ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಪದೇ ಪದೇ ಕಾಣುತ್ತಿದ್ದ ಪಂಕ್ತಿಬೇಧ ವಿಚಾರಕ್ಕೆ ಬ್ರೇಕ್ ಬಿದ್ದಿದ್ದರೂ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಸಾಕಷ್ಟು ಸಮಯಗಳ ನಂತರ ಮತ್ತೆ ಬೆಳಕಿಗೆ ಬಂದಿದೆ.
ಉತ್ತರಕನ್ನಡ(ನ.28): ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಪದೇ ಪದೇ ಕಾಣುತ್ತಿದ್ದ ಪಂಕ್ತಿಬೇಧ ವಿಚಾರ ಇದೀಗ ಸಾಕಷ್ಟು ಸಮಯದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲೂ ಮುನ್ನೆಲೆಗೆ ಬಂದಿದೆ. ಇತಿಹಾಸ ಪ್ರಸಿದ್ಧ ಹೊನ್ನಾವರದ ಇಡಗುಂಜಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲೂ ಅನ್ನಪ್ರಸಾದದ ವಿಚಾರದಲ್ಲಿ ಪಂಕ್ತಿಬೇಧ ನಡೆಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿದ್ದು, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...
ಹೌದು, ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಪದೇ ಪದೇ ಕಾಣುತ್ತಿದ್ದ ಪಂಕ್ತಿಬೇಧ ವಿಚಾರಕ್ಕೆ ಬ್ರೇಕ್ ಬಿದ್ದಿದ್ದರೂ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಸಾಕಷ್ಟು ಸಮಯಗಳ ನಂತರ ಮತ್ತೆ ಬೆಳಕಿಗೆ ಬಂದಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿ ದೇವಸ್ಥಾನಕ್ಕೆ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರೇ ಮುಖ್ಯಸ್ಥರಾಗಿದ್ದು, ಕ್ಷೇತ್ರದ ಆಡಳಿತಾಧಿಕಾರಿ ಹಾಗೂ ಸಮಿತಿಯನ್ನು ನ್ಯಾಯಾಲಯದ ಸೂಚನೆಯಂತೆ ರಚಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಪ್ರತೀದಿನ ಮಧ್ಯಾಹ್ನ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು, ಪ್ರತಿನಿತ್ಯ ನೂರಾರು ಜನರು ಅನ್ನಪ್ರಸಾದ ಪಡೆಯುತ್ತಾರೆ. ಮೊನ್ನೆಯಷ್ಟೇ ಪ್ರವಾಸಿಗರೊಬ್ಬರು ಅನ್ನದಾಸೋಹಕ್ಕೆ ಹೋದ ವೇಳೆ ದೇವಸ್ಥಾನದ ಸಿಬ್ಬಂದಿ ಪಂಕ್ತಿ ಭೇದ ನಡೆಸಿರುವುದು ಕಂಡು ಭಕ್ತರೋರ್ವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊನ್ನೆ ಮಧ್ಯಾಹ್ನದ ಸಮಯ ಹಸಿವಿನಿಂದ ನೂರಾರು ಮಂದಿ ಮಕ್ಕಳು, ಭಕ್ತರು ಊಟಕ್ಕೆ ಕಾದಿದ್ದರಾದ್ರೂ ಸಾಲಿನಲ್ಲಿ ಬಂದ ಸುಮಾರು 20-25 ಬ್ರಾಹ್ಮಣರಿಗೆ ಮಾತ್ರ ಸಿಬ್ಬಂದಿ ಮೊದಲು ಊಟ ನೀಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ವ್ಯಕ್ತಿಯ ಜತೆ ದೇವಸ್ಥಾನದ ಸಿಬ್ಬಂದಿ ವಾಗ್ವಾದ ನಡೆಸಿ ಬೆದರಿಕೆ ಕೂಡಾ ಹಾಕಿದ್ದಾರೆ ಎನ್ನಲಾಗಿದೆ. ಇಡಗುಂಜಿ ದೇವಸ್ಥಾನದಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದ್ದು, ಪ್ರಸ್ತುವವಿರುವ ನಾಲ್ಕೈದು ಸಿಬ್ಬಂದಿಯೇ ಅನ್ನದಾಸೋಹ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ, ದೇವಸ್ಥಾನಕ್ಕೆ ಬರುವ ಪ್ರತೀ ಭಕ್ತರನ್ನು ಸಮಾನರಾಗಿ ಕಾಣಬೇಕಾಗಿದ್ದರೂ ಸಿಬ್ಬಂದಿ ನಡೆಸಿದ ಪಂಕ್ತಿಭೇದ ಹಾಗೂ ಭಕ್ತರೊಬ್ಬರ ಜತೆ ನಡೆದುಕೊಂಡ ರೀತಿ ಜಿಲ್ಲೆಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
undefined
ಅಂಗನವಾಡಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ..ಕಟ್ಟಡ ಖಾಲಿ ಮಾಡುವಂತೆ ಕಾರ್ಯಕರ್ತೆಯರ ಮೇಲೆ ಒತ್ತಡ
ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ದೇವಸ್ಥಾನದಲ್ಲಿ ಪಂಕ್ತಿಬೇಧ ವಿಚಾರದಲ್ಲಿ ಗಲಾಟೆಯಾಗಿದ್ದು ನನ್ನ ಗಮನಕ್ಕೆ ಬಂದಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಮಾಹಿತಿ ತೆಗೆದುಕೊಂಡು ಮುಂದಕ್ಕೆ ಈ ರೀತಿಯಾಗದಂತೆ ಕ್ರಮ ಕೈಗೊಳ್ತೇನೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು, ಆ ತರಹ ಮಾಡಲು ಅವಕಾಶವಿಲ್ಲ.ಪಂಕ್ತಿಬೇಧ ನಡೆಸುತ್ತಿದ್ದಾರೆಂದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ತೇನೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಸಮಯಗಳಿಂದ ಸೈಲೆಂಟಾಗಿದ್ದ ಉತ್ತರಕನ್ನಡ ಜಿಲ್ಲೆಯಲ್ಲಿ ಪಂಕ್ತಿಬೇಧದ ವಿಚಾರ ಮತ್ತೆ ಬೆಳಕಿಗೆ ಬಂದಿದೆ. ಈ ಪ್ರಕರಣ ಮುನ್ನೆಲೆಗೆ ಬಂದ ಬಳಿಕ ಜಿಲ್ಲೆಯ ಕೆಲವು ದೇವಸ್ಥಾನಗಳಲ್ಲೂ ಇದೇ ರೀತಿ ಪಂಕ್ತಿಬೇಧ ನಡೆಸಲಾಗುತ್ತಿದೆ ಎಂಬ ದೂರುಗಳು ಜನರಿಂದ ಕೇಳಿಬರುತ್ತಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.