರಾಣಿಬೆನ್ನೂರು ತಾಲೂಕು ಚಳಗೇರಿಯ ನವೀನ್ ಗ್ಯಾನಗೌಡರ(Naveen gyanagowdar) ಅವರ ನೆನಪಿಗಾಗಿ ಶೇಖರಪ್ಪ ಮತ್ತು ತಾಯಿ ವಿಜಯಲಕ್ಷ್ಮೀ ದಂಪತಿ ಹೊಸ ಮನೆ ಕಟ್ಟಿಮಗನ ಹೆಸರಿಟ್ಟಿದ್ದಾರೆ. ಆ ಮೂಲಕ ಪುತ್ರನನ್ನು ಹೃದಯದಲ್ಲಿ ಅಮರವಾಗಿಸಿದ್ದಾರೆ.
ಹೆದ್ದಾರಿಯಲ್ಲಿ ಬೈಕ್‌ಗೆ ಗುದ್ದಿದ ಅಪರಿಚಿತ ವಾಹನ: ದಿಕ್ಕಾಪಾಲಾಗಿ ಬಿದ್ದ ಯುವಕರ ಮೃತದೇಹಗಳು
ಪ್ರಥಮ ಪುಣ್ಯಸ್ಮರಣೆ ಹಾಗೂ ನವೀನ ನಿವಾಸದ ಗೃಹ ಪ್ರವೇಶ ಕಾರ್ಯಕ್ರಮವನ್ನು ಇದೇ ಫೆ. 17ಕ್ಕೆ ನವೀನ್ ಉಕ್ರೇನ್‌ನಲ್ಲಿ ಬಾಂಬ್ ದಾಳಿಗೆ ತುತ್ತಾಗಿ ಸರಿಯಾಗಿ ಒಂದು ವರ್ಷ. ಅಂದು ಪ್ರಥಮ ಪುಣ್ಯಸ್ಮರಣೆಯ ಜತೆಗೆ ಹೊಸ ಮನೆಯ ಗೃಹಪ್ರವೇಶ ಇಟ್ಟುಕೊಂಡಿದ್ದಾರೆ.
ಹೊಸ ಮನೆ ಕಟ್ಟಿಸಿದ ಖುಷಿಗಿಂತ ಅಕಾಲಿಕವಾಗಿ ಮೃತಪಟ್ಟಮಗನ ನೋವೇ ಅವರನ್ನು ಇನ್ನೂ ಕಾಡುತ್ತಿದೆ. ಮಗನ ಸಾವಿನ ನೋವಿನಲ್ಲೇ ಬದುಕುತ್ತಿದೆ ಗ್ಯಾನಗೌಡರ ಕುಟುಂಬ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ(Russia ukrain war)ದ ವೇಳೆ ಮಾ. 1ರಂದು ಉಕ್ರೇನ್‌ನಲ್ಲಿ ನವೀನ್ ಮೃತಪಟ್ಟಿದ್ದರೂ ಪಂಚಾಂಗದ ಪ್ರಕಾರ ಫೆ. 17ರಂದು ಪುಣ್ಯತಿಥಿ ಬರುತ್ತಿದೆ. ಅದಕ್ಕಾಗಿ ಫೆ. 17ರಂದು ಚಳಗೇರಿಯಲ್ಲಿ ನವೀನ್ ಪುಣ್ಯಸ್ಮರಣೆ ಮತ್ತು ನವೀನ್ ನಿವಾಸದ ಗೃಹಪ್ರವೇಶ ಮಾಡಲು ನಿಶ್ಚಯಿಸಿದ್ದಾರೆ.
ನವೀನ್ ಹೆಸರು ಶಾಶ್ವತವಾಗಿರಬೇಕು
ನವೀನ್ ಮೃತಪಟ್ಟು ವರ್ಷ ಕಳೆದರೂ ಆತನ ಪೋಷಕರ ನೋವು ಕಡಿಮೆಯಾಗುತ್ತಿಲ್ಲ. ಮಗನ ನೆನಪಿನಲ್ಲೇ ತಂದೆ ಶೇಖರಪ್ಪ, ತಾಯಿ ವಿಜಯಲಕ್ಷ್ಮೀ ಬದುಕುತ್ತಿದ್ದಾರೆ. ಮಗ ಸತ್ತು ವರ್ಷದೊಳಗೆ ಶುಭ ಕಾರ್ಯ ಮಾಡಬೇಕು ಎಂಬ ಪದ್ಧತಿಯಂತೆ ಹೊಸ ಮನೆಯನ್ನು ಕಟ್ಟಿಸಿದ್ದಾರೆ. ವೈದ್ಯಕೀಯ ವ್ಯಾಸಂಗ ಮುಗಿಸಿ ಡಾಕ್ಟರ್ ಆಗಿ ತಾನು ಮನೆ ಕಟ್ಟಿಸಿಕೊಡುತ್ತೇನೆ ಎಂದು ನವೀನ್ ತನ್ನ ಹೆತ್ತವರಿಗೆ ಹೇಳುತ್ತಿದ್ದ. ಮಗನ ವಿದ್ಯಾಭ್ಯಾಸಕ್ಕೆ ಸಾಲಸೂಲ ಮಾಡಿಕೊಂಡಿದ್ದ ಕುಟುಂಬ ಟಿನ್ ಶೆಡ್‌ನಲ್ಲೇ ಬದುಕು ಸಾಗಿಸುತ್ತಿತ್ತು. ಈಗ ಮಗನ ಸ್ಮರಣೆಗಾಗಿ ಮನೆ ಕಟ್ಟಿಸಿದ್ದು, ಅದಕ್ಕೆ ನವೀನ್ ನಿವಾಸ ಎಂದು ನಾಮಕರಣ ಮಾಡಿದ್ದಾರೆ. ನವೀನ್ ಭಾವಚಿತ್ರವನ್ನು ಗ್ರಾನೈಟ್‌ನಲ್ಲಿ ಕೆತ್ತಿಸಿ ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದೆ. ನವೀನ್ ಹೆಸರು ಶಾಶ್ವತವಾಗಿರಬೇಕು ಎಂಬ ಕಾರಣಕ್ಕೆ ಆತನ ಹೆಸರನ್ನೇ ಇಟ್ಟಿದ್ದೇವೆ. ಆತನ ನೆರಳಲ್ಲೇ ನಾವು ಬದುಕುತ್ತಿದ್ದೇವೆ. ಆರ್ಥಿಕ ಸಂಕಷ್ಟಇದ್ದರೂ ನವೀನ್ ನೀಡಿದ ಶಕ್ತಿಯಿಂದಲೇ ಶ್ರಮಪಟ್ಟು ಮನೆ ಕಟ್ಟಿಸಿದ್ದೇವೆ ಎಂದು ಶೇಖರಪ್ಪ ದುಃಖಭರಿತರಾಗಿಯೇ ಹೇಳಿದರು.
ಎಲ್ಲರನ್ನು ಕಾಡಿದ ನೆನಪು
ಚಳಗೇರಿಯ ಶೇಖರಪ್ಪ ಅವರ ಪುತ್ರ ನವೀನ್ ಉಕ್ರೇನ್‌ನ ಕಾರ್ಖೀವ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಕಳೆದ ವರ್ಷ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಭೀಕರ ಯುದ್ಧದ ಸಂದರ್ಭದಲ್ಲಿ ತನ್ನ ಸ್ನೇಹಿತರಿಗಾಗಿ ಆಹಾರ ತರಲು ತೆರಳಿದ್ದ ವೇಳೆ ನವೀನ್ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಅಸುನೀಗಿದ್ದ. ಮಾ. 1ರಂದು ನಡೆದ ಈ ಘಟನೆ ದೇಶದ ಜನರನ್ನೇ ದುಃಖದಲ್ಲಿ ಮುಳುಗಿಸಿತ್ತು. ಕೇಂದ್ರ ಸರ್ಕಾರವು ಉಕ್ರೇನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ನವೀನ್ ಮೃತದೇಹ ಹಾಳಾಗದಂತೆ ಸಂರಕ್ಷಣೆ ಮಾಡಿಸಿ ಮಾ. 21ರಂದು ತಾಯ್ನಾಡಿಗೆ ವಾಪಸ್ ತಂದಿತ್ತು. ಪ್ರಧಾನಿ ಮೋದಿ ಅವರೇ ಶೇಖರಪ್ಪ ಅವರಿಗೆ ಕರೆ ಮಾಡಿ ಧೈರ್ಯ ಹೇಳಿದ್ದರು. ಮುಖ್ಯಮಂತ್ರಿಯಾದಿಯಾಗಿ ಅನೇಕರು ಆಗಮಿಸಿ ಶೇಖರಪ್ಪ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ನವೀನ್ ಸಾವಿನ ನೋವು ದೇಶ, ನಾಡಿನ ಜನರನ್ನು ಕಾಡಿತ್ತು.
ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಗೈರು: ಕುರ್ಚಿ ತೂರಾಟ ನಡೆಸಿ ಅಭಿಮಾನಿಗಳ ಗಲಾಟೆ
ಡಾಕ್ಟರ್ ಆಗಿ ಮನೆ ಕಟ್ಟಿಸಿಕೊಡುತ್ತೇನೆ ಎಂದು ಹೇಳುತ್ತಿದ್ದ ಮಗ ನವೀನ್ ಮೃತಪಟ್ಟು ಒಂದು ವರ್ಷವಾಗುತ್ತಿದೆ. ಆತನ ನೆನಪಿಗಾಗಿ ಮನೆ ಕಟ್ಟಿಸಿದ್ದೇವೆ. ಫೆ. 17ರಂದು ನವೀನ್ ನಿವಾಸದ ಗೃಹ ಪ್ರವೇಶ ಮತ್ತು ಪ್ರಥಮ ವರ್ಷದ ಪುಣ್ಯ ಸ್ಮರಣೆ ನೆರವೇರಿಸುತ್ತಿದ್ದೇವೆ. ಮನೆ ಕಟ್ಟಿದ ಖುಷಿಗಿಂತ ಮಗನನ್ನು ಕಳೆದುಕೊಂಡ ನೋವಿನಿಂದ ನಮಗೆ ಹೊರಬರಲಾಗುತ್ತಿಲ್ಲ.
ಶೇಖರಪ್ಪ ಗ್ಯಾನಗೌಡರ, ನವೀನ್ ತಂದೆ