ಕೊಪ್ಪಳ: ಸಂಭ್ರಮದ ಗವಿಸಿದ್ಧೇಶ್ವರ ಪಲ್ಲಕ್ಕಿ ಉತ್ಸವ, ಭಕ್ತರಿಂದ 200 ಕ್ವಿಂಟಲ್‌ ಅಕ್ಕಿ ರವಾನೆ

By Suvarna News  |  First Published Jan 11, 2020, 9:56 AM IST

ಗವಿಸಿದ್ಧೇಶ್ವರ ಮೂರ್ತಿ (ಪಲ್ಲಕ್ಕಿ) ಕಳಸದ ಮೆರವಣಿಗೆ| ಗವಿಮಠದ ಜಾತ್ರೆ ಅಂಗವಾಗಿ ಗವಿಮಠದಲ್ಲಿ ನಡೆದ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ| ಗವಿಮಠದಲ್ಲಿ ಮನೆಮಾಡಿದ ಸಂಭ್ರಮ | ಮಹಾದಾಸೋಹಕ್ಕೆ ಹರಿದು ಬರುತ್ತಿರುವ ದೇಣಿಗೆ|


ಕೊಪ್ಪಳ(ಜ.11): ಗವಿಮಠದ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ಗವಿಸಿದ್ಧೇಶ್ವರ ಮೂರ್ತಿ (ಪಲ್ಲಕ್ಕಿ) ಕಳಸದ ಮೆರವಣಿಗೆ ಕೋಟೆ ಏರಿಯಾದಲ್ಲಿರುವ ಜಡೇಗೌಡರ ಮನೆಯಿಂದ ಗಡಿಯಾರ ಕಂಬ, ಜವಾಹರ ರಸ್ತೆ, ಕಿತ್ತೂರ ಚೆನ್ನಮ್ಮ ಸರ್ಕಲ್, ಕವಲೂರ ಓಣಿ, ಸಿದ್ಧೇಶ್ವರ ವೃತ್ತದ ಮಾರ್ಗವಾಗಿ ಗವಿಮಠದವರೆಗೆ ಸಕಲ ವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ಜರುಗಿದೆ. 

ಗವಿಮಠದ 11 ಪೀಠಾಧೀಶ ಗವಿಸಿದ್ಧೇಶ್ವರ ಶ್ರೀಗಳು ಗವಿಮಠಕ್ಕೆ ಆಗಮಿಸುವ ಪೂರ್ವದಲ್ಲಿ ನಗರದ ಜಡೇಗೌಡರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಗೌಡರ ಪತ್ನಿಗೆ ತಮ್ಮ ಶಿಖೆ (ಜಡೆ) ತೆಗೆದುಕೊಟ್ಟರು. ಅಂದಿನಿಂದ ಆ ಮನೆತನಕ್ಕೆ ಜಡೇಗೌಡ್ರ ಎಂಬ ಹೆಸರು ಬಂದಿದೆ. ಈ ಕಾರಣಕ್ಕಾಗಿ ಮಠದಲ್ಲಿ ಪೂಜೆ ಗೊಂಡ ಗವಿಸಿದ್ಧೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮೂಹರ್ತಗೊಳಿಸಿ ಪೂಜಾದಿಗಳನ್ನು ಸಲ್ಲಿಸಿದ ತರುವಾಯ ವಾದ್ಯಗಳ ಸಮೇತ ಪಲ್ಲಕ್ಕಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಹಲವು ಜಾನಪದ ಕಲಾ ತಂಡಗಳಾದ ಸಮಾಳ ಮೋಜಿನ ಗೊಂಬೆ, ಹಲಗೆ ಮಜಲು, ಮಹಿಳಾ ಡೊಳ್ಳು ಕುಣಿತ, ಮಹಿಳಾ ವೀರಾಗಾಸೆ, ಕೋಲಾಟ, ಕರಡಿ ಮಜಲು, ಸಮಾಳ, ನಂದಿಕೋಲು, ಹಗಲು ವೇಷ, ಜಾಂಜ್ ಮೇಳ, ಚಿಟ್ಟಿ ಮೇಳದೊಂದಿಗೆ ಗವಿಮಠಕ್ಕೆ ತರಲಾಯಿತು. 

Latest Videos

undefined

ದೇವಿಗೆ ಉಡಿ ತುಂಬುವ ಕಾರ್ಯಕ್ರಮ: 

ಗವಿಮಠದ ಜಾತ್ರೆ ಅಂಗವಾಗಿ ಗವಿಮಠದಲ್ಲಿ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ಕೊಪ್ಪಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು. ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪ ತಂದುಕೊಡಲಿ ಎಂದು ತಾಯಂದಿರು ದೇವಿಗೆ ಉಡಿತುಂಬಿ ಹರಕೆ ಮಾಡಿಕೊಂಡರು. 

