ಬೆಂಗಳೂರು: ನಿಂತಿದ್ದ ಬಸ್‌ಗೆ ಬೈಕ್‌ ಡಿಕ್ಕಿ, ಸವಾರ ದುರ್ಮರಣ

By Kannadaprabha NewsFirst Published Jan 14, 2023, 7:30 AM IST
Highlights

ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ರಸ್ತೆ ಬದಿ ಶಾಲಾ ವಾಹನ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಮೃತನ ತಂದೆ ದೂರು ನೀಡಿದ್ದಾರೆ. 

ಬೆಂಗಳೂರು(ಜ.14): ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಖಾಸಗಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ದುರ್ಘಟನೆ ಯಲಹಂಕ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರು ಮೂಲದ ತೇಜಸ್ವಿ(21) ಮೃತ ಸವಾರ. ದ್ವಿಚಕ್ರ ವಾಹನದಲ್ಲಿ ಗುರುವಾರ ರಾತ್ರಿ 11.50ರ ಸುಮಾರಿಗೆ ರಾಯಲ್‌ ಆರ್ಕಿಡ್‌ ರೆಸಾರ್ಟ್‌ ಕಡೆಯಿಂದ ಯಲಹಂಕ ಉಪನಗರದ ಕಡೆಗೆ ಬರುವಾಗ ಮಾರ್ಗ ಮಧ್ಯೆ ಅಲ್ಲಾಳಸಂದ್ರ ಕೆರೆ ಸಮೀಪದ ಕೋಡಿ ಕರಿಮಾರಿಯಮ್ಮ ದೇವಸ್ಥಾನ ಬಳಿ ಅಪಘಾತವಾಗಿದೆ.

Chitradurga: ಅಭಿವೃದ್ಧಿ ನೆಪದಲ್ಲಿ ಕಿರಿದಾದ ರಸ್ತೆ ನಿರ್ಮಾಣ, ಡಿವೈಡರ್‌ನಿಂದ ಹೆಚ್ಚಿದ ಅಪಘಾತ!

ಮೈಸೂರು ಮೂಲದ ತೇಜಸ್ವಿ ಯಲಹಂಕ ಉಪನಗರದಲ್ಲಿರುವ ದೊಡ್ಡಮ್ಮನ ಮನೆಯಲ್ಲಿ ಉಳಿದುಕೊಂಡು ನಗರದ ಸಿಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಗುರುವಾರ ಬೆಳಗ್ಗೆ ಕಾಲೇಜಿಗೆ ಹೋಗಿ ರಾತ್ರಿ ಮನೆಗೆ ವಾಪಾಸಾಗುವಾಗ ರಸ್ತೆ ಬದಿ ನಿಂತಿದ್ದ ಖಾಸಗಿ ಶಾಲಾ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ತೇಜಸ್ವಿ ರಸ್ತೆಗೆ ಬಿದ್ದಿದ್ದಾನೆ. ಹೆಲ್ಮೆಟ್‌ ಧರಿಸಿರಲಿಲ್ಲ. ಹಾಗಾಗಿ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ.

ಕೂಡಲೇ ಸ್ಥಳೀಯರು ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷೆ ಮಾಡಿದ ವೈದ್ಯರು, ತಲೆಗೆ ಏಟು ಬಿದ್ದು ತೀವ್ರ ರಕ್ತಸ್ರಾವವಾಗಿ ಮಾರ್ಗ ಮಧ್ಯೆಯೇ ತೇಜಸ್ವಿ ಮೃತಪಟ್ಟಿರುವುದಾಗಿ ಘೋಷಿಸಿದರು. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ರಸ್ತೆ ಬದಿ ಶಾಲಾ ವಾಹನ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಮೃತನ ತಂದೆ ದೂರು ನೀಡಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!