ಮುಖ್ಯಮಂತ್ರಿ ಬೊಮ್ಮಾಯಿ ಶಿಗ್ಗಾಂವಿ ನಿವಾಸದ ಎದುರು ಧರಣಿ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಅದಕ್ಕೆ ಪಂಚಮಸಾಲಿ ಸಮಾಜದ ಸ್ಥಳೀಯರೇ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ, ಶಿಗ್ಗಾಂವಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ಬಳಿ ಬಹಿರಂಗ ಸಮಾವೇಶ ನಡೆಸಲಾಯಿತು.
ಹಾವೇರಿ(ಜ.14): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಭುಗಿಲೆದ್ದಿದ್ದು, ಶಿಗ್ಗಾಂವಿಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಹೋರಾಟ ಈಗ ಬೆಂಗಳೂರಿಗೆ ಶಿಫ್ಟ್ ಆಗಿದ್ದು, ಶನಿವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರ ಶಿಗ್ಗಾಂವಿ ನಿವಾಸದ ಎದುರು ಧರಣಿ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಅದಕ್ಕೆ ಪಂಚಮಸಾಲಿ ಸಮಾಜದ ಸ್ಥಳೀಯರೇ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ, ಶಿಗ್ಗಾಂವಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ಬಳಿ ಬಹಿರಂಗ ಸಮಾವೇಶ ನಡೆಸಲಾಯಿತು. ಕೂಡಲಸಂಗಮ ಶ್ರೀ ಸೇರಿದಂತೆ ಸಮಾಜದ ಪ್ರಮುಖರು ಕಿತ್ತೂರು ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಸುಮಾರು 2 ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು.
undefined
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ: ವಚನಾನಂದ ಸ್ವಾಮೀಜಿ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೊಮ್ಮಾಯಿಯವರು 6 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ತಾಯಿ ಮೇಲೆ ಆಣೆ ಮಾಡಿ ಹೋರಾಟ ಹತ್ತಿಕ್ಕಿದರು. ನಾವೂ ಅವರ ಮಾತನ್ನು ನಂಬಿದ್ದೆವು. ಆದರೆ 2ಎ ಮೀಸಲಾತಿ ನೀಡುವ ಬದಲು 2ಡಿ ಅಂತ ಕೊಟ್ಟರು. ಇದು ನಮ್ಮ ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. 2ಡಿ ಮೀಸಲಾತಿ ತಿರಸ್ಕರಿಸಿದ್ದೇವೆ. ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದರು.
ಬೊಮ್ಮಾಯಿ ಕಡೆಯಿಂದ ನಮಗೆ 2ಎ ಮೀಸಲಾತಿ ದೊರೆಯಲ್ಲ. ಆದ್ದರಿಂದ ಪಂಚಮಸಾಲಿ ಸಮಾಜದವರು ನಡೆಸುತ್ತಿರುವ ಹೋರಾಟದ ಸಮಗ್ರ ವರದಿಯನ್ನು ತಯಾರಿಸಿ, ಸಮಾಜದ ಮುಖಂಡರೊಂದಿಗೆ ಶೀಘ್ರವೇ ದೆಹಲಿಗೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿ ಎದುರು ಹಕ್ಕೊತ್ತಾಯ ಮಾಡಲಾಗುವುದು ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಬೊಮ್ಮಾಯಿಯವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಬೊಮ್ಮಾಯಿ ಕಡೆಯಿಂದ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿಸಲು ಆಗುವುದಿಲ್ಲ. ಸರ್ಕಾರವೇ ಹಿಂಬಾಗಿಲಿಂದ ಕೋರ್ಚ್‌ನಿಂದ ತಡೆಯಾಜ್ಞೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜ.14ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ರಾಜ್ಯದಿಂದ ನಿತ್ಯವೂ ಪ್ರತಿ ಎರಡು ತಾಲೂಕಿನ ಪಂಚಮಸಾಲಿ ಸಮಾಜದ ಮುಖಂಡರು, ಕಾರ್ಯಕರ್ತರು ಬಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
Reservation: ಪ್ರವರ್ಗ 2ಸಿ, 2ಡಿ ಮೀಸಲಾತಿಗೆ ಹೈಕೋರ್ಟ್ ತಡೆ: ಪಂಚಮಸಾಲಿ, ಒಕ್ಕಲಿಗರಿಗೆ ಬಿಗ್ ಶಾಕ್
ಮಾಜಿ ಸಚಿವ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಸಮಾಜದ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
2 ತಾಸು ಹೆದ್ದಾರಿ ಬಂದ್
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಶಿಗ್ಗಾಂವಿ ಪಟ್ಟಣದ ಚನ್ನಮ್ಮ ವೃತ್ತದಿಂದ ಹೊರಟ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 48ಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿದರು. ಈ ವೇಳೆ, ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಪೊಲೀಸರ ಪ್ರತಿರೋಧ ಗಮನಿಸದೆ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಹೆದ್ದಾರಿ ಮೇಲೆಯೇ ಪ್ರತಿಭಟನಾಕಾರರು ಧರಣಿ ಕುಳಿತರು. ಸರ್ಕಾರ, ಮುಖ್ಯಮಂತ್ರಿಗೆ ಧಿಕ್ಕಾರ ಕೂಗಿದರು. ಬೊಮ್ಮಾಯಿ, ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿದರು. ಪ್ರತಿಭಟನೆಯಿಂದಾಗಿ ಹೆದ್ದಾರಿಯ ಎರಡೂ ದಿಕ್ಕಿನಲ್ಲಿ ನೂರಾರು ವಾಹನಗಳು ಸಾಲಾಗಿ ನಿಂತಿದ್ದವು. ಸುಮಾರು 2 ತಾಸು ಹೆದ್ದಾರಿ ಬಂದ್ ಆಗಿತ್ತು. ಬಳಿಕ ಪೊಲೀಸರು ಶ್ರೀಗಳ ಮನವೊಲಿಸಿ, ಪ್ರತಿಭಟನಾಕಾರರನ್ನು ಹೆದ್ದಾರಿಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.