ಆನೆಗೊಂದಿ ಉತ್ಸವ: 24 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ

By Suvarna News  |  First Published Jan 11, 2020, 9:11 AM IST

ಎರಡು ದಿನಗಳ ಆನೆಗೊಂದಿ ಉತ್ಸವಕ್ಕೆ ವೈಭವದ ತೆರೆ| ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಸೇರಿದಂತೆ ಆನೆಗೊಂದಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು| ಈಗಾಗಲೇ ರೋಪ್‌ವೇ ಕುರಿತು ಜಿಲ್ಲಾಡಳಿತ ಪ್ರಸ್ತಾವನೆ ಸಿದ್ಧಪಡಿಸಿದ್ದು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನದಿಂದ ಆದರೂ ಅನುಷ್ಠಾನ ಮಾಡಲಾಗುವುದು|


ಸೋಮರಡ್ಡಿ ಅಳವಂಡಿ

ಆನೆಗೊಂದಿ(ಜ.11): ಶ್ರೀಕೃಷ್ಣದೇವರಾಯ ವೇದಿಕೆ ದೇಶದ ಗಮನ ಸೆಳೆಯುತ್ತಿರುವ ಅಂಜನಾದ್ರಿ ಬೆಟ್ಟಕ್ಕೆ 24 ಕೋಟಿ ವೆಚ್ಚದಲ್ಲಿ ರೋಪ್ ವೇ ಶೀಘ್ರದಲ್ಲಿಯೇ ನಿರ್ಮಿಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಭರವಸೆ ನೀಡಿದ್ದಾರೆ.

Latest Videos

undefined

ಆನೆಗೊಂದಿ ಉತ್ಸವದ ನಿಮಿತ್ತ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಸೇರಿದಂತೆ ಆನೆಗೊಂದಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಬೆಟ್ಟ ಏರುವುದು ಕಷ್ಟವಾಗುತ್ತಿದೆ. ಈಗಾಗಲೇ ರೋಪ್‌ವೇ ಕುರಿತು ಜಿಲ್ಲಾಡಳಿತ ಪ್ರಸ್ತಾವನೆ ಸಿದ್ಧಪಡಿಸಿದ್ದು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನದಿಂದ ಆದರೂ ಅನುಷ್ಠಾನ ಮಾಡಲಾಗುವುದು. ಇದಕ್ಕಾಗಿ ಡಿಪಿಆರ್ ತಯಾರಿಸಿದ್ದು 24ಕೋಟಿ ಅಗತ್ಯವಾಗಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆನೆಗೊಂದಿಯಲ್ಲಿ ಹಂಪಿಯಂತೆ ಅನೇಕ ಐತಿಹಾಸಿಕ ಮತ್ತು ಪೌರಾಣಿಕ ಸ್ಥಳಗಳಿವೆ. ಜಗತ್ತಿನ ನಾಲ್ಕು ಸರೋವ ರಗಳಲ್ಲಿ ಒಂದಾಗಿರುವ ಪಂಪಾಸರೋವರ ಇಲ್ಲಿಯೇ ಇದೆ. ಹಂಪಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಆನೆಗೊಂದಿ ಭಾಗದಲ್ಲಿಯೇ 15 ಗ್ರಾಮಗಳು ಬರುತ್ತವೆ. ಹಂಪಿ ವ್ಯಾಪ್ತಿಯಲ್ಲಿ ಕೇವಲ 14 ಗ್ರಾಮಗಳು ಬರುತ್ತವೆ. ಆದರೆ, ಅನುದಾನ ಹಂಚಿಕೆ ಮತ್ತು ಅಭಿವೃದ್ಧಿಯಲ್ಲಿ ಆನೆಗೊಂದಿ ಪ್ರದೇಶವನ್ನು ಪ್ರಾಧಿಕಾರ ಕಡೆಗಣನೆ ಮಾಡುತ್ತಿದೆ. ಇಲ್ಲಿ ಅಭಿವೃದ್ಧಿ ಮಾಡುವುದು ಸೇರಿದಂತೆ ಯಾವುದಕ್ಕೂ ಅನುದಾನವನ್ನೇ ನೀಡುವುದಿಲ್ಲ. ಇದನ್ನು ಸರಿಪಡಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. 