ಮಹಾದಾಸೋಹಕ್ಕೆ ಹರಿದು ಬಂದ ದೇಣಿಗೆ: 

ಜಾತ್ರಾ ಮಹೋತ್ಸವದ ನಿಮಿತ್ತ ಜರುಗಲಿರುವ ಮಹಾದಾಸೋಹಕ್ಕಾಗಿ ಶುಕ್ರವಾರ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಎತ್ತಿನಬಂಡಿ, ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ರೊಟ್ಟಿ, ದವಸ, ಧಾನ್ಯಗಳನ್ನು ಮಹಾದಾಸೋಹಕ್ಕೆ ಸಲ್ಲಿಸಿದರು. ಅಡವಿಬಾವಿಯಿಂದ 5000 ರೊಟ್ಟಿ, ಚಿಕ್ಕಸಿಂದೋಗಿ- 5000, ಮಂಗಳೂರು-300, ಹಂಚಿನಾಳ-600, ಚಿತ್ತಾಪುರ-2000, ರ್ಯಾವಣಕಿ 5000, ಮುದಲಗುಂದಿ-100 ಸೇರಿದಂತೆ ವಿವಿಧ ಗ್ರಾಮಗಳಿಂದ ಈ ವರೆಗೂ 5 ಲಕ್ಷಕ್ಕಿಂತಲೂ ಹೆಚ್ಚು ರೊಟ್ಟಿಗಳು ಸಂಗ್ರಹವಾಗಿವೆ.

ಇಂದು ಲಘು ರಥೋತ್ಸವ ಗವಿಮಠದ ಜಾತ್ರೆಯ ಮಹಾರಥೋತ್ಸವದ ನಿಮಿತ್ತ ಜ. 11 ರಂದು ಸಂಜೆ 5 ಗಂಟೆಗೆ ಉಚ್ಛಾಯಿ (ಲಘು ರಥೋತ್ಸವ) ಕಾರ್ಯಕ್ರಮ ಜರುಗಲಿದೆ. ಮಹಾರಥೋತ್ಸವದ ಹಿಂದಿನ ದಿನ ಲಘು ರಥ ಎಳೆಯುವುದು ಸಂಪ್ರದಾಯವಾಗಿದ್ದು, ಅದರಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಾರಟಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಕೊಪ್ಪಳ ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ 200 ಕ್ವಿಂಟಲ್‌ ಅಕ್ಕಿಯನ್ನು ಶುಕ್ರವಾರ ಶ್ರೀಮಠಕ್ಕೆ ಕಳುಹಿಸಿಕೊಟ್ಟರು. ಪಟ್ಟಣದ ದಲಾಲಿ ವರ್ತಕರ ಸಂಘ, ಅಕ್ಕಿ ಗಿರಣಿ ಮಾಲೀಕರ ಸಂಘ ಸೇರಿ ಸುತ್ತಲಿನ ನಾನಾ ಗ್ರಾಮಗಳ ಭಕ್ತರಿಂದ ಸಂಗ್ರಹಿಸಿದ ಅಕ್ಕಿಯನ್ನು ಮಠಕ್ಕೆ ಕಳುಹಿಸಲಾಯಿತು. 

ಈ ವೇಳೆ ದಲಾಲಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಶಿವಶರಣಗೌಡ ಯರಡೋಣಾ, ಅಕ್ಕಿ ಗಿರಣಿ ಮಾಲೀಕರ ಸಂಘದ ಸದಸ್ಯ ಕೆ. ವೆಂಕಾರೆಡ್ಡೆಪ್ಪ, ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಮಠದ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಮಹಾದಾಸೋಹಕ್ಕೆ 200 ಕ್ವಿಂಟಲ್‌ ಅಕ್ಕಿ ಕಳುಹಿಸಿಕೊಡಲಾಗಿದೆ. ಗುತ್ತಿಗೆದಾರರ ಸಂಘ, ನಾನಾ ಗ್ರಾಮಗಳ ರೈತರು, ಕಮ್ಮವಾರಿ ಸಂಘದಿಂದ ಇನ್ನೂ 300 ಕ್ವಿಂಟಲ್‌ ಸಂಗ್ರಹವಿದೆ. ಹಂತ-ಹಂತವಾಗಿ ಮಠದ ಮಹಾದಾಸೋಹಕ್ಕೆ ಅಕ್ಕಿ ಕಳುಹಿಸಿಕೊಡಲಾಗುವುದು. ಗವಿಶ್ರೀಗಳ ಕೃಪೆಯಿಂದ ರೈತರು, ವರ್ತಕರು, ಅಕ್ಕಿ ಗಿರಣಿ ಸೇರಿ ಎಲ್ಲರಿಗೂ ಗವಿಸಿದ್ದೇಶ್ವರ ಒಳಿತು ಮಾಡಲಿ ಎಂದರು.
 

click me!