ಪ್ರತಿ ವರ್ಷ ಆಚರಣೆ: 

ಆನೆಗೊಂದಿ ಉತ್ಸವ ಪ್ರತಿವರ್ಷ ಆಚರಿಸಲು ಸರ್ಕಾರ ಸಮ್ಮತಿ ನೀಡಿದೆ. ಆದರೆ, ಇದಕ್ಕೆ ದಿನಾಂಕ ನಿಗದಿಪಡಿಬೇಕು ಮತ್ತು ಪ್ರತಿ ವರ್ಷ ಯಾವುದೇ ಅಡ್ಡಿಯಾಗಬಾರದು. ಈ ಕುರಿತು ಸರ್ಕಾರದಲ್ಲಿ ನಿರ್ಣಯ ಕೈಗೊಳ್ಳುವ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರೊಂದಿಗೆ ಚರ್ಚಿಸಿದ್ದು ಸಮ್ಮಿತಿಸಿದ್ದಾರೆ. ಆನೆಗೊಂದಿ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಅದ್ಧೂರಿಯಾಗಿ ಯೂ ನಡೆದಿದೆ ಎಂದು ಸ್ಥಳೀಯರು ಬಣ್ಣಿಸುತ್ತಿದ್ದಾರೆ. ಜಿಲ್ಲಾಡಳಿತ ಅತ್ಯಂತ ಪರಿಶ್ರಮವಹಿಸಿ ಆಯೋಜಿಸಿದೆ. ಆದರೆ, ಇಂಥ ದೊಡ್ಡ ಉತ್ಸವಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆಗಿದ್ದರೇ ಮಣ್ಣಿಸಿ ಎಂದು ಹೇಳಿದರು. 

ಆಳ್ವಾಸ್ ನುಡಿ ಸಿರಿಯ ಕಾರ್ಯಕ್ರಮ, ಪ್ರಾಣೇಶ ಅವರ ಹಾಸ್ಯ, ವಿಜಯಪ್ರಕಾಶ ಅವರ ಹಾಡು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿವೆ. ಅರ್ಜುನ್ ಇಟಗಿ ಚಿಕ್ಕವನಾದರೂ ಎಲ್ಲರೂ ಬೆರಗಾಗುವಂತ ಕಾರ್ಯಕ್ರಮ ನೀಡಿದ್ದಾನೆ ಎಂದು ಸ್ಮರಿಸಿದರು. 

ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ , ಡಿಎಫ್‌ಒ ಯಶಫಾಲ್ ಕ್ಷೀರಸಾಗರ, ಸಿಇಒ ರಘುನಂದನ್ ಮೂರ್ತಿ, ಎಸ್ಪಿ ಜಿ. ಸಂಗೀತ, ಎಡಿಸಿ ಎಂ.ಬಿ. ಮಾರುತಿ, ಜಿಪಂ ಸಿಇಒ ಸಿ.ಡಿ. ಗೀತಾ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪೊಲೀಸ್ ಪಾಟೀಲ, ಜಿಪಂ ಸದಸ್ಯೆ ಜಿ. ಅನಿತಾ ಮಾರುತಿ, ತಾಪಂ ಸದಸ್ಯರನ್ನು ವೈ. ರಮೇಶ ಸಣಾಪೂರ, ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಅಂಜನಾದೇವಿ ಇದ್ದರು.

ಸಿಎಂ, ಸಚಿವರ ಗೈರು: ಜನರ ಆಕ್ರೋಷ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳ ಸಮಾರೋಪ ಸಮಾರಂಭಕ್ಕೆ ಗೈರು ಹಾಜರಿಯಾಗಿದ್ದರಿಂದ ಆನೆಗೊಂದಿ ಉತ್ಸವಕ್ಕೆ ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೈಭವಕ್ಕೆ ತೆರೆ ಎಳೆಯಲಾಯಿತು. 

ಉದ್ಘಾಟನಾ ಸಮಾರಂಭಕ್ಕೆ ತುರ್ತು ಕಾರ್ಯದ ನಿಮಿತ್ತ ಕೊನೆಗಳಿಗೆಯಲ್ಲಿ ಯಡಿಯೂರಪ್ಪ ಅವರ ಕಾರ್ಯಕ್ರಮ ರದ್ದಾಯಿತು. ಇದಾದ ಮೇಲೆ ಸಮಾರೋಪ ಸಮಾರಂಭಕ್ಕೆ ಆಗಮಿಸುತ್ತಾರೆ ಎನ್ನುವ ಸುದ್ದಿ ಹರಡಿತು. ಇದಕ್ಕಾಗಿ ಸ್ಥಳೀಯ ಶಾಸಕರು ಸೇರಿದಂತೆ ಆಡಳಿತ ವರ್ಗವೂ ರಾತ್ರಿ 8 ಗಂಟೆ ವರೆಗೂ ಕಾಯಿತಾದರೂ ಯಡಿಯೂರಪ್ಪ ಆಗಮಿಸಲೇ ಇಲ್ಲ. ಇದರ ಬೇಸರದ ನಡುವೆಯ ಸಮಾರೋಪ ಸಮಾರಂಭ ಶಾಸಕ ಪರಣ್ಣ ಮುನವಳ್ಳಿ ಉಪಸ್ಥಿತಿಯಲ್ಲಿಯೇ ನಡೆಯಿತು. ಹಂಪಿಗೆ ಯಡಿಯೂರಪ್ಪ ಆಗಮಿಸಿದ ಹಿನ್ನೆಲೆ ಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಆನೆಗೊಂದಿಗೆ ಬರದೆ ಹಂಪಿಗೆ ತೆರಳಿದರು. ಅನಿವಾರ್ಯವಾಗಿ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಸಮಾರೋಪ ಭಾಷಣ ಮಾಡಿದರು. ಯಡಿಯೂರಪ್ಪ ಅವರು ಅನಿವಾರ್ಯ ಕಾರಣಗಳಿಂದ ಬರಲು ಆಗಲಿಲ್ಲ ಎಂದು ತೇಪೆ ಹಚ್ಚಿದರು. 

ತೀವ್ರ ಆಕ್ರೋಶ: 

ಯಡಿಯೂರಪ್ಪ ಆನೆಗೊಂದಿ ಉತ್ಸವಕ್ಕೆ ಆಗಮಿಸದೆ ಹಂಪಿ ಉತ್ಸವಕ್ಕೆ ಆಗಮಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಆನೆಗೊಂದಿ ಉತ್ಸವ ಕುರಿತು ಮಲತಾಯಿ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ ಎನ್ನುವ ಆರೋಪ ಮತ್ತೆ ನಿಜವಾಯಿತು. ಉತ್ಸವಕ್ಕೆ ಸರ್ಕಾರ ಅನುದಾನ ನೀಡುವಲ್ಲಿಯೂ ತಾರತಮ್ಯ ಮಾಡಿದೆ. ಗಣ್ಯರು ಆಗಮಿಸುವಲ್ಲಿಯೂ ತಾರತಮ್ಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿತು. 

ವೈಭವದ ತೆರೆ: 

ಈ ನಡುವೆಯೂ ನಿಗದಿಯಂತೆ ಸಾಂಸ್ಕೃತಿ ಕಾರ್ಯಕ್ರಮಗಳ ಅದ್ಧೂರಿ ಪ್ರದರ್ಶನ ಗೊಂದಿಗೆ ವೈಭವಯುತವಾಗಿಯೇ ಆನೆಗೊಂದಿ ಉತ್ಸವಕ್ಕೆ ತೆರೆ ಎಳೆಲಾಯಿತು. ಎರಡು ದಿನಗಳ ಅದ್ಧೂರಿ ಕಾರ್ಯಕ್ರಮ ಹಾಗೂ ವಾರಪೂರ್ತಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಅನುಭವಿಸಿದ ಸಹಸ್ರ ಸಹಸ್ರ ಜನರು ಬೇಸರದ ನಡುವೆಯೇ ಮೆಚ್ಚುಗೆ ವ್ಯಕ್ತಪಡಿಸಿದರು.
 

click me!